ಹೊಸನಗರ ; ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಓರ್ವ ಸದಸ್ಯ ಇಲ್ಲಿನ ಪಿಡಿಎ ರವಿ. ಎಸ್ ವಿರುದ್ದ ಜಿಲ್ಲಾ ಪಂಚಾಯತಿ ಸಿಇಓ ಅವರಿಗೆ ಲಿಖಿತ ದೂರು ನೀಡಿ ಹಲವು ದಿನಗಳ ಬಳಿಕ ಮಂಗಳವಾರ ಗ್ರಾಮ ಪಂಚಾಯತಿ ಕಚೇರಿಗೆ ಜಿಲ್ಲಾ ಪಂಚಾಯತಿ ಲೆಕ್ಕ ಪರಿಶೋಧನ ತಂಡದ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿರುವುದು ಗ್ರಾಮಸ್ಥರ ಕೌತುಕಕ್ಕೆ ಕಾರಣವಾಗಿದೆ.
ಕಳೆದ ಒಂದುವರೆ ವರ್ಷದಿಂದ ಪಿಡಿಒ ರವಿಯವರ ಅಧಿಕಾರ ಅವಧಿಯಲ್ಲಿ ಸಾಮಾನ್ಯ ಸಭೆಯ ನಡಾವಳಿ ದಾಖಲಿಸಲು ವಿಳಂಬ ಧೋರಣೆ ತಾಳಿರುವುದು, ಸ್ವ-ಇಚ್ಛೆಯಂತೆ ಅಕ್ರಮ ದಾಖಲಿಸಿರುವುದು, ವರ್ಗ-1ರಲ್ಲಿ ಸುಮಾರು 3 ಲಕ್ಷ ರೂ. ಮೊತ್ತದ ನಕಲಿ ಬಿಲ್ ಸೃಷ್ಠಿಸಿ ಹಣ ದೋಚಿರುವುದು, 25% ಅನುದಾನದಲ್ಲೂ ಅಕ್ರಮ, ಗ್ರಾಹಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡದೆ ವಂಚಿಸಿರುವ ಪಂಚಾಯತಿ ವ್ಯಾಪ್ತಿಯ ಖಾಸಗಿ ಲೇಔಟ್ ಮಾಲೀಕರಿಗೆ ಕಾನೂನು ಬಾಹಿರವಾಗಿ ಇ-ಸ್ವತ್ತು ಹಂಚಿಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಸೇರಿದಂತೆ ಹಲವು ದೂರುಗಳನ್ನು ಲಿಖಿತ ರೂಪದಲ್ಲಿ ಸದಸ್ಯ ಮಹೇಂದ್ರ ಜಿಲ್ಲಾ ಪಂಚಾಯತಿ ಸಿಇಓಗೆ ನೀಡಿದ್ದರು.
ಕಳೆದ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲೂ ಈ ವಿಷಯ ಮಾರ್ಧನಿಸಿತ್ತು. ಪರ-ವಿರೋಧ ಚರ್ಚೆ ತಾರಕ್ಕೇರಿತ್ತು. ಇದೇ ಪ್ರಥಮ ಬಾರಿಗೆ ಸಾಮಾನ್ಯ ಸಭೆಯ ನಡಾವಳಿಯನ್ನು ಆನ್‌ಲೈನ್ ಮೂಲಕ ದಾಖಲಿಸುವ ಕಾರ್ಯಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಎನ್ ಪ್ರವೀಣ್ ಮುನ್ನುಡಿ ಬರೆದಿದ್ದರು. ಅಲ್ಲದೆ, ಪಿಡಿಓ ರವಿ ಕಾರ್ಯವೈಖರಿ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿ, ಸೂಕ್ತ ತನಿಖೆಗೆ ಕೂಡ ಆಗ್ರಹಿಸಿದ್ದರು.
ದೂರು ನೀಡಿ ಮೂರ್ನಾಲ್ಕು ವಾರಗಳೇ ಕಳೆದರೂ ತನಿಖೆಗೆ ಮುಂದಾಗದ ಜಿಲ್ಲಾ ಪಂಚಾಯತಿ ಅಧಿಕಾರಗಳ ಕಾರ್ಯವೈಖರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಶಾಸಕ ಗೋಪಾಲಕೃಷ್ಣ ಬೇಳೂರು ಮಧ್ಯೆ ಪ್ರವೇಶದಿಂದಾಗಿ ತನಿಖೆ ಚುರುಕುಗೊಂಡಿದೆ ಎಂಬ ಮಾತು ಕೇಳಿಬಂದಿದ್ದು. ಸದಸ್ಯರ ದೂರಿನ ಹಿನ್ನಲೆಯಲ್ಲಿ ತನಿಖಾಧಿಕಾರಿಗಳಾಗಿ ಜಿಲ್ಲಾ ಪಂಚಾಯತಿ ಲೆಕ್ಕಾಧಿಕಾರಿಗಳಾದ ಎಂ. ಪ್ರಕಾಶ್ ಹಾಗೂ ಬಿ.ಚಂದ್ರಪ್ಪ ಸಂಬಂಧಪಟ್ಟ ಕಡತಗಳ ಪರಿಶೀಲನೆ ಕೈಗೊಂಡಿದ್ದು, ಶೀಘ್ರದಲ್ಲೇ ದೂರಿನ ಸತ್ಯಾಸತ್ಯತೆ ಕುರಿತು ಜಿಲ್ಲಾ ಪಂಚಾಯತಿ ಸಿಇಒಗೆ ವರದಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.