ಶಿಕಾರಿಪುರ ; ತಾ.ಪಂ. ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆ | ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಿ ; ಬಿ.ವೈ. ವಿಜಯೇಂದ್ರ

Written by malnadtimes.com

Published on:

ಶಿಕಾರಿಪುರ ; ರಾಜ್ಯ ಬಿಜೆಪಿ ಅದ್ಯಕ್ಷರು ಹಾಗೂ ತಾಲ್ಲೂಕಿನ ಶಾಸಕರಾದ ಬಿ ವೈ ವಿಜೇಂದ್ರ ರವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲೆಯ ಸಂಸದರಾದ ಬಿ.ವೈ ರಾಘವೇಂದ್ರರ ಸಮ್ಮುಖದಲ್ಲಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತ್ರೈಮಾಸಿಕ ಕೆಡಿಪಿ ಸಭೆ ನಡೆಸಲಾಯಿತು.

WhatsApp Group Join Now
Telegram Group Join Now
Instagram Group Join Now

ಬೇಸಿಗೆಕಾಲ ಆರಂಭಗೊಂಡಿದ್ದು ತೀವ್ರತರವಾದ ಬಿಸಿಲು ಇರುವುದರಿಂದ ಜನ, ಜಾನುವಾರುಗಳಿಗೆ ಯಾವುದೇ ರೀತಿಯಿಂದಲೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು ಎಂದು ಶಾಸಕರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ ವಿಜಯೇಂದ್ರ ತಾಲೂಕು ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲು ನಿರ್ಮಾಣಗೊಂಡಿರುವ ಪುರದಕೆರೆಯಿಂದ 150 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆಯಡಿ ಕಾಳೇನಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಕಸಬಾ ಏತನೀರಾವರಿ ಯೋಜನೆಗಳನ್ನು ಉಪಯೋಗಿಸಿಕೊಂಡು ತುಂಗಭದ್ರಾ ನದಿಯಲ್ಲಿ ನೀರು ಹರಿಯುತ್ತಿರುವ ಕಾರಣ ಕೆರೆಗಳನ್ನು ತುಂಬಿಸುವ ಕಾರ್ಯ ಕೂಡಲೇ ಆಗಬೇಕು. ಇದರಿಂದ ಕುಡಿಯುವ ನೀರು ಹಾಗೂ ದನ ಕರುಗಳಿಗೂ ಅನುಕೂಲವಾಗುತ್ತದೆ ಎಂದರು.

ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್ ಪಿ ನಾಗರಾಜಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಕೈಗೊಂಡಿರುವ 150 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ಯೋಜನೆಯ ನೀರಿನ ಮೂಲ ಅಂಜನಾಪುರ ಜಲಾಶಯವಾಗಿದ್ದು, ಕುಡಿಯುವ ನೀರಿಗಾಗಿಯೇ ಜಲಾಶಯ ಖಾಲಿಯಾದರೆ ಮುಂದೆ, ರೈತರಿಗೆ ಸಮಸ್ಯೆ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಸಭೆಯಲ್ಲಿ ದಂಡಾವತಿ ಉಪವಿಭಾಗದ ಸಹಾಯಕ ಅಭಿಯಂತರರಾದ ಬಾಲರಾಜ್ ಡಿ ಮಾತನಾಡಿ, ತಾಲ್ಲೂಕಿನ ಕಸಬಾ ಏತ ನೀರಾವರಿ ಯೋಜನೆಯಡಿ 2022 ಆಗಸ್ಟ್ ತಿಂಗಳಿನಿಂದ ನೀರು ಸರಬರಾಜ ಮಾಡುತ್ತಿದ್ದು, ಆರಂಭದಿಂದಲೂ ನೀರು ಸರಬರಾಜು ಮಾಡುತ್ತಿದ್ದು, ಕಳೆದ ಎರಡು ವರ್ಷದಿಂದ ಇಂದಿನವರೆಗೆ ಎರಡು ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಂದಿದ್ದು, ಬಿಲ್ ಪಾವತಿಸದಿರುವುದರಿಂದ ಕರೆಂಟ್ ಕಟ್ಟುಮಾಡಲಾಗಿದೆ. ಯುಟಿಹೆಚ್ ಅಡಿಯಲ್ಲಿ 18ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ನಾಗರಾಜ್ ಗೌಡರು ಮಾತನಾಡಿ, ಆ ಭಾಗದ ರೈತರಿಗೆ ಯಾವುದೇ ರೀತಿಯ ನೀರು ಸರಬರಾಜು ಆಗಿರುವುದಿಲ್ಲ ಆದರೂ ಎರಡು ಕೋಟಿ ರೂ. ವಿದ್ಯುತ್ ಬಿಲ್ ಹೇಗೆ ಬಂತು!? ಎಂದು ಆಶ್ಚರ್ಯಕರವಾಗಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಇಲಾಖೆಯ ಹಾಗೂ ದಂಡಾವತಿ ಉಪ ವಿಭಾಗದ ಸಹಾಯಕ ಅಭಿಯಂತರರು ಪ್ರತಿ ತಿಂಗಳು 5.25 ಲಕ್ಷ ರೂಪಾಯಿ ಮಿನಿಮಂ ಚಾರ್ಜ್ ಬರುತ್ತಿದೆ ಎಂದು ಉತ್ತರಿಸಿದರು.

ತಾಲ್ಲೂಕಿನ ತಾಲೂಕು ಮಟ್ಟದ ಅಧಿಕಾರಿಗಳು, ಪಿ.ಡಿ.ಒಗಳು ಗ್ರಾಮ ಆಡಳಿತ ಅಧಿಕಾರಿಗಳು ಶಿವಮೊಗ್ಗದಿಂದ ಶಿಕಾರಿಪುರಕ್ಕೆ ನಿತ್ಯ ಓಡಾಡಿ ಕರ್ತವ್ಯ ನಿರ್ವಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಇದಕ್ಕೆ ಅವಕಾಶ ಕೊಡದೆ ತಾಲೂಕು ಕೇಂದ್ರದಲ್ಲಿ ವಾಸ್ತವ್ಯ ಇರಬೇಕು ಎಂದು ಸೂಚಿಸಿದರು.

ಈಗಾಗಲೇ ಬೇಸಿಗೆ ಆರಂಭವಾಗುತ್ತಿದ್ದು ಮುಂದೆ ಕುಡಿಯುವ ನೀರಿನ ಬಗ್ಗೆ ಅಧಿಕಾರಿಗಳು ಒಂದಾದ ರಚನೆ ಇತ್ತು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಬಿ ವೈ ವಿಜಯೇಂದ್ರ ತಿಳಿಸಿದರು. ಈ ಕುರಿತು ಸಭೆಯಲ್ಲಿ ಹಾಜರಿದ್ದ ಭಾರಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಸಭೆಗೆ ಮಾಹಿತಿ ನೀಡುತ್ತಾ, ಅಂಜನಾಪುರ ಜಲಾಶಯವು 1.85 ಟಿಎಂಸಿ ನೀರಿನ ಸಂಗ್ರಹಣ ಸಾಮರ್ಥ್ಯ ಹೊಂದಿದ್ದು, ಕುಡಿಯುವ ನೀರಿಗಾಗಿ ಬಳಕೆಯಾಗುತ್ತಿರುವುದು 0.2 ಟಿಎಂಸಿ ಸಾಕು ಎಂದರು. ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಸಂಸದ ರಾಘವೇಂದ್ರ, ಡೆಡ್ ಸ್ಟೋರೇಜ್ ನಲ್ಲಿ ಇರುವ ನೀರನ್ನು ಮಾತ್ರ ಕುಡಿಯುವ ನೀರಿಗಾಗಿ ತಾಲ್ಲೂಕಿನ ಜನತೆಗೆ ಉಪಯೋಗ ಮಾಡಿಕೊಳ್ಳುತ್ತಿದ್ದು ಯಾರು ಆತಂಕ ಪಡಬೇಕಾಗಿಲ್ಲ ಎಂದರು.

