ದಕ್ಷ, ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತದಿಂದ ಮಾತ್ರವೇ ಯಶಸ್ಸು ; ಆರ್.ಎಂ.ಎಂ.

Written by malnadtimes.com

Published on:

HOSANAGARA ; ಅಭಿವೃದ್ದಿ ಇದ್ದಲ್ಲಿ ಮಾತ್ರವೇ ಎದುರಾಳಿಗಳ ಹುಟ್ಟಿಗೆ ಕಾರಣ ಎಂಬಂತೆ ಇತ್ತೀಚಿಗೆ ಪಟ್ಟಣದ ಕಳೂರು ಶ್ರೀ ರಾಮೇಶ್ವರ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯು ಜಲ್ವಂತ ಸಾಕ್ಷೀಯಾಗಿದೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಹಕಾರಿ ಧುರೀಣ ಡಾ. ಆರ್. ಎಂ. ಮಂಜುನಾಥಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now

2025ರ ಹೊಸವರ್ಷದ ಮೊದಲ ದಿನವೇ ಇಲ್ಲಿನ ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ 2.5 ಕೋಟಿ ರೂ. ಅನುದಾನದಲ್ಲಿ ಪಟ್ಟಣದ ಬಸ್ ನಿಲ್ದಾಣದ ಸಮೀಪ ನಿರ್ಮಿಸುತ್ತಿರುವ ವಿಶಾಲ, ಸುಸಜ್ಜಿತ ನೂತನ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ 2024ರ ಡಿಸೆಂಬರ್ 28 ರಿಂದ 30ರ ವರೆಗೆ ಮೂರು ದಿನಗಳ ಕಾಲ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ, ಅದರಲ್ಲೂ ಶೇ. 90 ರಷ್ಟು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ ಪಟ್ಟಣದ ಪ್ರತಿಷ್ಠಿತ ಕಳೂರು ಶ್ರೀ ರಾಮೇಶ್ವರ ಸಹಕಾರಿ ಸಂಘವು ಒಂದು. ಸಂಘದ ನಿಕಟಪೂರ್ವ ಅಧ್ಯಕ್ಷ, ಹಾಲಿ ನಿರ್ದೇಶಕ ಡಿ.ಆರ್. ವಿನಯಾಕುಮಾರ್ ನೇತೃತ್ವದ ತಂಡ ಭಾರೀ ಗೆಲುವು ದಾಖಲಿಸುವ ಮೂಲಕ ಯಶಸ್ಸು ಕಂಡಿದೆ. ಜಿಲ್ಲೆಯ ಇತ್ತೀಚಿನ ಯುವ ಸಹಕಾರಿಗಳಲ್ಲಿ ದುಮ್ಮ ವಿನಯ್ ಕುಮಾರ್ ಸಹ ಓರ್ವ. ಆತ ಅಧ್ಯಕ್ಷನಾಗಿರುವ ತುಂಗಾ ಸೌಹಾರ್ದ ಅಡಿಕೆ ಸಹಕಾರಿ ಸಂಘವು ಸಹ ಲಾಭದಾಯಕವಾಗಿದೆ. ಕಳೂರು ಶ್ರೀ ರಾಮೇಶ್ವರ ಸಂಘದ ಅಧ್ಯಕ್ಷರಾಗಿ ಕಳೆದ ಸಾಲಿನಲ್ಲಿ ಆತ ರೈತಾಪಿ ವರ್ಗಕ್ಕೆ ಅನುಕೂಲ ಆಗುವ ರೀತಿಯಲ್ಲಿ ದಕ್ಷ, ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತ ನೀಡಿದ್ದು, ಈ ಬಾರಿ ಚುನಾವಣಾ ಯಶಸ್ಸಿಗೆ ಕಾರಣವಾಯ್ತು. ಅಲ್ಲದೇ, ವಿನಯ್ ಕುಮಾರ್ ಮುಂದಾಳತ್ವದಲ್ಲಿ ಜಿಲ್ಲೆಯಲ್ಲೇ ಅತ್ಯಂತ ಬಹುದೊಡ್ಡ ಸಂಘದ ವ್ಯವಸ್ಥಿತ ಕಟ್ಟಡ ನಿರ್ಮಾಣವಾಗುತ್ತಿದೆ. ಇದು ವಿರೋಧಿಗಳ ಕೆಂಗಣ್ಣಿಗೆ ಗುರಿಯಾದ ಕಾರಣಕ್ಕೆ ಈ ಬಾರಿ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆ ರಂಗೇರಲು ಕಾರಣವೆಂದರು.

ಸಂಘವು ತಾಲೂಕಿನ ರೈತರಿಗೆ ಬೇಕಾಗುವ ಎಲ್ಲಾ ರೀತಿಯ ಅಗತ್ಯ ಗೊಬ್ಬರ, ಔಷಧೋಪಚಾರ ಪೂರೈಕೆ ಮಾಡುತ್ತಿದ್ದು, ದಿನಸಿ ವಿತರಣೆ ಸೇರಿದಂತೆ ವಾಣಿಜ್ಯ ಹೊಸ ಸಂಕಿರ್ಣ ನಿರ್ಮಿಸುವ ಗುರಿ ಹೊಂದಿದ್ದು ರೈತಪರ ನಿಲುವು ಹೊಂದಿದೆ ಎಂದರು.

