HOSANAGARA ; ತಾಲೂಕಿನಲ್ಲಿ ಅರ್ಹರಿಗೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಗ್ಯಾರಂಟಿ ಯೋಜನೆಗಳ ಫಲ ದೊರೆಯಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಮರೋಪಾದಿ ಕಾರ್ಯ ನಿರ್ವಹಿಸಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಬಿ.ಚಿದಂಬರ ಎಚ್ಚರಿಕೆ ನೀಡಿದರು.
ಇಲ್ಲಿನ ತಾಲೂಕು ಪಂಚಾಯತಿ ಆವರಣದ ಗ್ಯಾರಂಟಿ ಯೋಜನೆ ಅನುಷ್ಠಾನ ಕಚೇರಿಯಲ್ಲಿ ನಡೆದ ತಾಲೂಕು ಮಟ್ಟದ 6ನೇ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 19 ತಿಂಗಳು ಕಳೆದಿವೆ. ಯೋಜನೆಯ ಫಲ ಅರ್ಹರಿಗೆ ದೊರೆಯಲು ಅಧಿಕಾರಿಗಳ ಸಹಕಾರ ಅಗತ್ಯವಿದೆ. ಸಿಬ್ಬಂದಿಗಳು ತಾಲೂಕಿನ ಪ್ರತಿ ಗ್ರಾಮದ ಮನೆಮನೆಗೂ ತೆರಳಿ ವಿವರ ಸಂಗ್ರಹಿಸಿ ಅರ್ಹರಿಗೆ ಯೋಜನೆಯ ನೆರವು ದೊರೆಯುವಂತೆ ಕ್ರಮಕೈಗೊಳ್ಳಬೇಕು. ಯೋಜನೆ ವಂಚಿತರಿಗೆ ಸೂಕ್ತ ಕಾರಣ ಹುಡುಕಿ ಮುಂದಿನ ಪ್ರಗತಿ ಸಭೆಯಲ್ಲಿ ವರದಿ ನೀಡಬೇಕೆಂದರು. ಈ ಕುರಿತು ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು ಎಂದರು.
ಸಿಡಿಪಿಒ ಗಾಯತ್ರಿ ರಾಮಚಂದ್ರ ಮಾತನಾಡಿ, ತಾಲೂಕಿನಲ್ಲಿ ಒಟ್ಟು 29,011 ಪಡಿತರ ಚೀಟಿ ಹೊಂದಿದ್ದು, ಗೃಹಲಕ್ಷ್ಮೀ ಯೋಜನೆಗೆ 26,558 ಅರ್ಜಿ ನೊಂದಣಿಯಾಗಿದೆ. 2453 ಪಡಿತರ ಚೀಟಿದಾರರೂ ಈವರೆಗು ಅರ್ಜಿ ಸಲ್ಲಿಸಿಲ್ಲ. ಈವರೆಗೆ ಒಟ್ಟು 26,300 ಜನ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿದ್ದಾರೆ. 265 ಜನ ಫಲಾನುಭವಿಗಳ ಪೈಕಿ 125 ಜನರಿಗೆ ಹಣ ಸಂದಾಯವಾಗಿದ್ದು, ಸುಮಾರು 140 ಜನರಿಗೆ ಬ್ಯಾಂಕ್ ಅಕೌಂಟಿಗೆ ಆಧಾರ್ ಲಿಂಕ್ ಆಗದ ಕಾರಣ ಹಣ ಜಮಾ ಆಗಿಲ್ಲ. ಒಟ್ಟು 146 ಫಲಾನುಭವಿ ಮರಣ ಹೊಂದಿದ್ದು, 69 ಜನರ ಡೆತ್ ಅಪ್ಲಿಕೇಶನ್ ಹಾಕಿದ್ದರೂ ಬಿಲ್ಲಿಂಗ್ ಗೆ ಹೋಗಿದೆ. 36 ಫಲಾನುಭವಿಗಳ ಹೆಸರು ಬದಲಾವಣೆ ಆಗಿಲ್ಲ. 41 ಜನರ ಹೆಸರು ಬದಲಾವಣೆಗೆ ಕುಟುಂಬದ ಮತ್ತೊಬ್ಬ ಯಜಮಾನಿ ಸದಸ್ಯರು ಅರ್ಜಿ ಸಲ್ಲಿಸಿದ್ದಾರೆ. ಎಲ್ಲಾ ಮೃತ ಫಲಾನುಭವಿಗಳ ಮಾಹಿತಿಯನ್ನು ಇದುವರೆಗೆ ಆನ್ಲೈನ್ನಲ್ಲಿ ದಾಖಲಿಸಲಾಗಿದೆ. ಐಟಿ/ಜಿಎಸ್ಟಿ ಪಾವತಿ ಹಿನ್ನಲೆಯಲ್ಲಿ 268 ಫಲಾನುಭವಿಗಳ ಗೃಹಲಕ್ಷ್ಮೀ ತಿರಸ್ಕೃತಗೊಂಡಿದೆ ಎಂಬ ಮಾಹಿತಿಯನ್ನು ಸಭೆಗೆ ನೀಡಿದರು.
