HOSANAGARA ; ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆಯಲ್ಲಿ ಸುಮಾರು 3500 ವರ್ಷ ಹಳೆಯದಾದ ನವಶಿಲಾಯುಗ ಕಾಲದ ಡೋಲೆರೈಟ್ ಕಲ್ಲಿನ ಉಂಗುರ ಪತ್ತೆಯಾಗಿದೆ.
ನವಶಿಲಾಯುಗ ಕಾಲದ ಅತ್ಯಂತ ಅಮೂಲ್ಯವಾದ ಡೋಲೆರೈಟ್ ಕಲ್ಲಿನ ಉಂಗುರವು ಹಿಂಡ್ಲೆಮನೆಯ ಸ.ಕಿ.ಪ್ರಾ.ಶಾಲೆಯ ಆವರಣದಲ್ಲಿ ಶಿಕ್ಷಕ ಹನುಮಂತಪ್ಪ ಎಂಬುವರಿಗೆ ಪತ್ತೆಯಾಗಿರುವುದು ಈ ಪ್ರದೇಶದಲ್ಲಿ ಮೊದಲು ಜನವಸತಿ ಆರಂಭವಾಗಿರುವುದಕ್ಕೆ ಜೀವಂತ ಸಾಕ್ಷಿಯಾಗಿದೆ. ಈ ಅವಧಿಯಲ್ಲಿ ನೆಲೆಗೊಂಡ ಮಾನವನ ಜೀವನಶೈಲಿಯ ಆರಂಭದ ದಿನಗಳನ್ನು ಇದರಿಂದ ತಿಳಿಯಬಹುದಾಗಿದೆ. ಈ ಸ್ಥಳವು ಹೊಸನಗರ ಪಟ್ಟಣದಿಂದ ಸುಮಾರು 20 ಕಿ.ಮೀ. ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 55 ಕಿ.ಮೀ. ದೂರದಲ್ಲಿದೆ.
ಈ ಕುರಿತು ‘ಮಲ್ನಾಡ್ ಟೈಮ್ಸ್’ಗೆ ಮಾಹಿತಿ ನೀಡಿದ ಇತಿಹಾಸ ಸಂಶೋಧಕ ಅಜಯ್ ಶರ್ಮ, ಕಬ್ಬಿಣದ ಆವಿಷ್ಕಾರಕ್ಕೂ ಮೊದಲು ತಯಾರಿಸಲಾದ ಈ ಕಲ್ಲಿನ ಉಂಗುರವನ್ನು ಅಗೆಯಲು ಮತ್ತು ಮೀನು ಹಿಡಿಯಲು ಬಲೆಗಳನ್ನು ನೀರಿನಲ್ಲಿ ಮುಳುಗಿಸಲು ಒಂದು ತೂಕವಾಗಿ ಮತ್ತು ಮಣಿಗಳಿಗೆ ಹೊಳಪು ಕೊಡಲು ಆಧಾರವಾಗಿ ಬಳಸಲಾಗುತ್ತಿತ್ತು.
ನವಶಿಲಾಯುಗದ ಅವಧಿಯು ನೆಲೆಗೊಂಡ ಮಾನವ ಜೀವನಶೈಲಿಯ ಆರಂಭದಿಂದ ನಿರೂಪಿಸಲ್ಪಟ್ಟಿದೆ. ಜನರು ಕೇವಲ ಬೇಟೆ ಮತ್ತು ಸಂಗ್ರಹಣೆಯ ಮೇಲೆ ಅವಲಂಬಿತರಾಗುವುದಕ್ಕಿಂತ ಹೆಚ್ಚಾಗಿ ಸಸ್ಯಗಳನ್ನು ಬೆಳೆಸಲು ಮತ್ತು ಆಹಾರಕ್ಕಾಗಿ ಪ್ರಾಣಿಗಳನ್ನು ಸಾಕಲು ಕಲಿಯುತ್ತಾರೆ. ಇದು ಹೆಚ್ಚು ಅತ್ಯಾಧುನಿಕ ಕಲ್ಲಿನ ಉಪಕರಣಗಳ ಬಳಕೆಗೆ ಹೊಂದಿಕೆಯಾಗಿದ್ದು, ಕೃಷಿ ಮತ್ತು ಪ್ರಾಣಿಗಳ ಹಿಂಡಿಗೆ ಉಪಯುಕ್ತವಾಗಿತ್ತು.
ಶಾಲೆಯ ಬಳಿ ಪತ್ತೆಯಾದ ಈ ಕಲ್ಲು ಕ್ರಿ.ಪೂ. 1500 – ಕ್ರಿ.ಪೂ.800 (ಸಾಮಾನ್ಯ ಯುಗದ ಮೊದಲು) ವರ್ಷ ಹಿಂದಿನದು ಅಂದರೆ ಸುಮಾರು 3500 ವರ್ಷ ಹಿಂದಿನದು ಎಂದು ಅಧ್ಯಯನದಿಂದ ಕಂಡುಬಂದಿದೆ ಎಂದು ತಿಳಿಸಿದರು.
ಕಲ್ಲು ಸಿಕ್ಕಿರುವ ಈ ಪ್ರದೇಶದಿಂದ ಸುಮಾರು 1 ಕಿ.ಮೀ. ದೂರದಲ್ಲಿ ಶರ್ಮಿಣ್ಯಾವತಿ ಎಂಬ ನದಿಯು ದಕ್ಷಿಣದಿಂದ ಉತ್ತರಕ್ಕೆ ಹರಿಯುತ್ತ ಶರಾವತಿ ನದಿಯನ್ನು ಸೇರುತ್ತದೆ.
ಕಳೆದ ಕೆಲ ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಗುಂದ ಹೋಬಳಿ ವ್ಯಾಪ್ತಿಯ ಅಗಳಗಂಡಿ ಗ್ರಾಮದ ನವಿಲರೆಕಲ್ಲು ಎಂಬಲ್ಲಿ ಇದೆ ರೀತಿಯ ಸುಮಾರು 6000 ವರ್ಷ ಹಿಂದಿನ ಕಾಲದ ಕಲ್ಲು ಪತ್ತೆಯಾಗಿತ್ತು.