ಕೆಡಿಪಿ ಸದಸ್ಯರಾದ ಉಮೇಶ್ ಮರವಳ್ಳಿ ಮಾತನಾಡಿ, ತಾಲ್ಲೂಕಿನ ಗುಳೇದಹಳ್ಳಿ ಗ್ರಾಮದ ಕೆರೆ ಕಾಮಗಾರಿ ಸಮಯದಲ್ಲಿ ಕೆರೆಯ ತೂಬಿನಿಂದ ಮಾಡಬೇಕಾಗಿದ್ದ ಕಾಲುವೆ ನಿರ್ಮಾಣವನ್ನು ತೂಬಿನ ನಂತರದಲ್ಲಿ ನಿರ್ಮಾಣ ಮಾಡಿರುವುದರಿಂದ ರೈತರ ನೂರಾರು ಎಕರೆ ಜಮೀನು ಮುಳುಗಡೆ ಆಗುತ್ತಿದ್ದು ಆಗಿರುವ ಪ್ರಮಾದವನ್ನು ಸರಿಪಡಿಸುವಂತೆ ಸಭೆಯಲ್ಲಿ ಆಗ್ರಹಿಸಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕಿರಣ್ ಕುಮಾರ್ ಹರ್ತಿ ಸಭೆಗೆ ಮಾಹಿತಿ ನೀಡುತ್ತಾ 2019 ರಲ್ಲಿ ಜಾರಿಗೆ ಬಂದ ಪಿ ಎಂ ಕಿಸಾನ್ ಯೋಜನೆಯಲ್ಲಿ ಅಂದು ಪಹಣಿ ಹೊಂದಿದ್ದ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದು, ಆ ನಂತರದಲ್ಲಿ ಜಮೀನು ಖರೀದಿ ಮಾಡಿದ ವಿಭಾಗ ಪತ್ರದ ಮೂಲಕ ಜಮೀನು ಪಡೆದ ಹಾಗೂ ಬೇರೆ ಯಾವುದೇ ರೀತಿಯಿಂದ ಜಮೀನು ಪಹಣಿ ಹೊಂದಿರುವವರಿಗೆ ಈ ಯೋಜನೆಯ ಸೌಲಭ್ಯ ದೊರಕುತ್ತಿಲ್ಲ ಎಂದರು, ಈ ಕುರಿತು ಸಂಸತ್ತಿನ ಅಧಿವೇಶನದಲ್ಲಿ ಚರ್ಚಿಸುವುದಾಗಿ ಸಂಸದರ ರಾಘವೇಂದ್ರ ಭರವಸೆ ನೀಡಿದರು.