ಮೆಸ್ಕಾಂ ಸಿಬ್ಬಂದಿ ಮಾತನಾಡಿ, ಈವರೆಗೆ ತಾಲೂಕಿನಲ್ಲಿ ಒಟ್ಟು 35,219 ವಿದ್ಯುತ್ ಗೃಹಬಳಕೆದಾರರಿದ್ದು, ಗೃಹಜ್ಯೋತಿ ಯೋಜನೆಯ ಬಳಕೆದಾರರ ಸಂಖ್ಯೆ 32,344 ಆಗಿದೆ. ಈವರೆಗೂ 2875 ಮಂದಿ ಯೋಜನೆಯಿಂದ ದೂರವೇ ಉಳಿದಿದ್ದಾರೆ. ಪ್ರಸಕ್ತ ಗೃಹಜ್ಯೋತಿ ಯೋಜನೆಯಿಂದ ತಾಲೂಕಿನಲ್ಲಿ 13,32,013 ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದ್ದು, ಫಲಾನುಭವಿಗಳಿಗೆ ಒಟ್ಟಾರೆ ರೂ. 1,15,49,329 ಸಬ್ಸಿಡಿ ದೊರೆತಿದೆ ಎಂದರು.
ಯೂವನಿಧಿ ಯೋಜನೆ ಅಡಿಯಲ್ಲಿ ನವೆಂಬರ್ ಅಂತ್ಯಕ್ಕೆ 336 ಪದವಿ, ಎರಡು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ರೂ 10,11,000 ಹಣ ಸಂದಾಯ ಆಗಿದೆ ಎಂಬ ಮಾಹಿತಿ ಸಭೆಗೆ ತಿಳಿಸಿದರು.
ಆಹಾರ ಇಲಾಖೆಯ ನಿರೀಕ್ಷಕ ನಾಗರಾಜ್ ಮಾತನಾಡಿ, ತಾಲೂಕಿನ ಒಟ್ಟಾರೆ 25,518 ಪಡಿತರ ಚೀಟಿ ಹೊಂದಿದ್ದು, 4227 ಅಂತ್ಯೋದಯ ಕಾರ್ಡ್ ಹೊಂದಿದ್ದು ಕಳೆದ ಆಗಸ್ಟ್ ವರೆಗೂ ಅನ್ನಭಾಗ್ಯ ಹಣ ಫಲಾನುಭವಿಗಳಿಗೆ ಸಂದಾಯವಾಗಿದೆ. 570 ಫಲಾನುಭವಿಗಳಿಗೆ ನಾಲ್ಕು ತಿಂಗಳ ಹಣ ಜಮಾ ಆಗಬೇಕಿದೆ ಎಂದರು.
ಸಭೆಯಲ್ಲಿ ಇಒ ನರೇಂದ್ರ ಕುಮಾರ್, ಸಮಿತಿ ಸದಸ್ಯರಾದ ರಮೇಶ್, ಮಹೇಂದ್ರ ಬುಕ್ಕಿವರೆ, ಸಿಂಥಿಯಾ ಶೆರಾವ್, ಪೂರ್ಣಿಮಾ ಮೂರ್ತಿ, ಕೆರೆಹಳ್ಳಿ ಗುರು, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಂ.ಕೆ.ಸುರೇಶ್ ಸೇರಿದಂತೆ ಹಲವರು ಹಾಜರಿದ್ದರು.