ಈ ಬಾರಿ ನಡೆದ ಚುನಾವಣೆಯಿಂದ ವಿನಯ್ ಕುಮಾರ್ ಹಾಗೂ ಅವರ ತಂಡದ ಶಕ್ತಿ ಜನರಿಗೆ ಅರ್ಥವಾಗಿದ್ದು, ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಸಲ್ಲದು ಎಂಬ ಕಿವಿಮಾತು ಹೇಳಿದರು.

ಪ್ರಶಂಸೆ :

ಹಿಂದಿನ ಬಾರಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ದುಮ್ಮ ವಿನಯ್‌ಕುಮಾರ್‌ ಸಹಕಾರಿ ಕ್ಷೇತ್ರಕ್ಕೆ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದು ಹೆಸರು ಪಡೆದಿದ್ದಾರೆ. ಕಳೂರು ಸೊಸೈಟಿಯ ಅಧ್ಯಕ್ಷರಾಗಿ ರೈತರಿಗೆ ಬೆನ್ನೆಲುಬಾಗಿ ಕೆಲಸ ಮಾಡಿದ್ದು ಕೆಲಸದ ಜೊತೆಗೆ 2.25ಕೋಟಿ ರೂ. ವೆಚ್ಚದ ಕಳೂರು ಸೊಸೈಟಿ ನೂತನ ಕಟ್ಟಡಕ್ಕೂ ಕೈ ಹಾಕಿದ್ದಾರೆ. ನೂತನ ಕಟ್ಟಡ ಕಾಮಾಗಾರಿ ಮುಗಿಯುತ್ತಾ ಬಂದಿದ್ದು ಶೀಘ್ರದಲ್ಲಿಯೇ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಇವರ ಕೆಲಸ ನೋಡಿ ಷೇರುದಾರರು ಇವರನ್ನು ಅತ್ಯಂತ ಹೆಚ್ಚಿನ ಮತಗಳಿಂದ ಗೆಲ್ಲಿಸಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಅಥವಾ ಬೆರೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡದವರ ಮೇಲೆ ಕಣ್ನು ಬೀಳುವುದು ಸಹಜ ಅದನ್ನು ಮೆಟ್ಟಿನಿಂತು ಕೆಲಸ ಮಾಡಬೇಕು ಅದನ್ನು ದುಮ್ಮ ವಿನಯ್‌ಕುಮಾರ್‌ ಮಾಡಿ ತೋರಿಸಿದ್ದಾರೆ. ಅದೇ ರೀತಿ ಗುಬ್ಬಿಗಾ ರವಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು ಹೆಚ್ ಶ್ರೀನಿವಾಸ್‌ ಈ ಹಿಂದೆ ಸೊಸೈಟಿಯ ಕಾರ್ಯದರ್ಶಿಯಾಗಿ ಸೇವೆ ಮಾಡಿರುವ ಅನುಭವವಿರುವುದರಿಂದ ಈಗ ಕಳೂರು ಸೊಸೈಟಿಗೆ ಆಯ್ಕೆಯಾಗಿರುವ ನಿರ್ದೇಶಕರ ತಂಡ ಉತ್ತಮ ಕೆಲಸಗಾರರ ತಂಡವಾಗಿದ್ದು ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ಮಾಡಿ ಹೊಸನಗರ ತಾಲ್ಲೂಕಿನ ರೈತರಿಗೆ ಎಲ್ಲ ರೀತಿಯಲ್ಲಿಯೂ ಅನುಕೂಲಕರ ವಾತಾವರಣ ಸೃಷ್ಠಿಸಲಿದ್ದಾರೆ ಎಂಬ ನಂಬಿಕೆ ಇದ್ದು ಇವರಿಗೆ ಎಲ್ಲ ರೀತಿಯ ಸಹಕಾರ ನಾವು ನೀಡಲಿದ್ದೇವೆ ಎಂದರು.

ಈ ವೇಳೆ ಸಂಘದ ನೂತನ ನಿರ್ದೇಶಕರಾದ ಸೀಗೆಕೊಪ್ಪ ವಿರುಪಾಕ್ಷಿ, ಗುಬ್ಬಿಗ ರವಿ, ಹೆಚ್. ಶ್ರೀನಿವಾಸ್, ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜುನಾಥ, ಬ್ರಹ್ಮೇಶ್ವರ ಸುಧೀರ್, ಉದಯ್ ಗೌಡ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ವಾರಂಬಳ್ಳಿ ಹಾಲಪ್ಪ, ಹುಲಿ ಕೃಷ್ಣಮೂರ್ತಿ, ಶಿವಕುಮಾರ್, ವ್ಯವಸ್ಥಾಪಕ ವೀರೇಂದ್ರ ಮೊದಲಾದವರು ಹಾಜರಿದ್ದರು.

Leave a Comment