ಕೆಡಿಪಿ ಸದಸ್ಯ ರಾಘವೇಂದ್ರ ನಾಯಕ್ ಮಾತನಾಡಿ, ಪುರಸಭೆಯ ಮುಖ್ಯಾಧಿಕಾರಿಗಳು ಪಟ್ಟಣಕ್ಕೆ ಹೊಂದಿಕೊಂಡಿರುವ ಭದ್ರಾಪುರ ಗ್ರಾಮದ ಕೆರೆಯ ಒತ್ತುವರಿದಾರರಿಗೂ ಈ ಸ್ವತ್ತು ನೀಡುತ್ತಿದ್ದು ಇದು ಕೂಡಲೇ ನಿಲ್ಲಬೇಕು ಎಂದು ಆಗ್ರಹಿಸಿದರು, ಇದಕ್ಕೆ ಉತ್ತರಿಸಿದ ಪುರಸಭಾ ಮುಖ್ಯಾಧಿಕಾರಿ ಭರತ್, ಈಗಾಗಲೇ ಸರ್ವೇ ಕಾರ್ಯ ಮುಕ್ತಾಯಗೊಂಡಿದ್ದು ಕೆರೆಯ ಗಡಿ – ಬಾಂದುಗಳನ್ನು ಗುರುತಿಸಲಾಗಿದ್ದು, ಸರ್ವೆ ಇಲಾಖೆಯವರು ನಿಗದಿಪಡಿಸಿದ ಕೆರೆಯ ಆವರಣದೊಳಗೆ ಪುರಸಭೆಯ ಯಾವುದೇ ಈ ಸ್ವತ್ತುಗಳು ಕಂಡು ಬಂದಿರುವುದಿಲ್ಲ, ಅಂತವು ಕಂಡು ಬಂದರೆ ನಾವು ಈ ಸ್ವತ್ತನ್ನು ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಡಿಪಿ ಸದಸ್ಯ ಎಂ ಬಿ ಮಂಜಪ್ಪ ಮಾತನಾಡಿ, ಹರಗುವಳ್ಳಿಯಿಂದ ಚಿಕ್ಕಕಲ್ವತ್ತಿ ಹೊರಗಿನ ರಸ್ತೆ ತುಂಬಾ ಹಾಳಾಗಿದ್ದು ಎತ್ತಿನ ಗಾಡಿ ವಾಹನ ಸೈಕಲ್ ಬೈಕು ಓಡಾಡಲು ತುಂಬಾ ತೊಂದರೆ ಉಂಟಾಗುತ್ತಿದೆ, ಈ ಕುರಿತು ದಯಮಾಡಿ ಕೂಡಲೇ ಕ್ರಮ ವಹಿಸಬೇಕೆಂದು ಅಧಿಕಾರಿಗಳನ್ನು ಆಗ್ರಹಿಸಿದರು .ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಯಲ್ಲಿ ಹೂಳೆತ್ತುವುದಕ್ಕೆ ಅವಕಾಶ ನೀಡಬೇಕು ಅದರಿಂದ ನೀರಿನ ಸಂಗ್ರಹ, ಅಂತರ್ಜಲ ಹೆಚ್ಚಳಕ್ಕೆ ಸಹಕಾರಿ ಆಗುತ್ತದೆ ಎಂದು ಗ್ಯಾರಂಟಿ ಯೋಜನೆ ಅಧ್ಯಕ್ಷ ನಾಗರಾಜಗೌಡ ಮನವಿ ಮಾಡಿದರು. ನೀರಾವರಿ ಇಲಾಖೆ ಅಭಿಯಂತರ ರಮೇಶ್ ಮಾತನಾಡಿ, ಹೂಳೆತ್ತುವ ಹೆಸರಿನಲ್ಲಿ ಕೆರೆ ಆಕಾರ ಬದಲಾಯಿಸಲಾಗಿದೆ, ಉತ್ತಮ ಮಣ್ಣು ಸಿಗುವ ಕಡೆ 5-6ಅಡಿ ಮಣ್ಣು ಅಗೆಯಲಾಗಿದೆ ಜನ, ಜಾನುವಾರು ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿವೆ ಎಂದರು. ನಾಗರಾಜಗೌಡ ಮಾತನಾಡಿ, ಹುಲುಗಿನಕಟ್ಟೆ ಮುರುಗಣ್ಣನ ಕೆರೆ ಕೋಡಿ ಎತ್ತರವಾಗಿ 50ಎಕರೆ ಪ್ರದೇಶ ನೀರಲ್ಲಿ ನಿಲ್ಲುವಂತಾಗಿದೆ. ಗುಳೇದಹಳ್ಳಿ ದೊಡ್ಡಮಲ್ಲಣ್ಣನ ಕೆರೆ ನಕಾಶೆ ಕಂಡ ಕಾಲುವೆ ಬದಲು ಬೇರೆಡೆ ಮಾಡಿದ್ದು ರೈತರಿಗೆ ತೊಂದರೆಯಾಗಿದೆ ಅದನ್ನು ಸರಿಪಡಿಸಬೇಕು ಎಂದರು.

