HOSANAGARA ; ರಿಪನ್‌ಪೇಟೆ ಮೆಸ್ಕಾಂ ಇಲಾಖೆಯ ವಿದ್ಯುತ್ ಗುತ್ತಿಗೆದಾರ ನಾಗರಾಜ ಕೆ.ಹೆಚ್, ದುಂಡಾರ್ತನೆ ಹಾಗೂ ಇಲಾಖೆಗೆ ನಷ್ಟಪಡಿಸಿರುವುದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಚಿಕ್ಕಜೇನಿ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಶಶಿಕುಮಾರ್ ಹೊಸನಗರದ ಮೆಸ್ಕಾಂ ಇಲಾಖೆಗೆ ದೂರು ಸಲ್ಲಿಸಿ ತನಿಖೆಗೆ ಒತ್ತಾಯಿಸಿದ್ದಾರೆ.
ದೂರಿನಲ್ಲಿ ಚಿಕ್ಕಜೇನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಜೇನಿ ಗ್ರಾಮದ ಸರ್ವೆ ನಂ. 31 ರಲ್ಲಿ ಜ.01 ರಂದು ವಿದ್ಯುತ್ ಮಾರ್ಗದ ಮೇಲೆ ಒಣಗಿದ ಮರದ ರೆಂಬೆಯು ಗಾಳಿಗೆ ಮುರಿದು ಬಿದ್ದು 1 ಪಿಎಸ್‌ಇ ವಿದ್ಯುತ್ ಕಂಬ ಮುರಿದು ಹೋಗಿರುತ್ತದೆ. ಇದನ್ನು ನಾನು ಮೆಸ್ಕಾಂ ಇಲಾಖೆ ರಿಪ್ಪನ್‌ಪೇಟೆ ಸೆಕ್ಷನ್ ಸಹಾಯಕ ಇಂಜಿನಿಯರ್ ಆದ ಅಶ್ವಲ್‌ರ ಗಮನಕ್ಕೆ ತಂದಿರುತ್ತೇವೆ. ನಂತರ ಜ. 03 ರಂದು 2 ವಿದ್ಯುತ್ ಕಂಬಗಳನ್ನು ಕೆ.ಎ-15ಎ-6253 ಸಂಖ್ಯೆಯ ವಾಹನದಲ್ಲಿ ತೆಗೆದುಕೊಂಡು ವಿದ್ಯುತ್ ಕಂಬ ಮುರಿದ ಸ್ಥಳಕ್ಕೆ ಬಂದಿರುವುದನ್ನು ಗಮನಿಸಿ ಪುನಃ ಅಂದೇ ರಿಪ್ಪನ್‌ಪೇಟೆ ಸಹಾಯಕ ಇಂಜಿನಿಯರ್ ಗಮನಕ್ಕೆ ತಂದು, ನೀವು ಸ್ಥಳ ಮಹಜರು ಮಾಡಿದ್ದೀರಾ? ಎಂದು ಪ್ರಶ್ನಿಸಿ, ಅದಕ್ಕೆ ಸಂಬಂಧಿಸಿದಂತೆ ಯೋಜನಾ ವರದಿಯನ್ನು ಸಿದ್ಧಪಡಿಸಿದ್ದೀರಾ? ಎಂದು ನಾನು ಪ್ರಶ್ನಿಸಿದಾಗ, ಅದಕ್ಕೆಲ್ಲ ನಾವು ಘಟನೆ ನಡೆದ ಸ್ಥಳಕ್ಕೆ ಬರುವ ಅವಶ್ಯಕತೆ ಇಲ್ಲ, 2 ಕಂಬ ಮುರಿದ ಫೋಟೋ ಕಳಿಸಿರುತ್ತಾರೆ, ಅದನ್ನು ನೋಡಿ ನಾವು 2 ಕಂಬ ಕಳಿಸಿರುತ್ತೇವೆ ಎಂಬ ಹಾರಿಕೆ ಉತ್ತರವನ್ನು ನೀಡಿರುತ್ತಾರೆ. 1 ಕಂಬ ಮಾತ್ರ ಮುರಿದಿದೆ ಎಂದು ನಾವು ಹೇಳಿ ಮನವರಿಕೆ ಮಾಡಿದರೂ ಸಹ ಸಹಾಯಕ ಇಂಜಿನಿಯರ್‌ರವರು ಸ್ಪಂದಿಸದೆ ಗುತ್ತಿಗೆದಾರರ ಪರವಾಗಿ ನಿಂತಿರುತ್ತಾರೆ.
