HOSANAGARA ; ಕಾಂಗ್ರೆಸ್ ಕಾರ್ಯಕರ್ತರ ಸಂಘಟನಾತ್ಮಕ ಹೋರಾಟದ ಪ್ರತಿಫಲವೇ ಈ ಬಾರಿಯ ಸಹಕಾರಿ ಕ್ಷೇತ್ರದ ಗೆಲುವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಹೇಳಿದರು.
ಇತ್ತೀಚೆಗೆ ತಾಲೂಕಿನ ಮುಂಬಾರು ಕೃಷಿ ಪತ್ತಿನ ಸಹಕಾರ ಸಂಘದ ಒಟ್ಟು 12 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 11 ಕಾಂಗ್ರೆಸ್ ಬೆಂಬಲಿತ ಸದಸ್ಯರು ಭರ್ಜರಿ ಜಯ ದಾಖಲಿಸುವ ಮೂಲಕ ಆಡಳಿತ ಚುಕ್ಕಾಣಿ ಹಿಡಿದ ಹಿನ್ನಲೆಯಲ್ಲಿ ವಿಜೇತ ಅಭ್ಯರ್ಥಿಗಳು ಸೇರಿದಂತೆ ಮತ ನೀಡಿ ಸಹಕರಿಸಿದ ಸದಸ್ಯರಿಗಾಗಿ ಬ್ಲಾಕ್ ಕಾಂಗ್ರೆಸ್ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚುನಾಯಿತ ನಿರ್ದೇಶಕರು ಅಧಿಕಾರ ದರ್ಪ ತೋರದೆ, ಜನಾನುರಾಗಿಯಾಗಿ ಕಾರ್ಯನಿರ್ವಹಿಸಿದರೆ ಮಾತ್ರವೇ ಮುಂಬರುವ ದಿನಗಳಲ್ಲಿ ಇದು ಪಕ್ಷ ಸಂಘಟನೆ ಸಹಕಾರಿ ಆಗಲಿದೆ. ಪಕ್ಷ ನಿಮ್ಮನ್ನು ಗುರುತಿಸಿ ಅಧಿಕಾರ ನೀಡಿ ಶಕ್ತಿ ತುಂಬಿದೆ. ಅಧಿಕಾರದ ಮದದಲ್ಲಿ ಯಾರೂ ತೇಲಾಡಬಾರದು. ಇಂದಿನ ನಿಮ್ಮ ಅಧಿಕಾರ ಪಕ್ಷ ನೀಡಿದ ಭಿಕ್ಷೆ ಆಗಿದೆ. ಈ ಕಾರಣಕ್ಕೆ ಸಹಕಾರಿಗಳು ಮುಂಬರುವ ಪಂಚಾಯತಿ ಚುನಾವಣೆಗಳಲ್ಲಿ ಪಕ್ಷ ಸಂಘಟನೆಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಪಕ್ಷದ ಋಣ ಸಂದಾಯಕ್ಕೆ ಮುಂದಾಗ ಬೇಕು ಎಂಬ ಕಿವಿ ಮಾತು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಸಲ್ಲದು. ಇದೊಂದು ಆರ್ಥಿಕ ಕ್ಷೇತ್ರವಾಗಿದ್ದು ಎಲ್ಲರೂ ಪಕ್ಷಾತೀತವಾಗಿ ಕಾರ್ಯನಿರ್ವಹಿಸಿದಾಗ ಮಾತ್ರವೇ ಸಂಘವು ಅಭಿವೃದ್ದಿ ಪಥದತ್ತ ಸಾಗಲು ಸಾಧ್ಯವೆಂದ ಅವರು, ಸಂಘವು ರೈತರ ಸಂಸ್ಥೆಯಾದ ಕಾರಣ ಹಿರಿಯ ಸಹಕಾರಿಗಳ ಸಲಹೆ, ಮಾರ್ಗದರ್ಶನ ಅತ್ಯಗತ್ಯವಾಗಿದ್ದು, ಸಂಘವು ಆರ್ಥಿಕ ಸಬಲತೆ ಕಾಣಲು ಇದು ಸಹಕಾರಿ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘದ ಮಾಜಿ ಅಧ್ಯಕ್ಷ ಹಾಗು ಹಿರಿಯ ನಿರ್ದೇಶಕ ಲೇಖನಮೂರ್ತಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಅನಿವಾರ್ಯವಾಗಿದೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಪ್ರತಿಯೊಬ್ಬರು ಅಚ್ಚುಕಟ್ಟಾಗಿ ನಿರ್ವಹಿಸಿದ ಪ್ರತಿಫಲವೇ ಈ ಸಹಕಾರಿ ಗೆಲುವಾಗಿದೆ. ಸಂಘದ ಆರ್ಥಿಕ ಪ್ರಗತಿ ಸಿಬ್ಬಂದಿಗಳ ಕಾರ್ಯತತ್ಪರತೆ ಮೇಲೆ ಅವಲಂಭಿತವಾಗಿದೆ. 1963ರಲ್ಲಿ ಸ್ಥಾಪನೆಗೊಂಡ ಸಂಘವು ಬಳಿಕ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿತ್ತು. 80ರ ದಶಕದಲ್ಲಿ ಬಂದಗಳಲೆ ಮಲ್ಲಿಕಾರ್ಜುನಗೌಡರು ಅಧ್ಯಕ್ಷರಾದ ಬಳಿಕ ಸಂಘದಲ್ಲಿ ಆರ್ಥಿಕ ಸ್ಥಿರತೆ ಕಂಡುಬಂದು ಲಾಭದತ್ತ ಮುಖ ಮಾಡಿತು. ಸಂಘವು ಹಾಲಿ ವಾರ್ಷಿಕ 8 ಕೋಟಿ ರೂ. ವಹಿವಾಟು ನಡೆಸುತ್ತಿದ್ದು, ಪ್ರಸಕ್ತ ಸಹಕಾರಿ ಸಾಲಿನಲ್ಲಿ 13 ಲಕ್ಷ ರೂ. ಲಾಭಗಳಿಸಿರುವುದು ಶ್ಲಾಘನೀಯ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಮುಂಬಾರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ಎನ್. ಕುಮಾರ್, ಸಹಕಾರಿ ಸಂಘದ ಅಧ್ಯಕ್ಷ ಸಾಲ್ತೋಡಿ ತಿಮ್ಮಪ್ಪ, ಉಪಾಧ್ಯಕ್ಷ ವೀರಭದ್ರಪ್ಪ, ನೂತನ ನಿರ್ದೇಶಕರಾದ ಕೊಲ್ಲೂರಪ್ಪ, ನಾಗಪ್ಪ, ಡೀಕಪ್ಪ, ಜಯಂತ, ವೆಂಕಟೇಶ್, ಯೋಗೇಂದ್ರ, ಈರಮ್ಮ, ಶೋಭಾ ಅವರನ್ನು ಬ್ಲಾಕ್ ಕಾಂಗ್ರೆಸ್ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಳೂರು ಸಹಕಾರಿ ಸಂಘದ ನಿರ್ದೇಶಕ ದುಮ್ಮ ವಿನಯ್ ಕುಮಾರ್, ಪ್ರಮುಖರಾದ ಹುಲುಗಾರ್ ಕೃಷ್ಣಮೂರ್ತಿ, ಮುಂಡಾನಿ ಲೋಕೇಶ್, ಶ್ರೀಪಾದ್, ಅಶ್ವಿನಿಕುಮಾರ್, ಸದಾಶಿವ, ಎರಿಗಿ ಉಮೇಶ್, ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಸದಸ್ಯ ಧರ್ಮಪ್ಪ, ಕೋಡೂರು ರಾಜು, ವೇದಾಂತಪ್ಪ, ವಾಸುದೇವ್, ಶೇಖರಪ್ಪ, ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.