ಹೊಸನಗರ ; ತಾಲೂಕಿನ ಇತಿಹಾಸ ಪ್ರಸಿದ್ಧ ಬಿದನೂರಿನ ಜಗದೀಶ್ ಜಿ ಶೇಟ್ ಅವರ ವಿವಿಧ ಬಗೆಯ ಸಾಮಾಜಿಕ ಸೇವೆಯನ್ನು ಪರಿಗಣಿಸಿ, ದೆಹಲಿಯ ವೆಲ್ ಎಜುಕೇಶನಲ್ ಅಂಡ್ ಪೀಸ್ ಎಂಬ ರಾಷ್ಟ್ರೀಯ ಅಧಿಕೃತ ಸಂಸ್ಥೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಮೂಲತಃ ಜಗದೀಶ್ ಜಿ ಶೇಟ್ ಅವರು ತಾಲೂಕಿನ ಬಿದನೂರು ವಾಸಿ ಗಣಪತಿ ಎಂ ಶೇಟ್ ಹಾಗು ನಾಗರತ್ನ ಜಿ ಶೇಟ್ ದಂಪತಿಗಳ ಸುಪುತ್ರ. ಎಸ್ಎಸ್ಎಲ್ಸಿ ವ್ಯಾಸಂಗದ ಬಳಿಕ ಹೆಚ್ಚಿನ ಸಾಧನೆ ಮಾಡುವ ಹಂಬಲದಿಂದ ಬೆಂಗಳೂರು ಸೇರಿ ಸೋನು ಕಮ್ಯುನಿಕೇಶನ್ಸ್ ಅಂಡ್ ಇನ್ಫೋ ಸೆಂಟರ್ ಎಂಬ ಸಂಸ್ಥೆ ಹುಟ್ಟು ಹಾಕಿ, ಆ ಮೂಲಕ ಹಲವು ಸಮಾಜಮುಖಿ ಕಾರ್ಯಗಳಲ್ಲಿ ಕೈಜೋಡಿಸಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದು ಇವರ ಹೆಗ್ಗಳಿಕೆ.
ಸಮಾಜಕ್ಕೆ ಕೊಡುಗೆ ನೀಡುವ ಉತ್ಕಟ ಬಯಕೆ ಹೊಂದಿದ್ದ ಜಗದೀಶ ಅವರಿಗೆ, ತಮ್ಮ ಸಂಸ್ಥೆಯ ಮೂಲಕ ಸಂಕಷ್ಟದಲ್ಲಿದ್ದ ನೂರಾರು ಜೀವಗಳಿಗೆ ಆಸರೆಯಾದರು. ತಮ್ಮದೇ ಸಂಸ್ಥೆಯ ಮೂಲಕ ಸುಮಾರು 180 ಕ್ಯಾನ್ಸರ್ ರೋಗಿಗಳ ಶಸ್ತ್ರಚಿಕಿತ್ಸೆ, 25 ತೆರೆದ ಹೃದಯ ಶಸ್ತ್ರಚಿಕಿತ್ಸೆ ಹಾಗು 8 ನೇತ್ರ ಚಿಕಿತ್ಸೆಗೆ ಕೈ ಜೋಡಿಸಿದರು. ಅಲ್ಲದೇ, ಸುಮಾರು 2 ಸಾವಿರಕ್ಕೂ ಹೆಚ್ಚು ಯೂನಿಟ್ ನಷ್ಟು ರಕ್ತ ಸಂಗ್ರಹಿಸಿ ಅಗತ್ಯ ಸಂದರ್ಭದಲ್ಲಿ ರೋಗಿಗಳಿಗೆ ದಾನ ನೀಡುವ ಮೂಲಕ ರಕ್ತದಾನ ಮಹತ್ವ ಸಾರಿರುವುದು ಇವರ ಸಮಾಜಸೇವೆಗೆ ಹಿಡಿದ ಕೈಗನ್ನಡಿಯಂತಿದೆ.
ತಮ್ಮ ಕರ್ತವ್ಯದ ಜೊತೆ ಜೊತೆಗೆ ಸೋನು ಕಮ್ಯೂನಿಕೇಶನ್ಸ್ ಮೂಲಕ ಹಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು, ನ್ಯಾಷನಲ್ ಎನ್ವಿರಾನ್ಮೆಂಟಲ್ ಕೇರ್ ಫೌಂಡೇಶನ್, ಬೆಂಗಳೂರಿನ ಲೋಕಾಯುಕ್ತ ಕರ್ನಾಟಕ ನಿರ್ಮಾಣ ವೇದಿಕೆ, ರಾಷ್ಟ್ರೀಯ ಮಾನವ ಹಕ್ಕು, ಸ್ವಾಯತ್ತತೆ ಮತ್ತು ಸಾಮಾಜಿಕ ನ್ಯಾಯ ಸಂಸ್ಥೆಗಳ ಸಕ್ರಿಯ ಸದಸ್ಯರಾಗಿ ಕಾರ್ಯೋನ್ಮುಖರಾಗಿದ್ದಾರೆ. 2009 ರಿಂದ ಯುಎಸ್ಎಯ ಫೌಂಡೇಶನ್ ಫಾರ್ ಡ್ರಗ್- ಫ್ರೀ ವರ್ಡ್ ಇಂಟರ್ನ್ಯಾಷನಲ್ ಸಂಸ್ಥೆಯ ಸ್ವಯಂ ಸೇವಕನಾಗಿ, ಪರಿಸರ ರಕ್ಷಣೆ ಸಲುವಾಗಿ ಕರ್ನಾಟಕ ಹಸಿರು ಪೀಠದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಎಲ್ಲಾ ವಿವಿಧ ಸಾಮಾಜಿಕ ಸೇವೆಗಳನ್ನು ಪರಿಗಣಿಸಿ ಇದೇ 2025ರ ಜನವರಿ 6ರಂದು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಗದೀಶ್ ಜಿ ಶೇಟ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಸಂಸ್ಥೆ ಗೌರವಿಸಿದೆ.