ನಂತರ ಗುತ್ತಿಗೆದಾರನು ದುರಸ್ತಿಯಾಗಿದ್ದ 1 ಕಂಬದ ಜೊತೆಗೆ ಸುಸ್ಥಿತಿಯಲ್ಲಿದ್ದ ಇನ್ನೊಂದು ಕಂಬವನ್ನು ಸಹ ತನ್ನ ಕೆಲಸಗಾರರೊಂದಿಗೆ ಫೋನ್ ಮೂಲಕ ಮಾತನಾಡಿ, ಸುಸ್ಥಿತಿಯಲ್ಲಿದ್ದ ಇನ್ನೊಂದು ಕಂಬವನ್ನು ಕೀಳಲು ಬಂದರೆ ಕಿತ್ತು ತೆಗೆಯಿರಿ ಇಲ್ಲದಿದ್ದರೆ ಗುದ್ದಿ ಮುರಿದು ಹಾಕು ಎಂದು ತನ್ನ ಮೊಬೈಲ್ ಮೂಲಕ ತನ್ನ ಕೆಲಸಗಾರರಿಗೆ ಸೂಚನೆ ನೀಡಿರುತ್ತಾನೆ. ನಂತರ ತೋಟದಲ್ಲಿ ಹಾದುಹೋಗಿರುವಂತ ವಿದ್ಯುತ್ ತಂತಿಗಳಿಗೆ ಡ್ರಿಪ್ ಪೈಪನ್ನು ಅಳವಡಿಸಿಕೊಳ್ಳಲು ರೈತರಿಂದ ಹಣದ ಬೇಡಿಕೆ ಇಟ್ಟಿದ್ದಾನೆ. ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಿರ್ವಹಿಸಿ ಸರಿ ಇರುವ ಹಳೆ ಕಂಬವನ್ನು ತೆರವುಗೊಳಿಸಿ, ಅದನ್ನು ತನ್ನ ವಾಹನದಲ್ಲಿ ತೆಗೆದುಕೊಂಡು ಹೋಗುವ ಪ್ರಯತ್ನದಲ್ಲಿದ್ದಾಗ ಗ್ರಾಮಸ್ಥರು ಅದನ್ನು ನೋಡಿ ವಿರೋಧ ವ್ಯಕ್ತಪಡಿಸಿದಾಗ, ಸ್ವತಃ ಗುತ್ತಿಗೆದಾರನಾದ ನಾಗರಾಜ ಕೆ.ಹೆಚ್ ರೈತರು ಹಾಗೂ ಗ್ರಾಮಸ್ಥರ ಮೇಲೆ ದರ್ಪ ಮೆರೆದಿರುತ್ತಾರೆ.
ನಂತರ ಆ ಸ್ಥಳೀಯರ ಒತ್ತಡ ಹೆಚ್ಚಾದ ನಂತರ ತನ್ನ ವಾಹನದ ಮೇಲೆ ತೆಗೆದುಕೊಂಡು ಹೊರಟ್ಟಿದ್ದಂತಹ ಸುಸ್ಥಿತಿಯಲ್ಲಿ ಪಿಎಸ್‌ಇ ವಿದ್ಯುತ್ ಕಂಬವನ್ನು ಕೆಳಗೆ ಇಳಿಸುವ ಸಂದರ್ಭದಲ್ಲಿ ಸೈಜ್ ಕಲ್ಲನ್ನು ಇಟ್ಟು, ಹಾರೆಕೋಲಿನಿಂದ ಕಂಬವನ್ನು ಸ್ವತಃ ನಿಂತು ತನ್ನ ಕೆಲಸಗಾರರ ಮೂಲಕ ಮುರಿದುಹಾಕಿಸಿರುತ್ತಾನೆ. ಇದಕ್ಕೆ ಸಂಬಂಧಪಟ್ಟಂತಹ ಸಂಪೂರ್ಣ ಆಡಿಯೋ, ವಿಡಿಯೋಗಳು ನನ್ನ ಬಳಿ ಇವೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/15vGZo49BF
ಈ ರೀತಿಯಾಗಿ ಕಾನೂನುಬಾಹಿರವಾಗಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಇಲಾಖೆಗೆ ನಷ್ಟಪಡಿಸಿರುವುದಲ್ಲದೆ ಗ್ರಾಮಸ್ಥರು ಮತ್ತು ರೈತರ ಮೇಲೆ ದುಂಡಾವರ್ತನೆ, ಗೂಂಡಾಗಿರಿ ವರ್ತನೆ ತೋರಿಸಿರುವ ನಾಗರಾಜ ಕೆ.ಹೆಚ್ ಈತನ ಮೇಲೆ ಇಲಾಖೆಯು ಗಂಭೀರವಾದ ಕ್ರಮವನ್ನು ತೆಗೆದುಕೊಂಡು ಈತನನ್ನು ಗುತ್ತಿಗೆದಾರರ ಪಟ್ಟಿಯಿಂದ ತೆಗೆದು ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕೆಂದು ಹಾಗೂ ಇಲಾಖೆಗೆ ಮಾಡಿರುವ ನಷ್ಟವನ್ನು ಈತನಿಂದ ಸಂಪೂರ್ಣವಾಗಿ ಭರಿಸಿಕೊಳ್ಳಬೇಕೆಂದು ಮತ್ತು ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.