ಸದಸ್ಯ ಉಮೇಶ್ ಮಾರವಳ್ಳಿ ಮಾತನಾಡಿ, ಭೂಸುರಕ್ಷಾ ಯೋಜನೆ, ಪೋಡಿ, ಕಂದಾಯ, ಪಿಂಚಣಿ ಅದಾಲತ್ ಸರಿಯಾಗಿ ಮಾಡಿಲ್ಲ, ರೈತರು ಕಚೇರಿ ಅಲೆಯುವಂತಾಗಿದೆ. ತಾಂಡ, ಕಾಲೋನಿ, ಗ್ರಾಮಠಾಣ ಹೊಂದಿಕೊAಡ ಖಾಸಗಿ ಜಮೀನಿನಲ್ಲಿ ಇರುವ ಗ್ರಾಮಕ್ಕೆ 94ಡಿ ಅಡಿಯಲ್ಲಿ ಹಕ್ಕುಪತ್ರ ನೀಡುವ, ಕಂದಾಯ ಗ್ರಾಮವನ್ನಾಗಿ ಮಾಡುವ ಕೆಲಸ ತಾಲ್ಲೂಕಿನಲ್ಲಿ ಹಿಂದುಳಿದಿದೆ, ಕೆರೆ, ಸ್ಮಶಾನ ಒತ್ತುವರಿ ತೆರವು ಕಾರ್ಯವೂ ಆಗುತ್ತಿಲ್ಲ ಎಂದು ಆರೋಪಿಸಿದರು. ತಹಸೀಲ್ದಾರ್ ಮಲ್ಲೇಶ ಬೀರಪ್ಪ ಪೂಜಾರ್ ಮಾತನಾಡಿ, 6 ಕಡೆ ಪಿಂಚಣಿ ಅದಾಲತ್ ಮಾಡಿದ್ದು 46 ಅರ್ಜಿ ಬಂದಿವೆ ಇನ್ನುಳಿದ ಕೆಲಸ ಪ್ರಗತಿಯಲ್ಲಿವೆ ಎಂದರು.

ಹಂದಿ ದಾಳಿಯಿಂದ ಅಡಿಕೆ ಗಿಡ ನಾಶವಾದ ಘಟನೆ ಹೆಚ್ಚಾಗಿದ್ದು ರೈತರಿಗೆ ಸೂಕ್ತ ಪರಿಹಾರ ನೀಡಬೇಕು, ಹಲಸಂದಿ, ಹೆಸರು, ಉದ್ದು ಬೆಳೆ ತಾಲ್ಲೂಕಿನಲ್ಲಿ ಇಳುವರಿ ಬರುತ್ತಿಲ್ಲ ಹೊಸತಳಿ ಪರಿಚಯಿಸಬೇಕು, ಸೈಕಲ್ ಟ್ರಾಕ್ ನಿರ್ಮಾಣ ನೆನೆಗುದಿಗೆ ಬಿದ್ದಿದ್ದು ಕಾಮಗಾರಿ ಬೇಗ ಪೂರ್ಣಗೊಳಿಸಬೇಕು, ಪಶು ಸಂಗೋಪನೆ ಇಲಾಖೆಗೆ ಸಿಬ್ಬಂದಿ ನೇಮಕಕ್ಕೆ ಅನುಮತಿ ನೀಡಬೇಕು, ಹಕ್ಕಿಜ್ವರ ತಾಲ್ಲೂನಲ್ಲಿ ಕಂಡು ಬಂದಿಲ್ಲ ಕೋಳಿ ಬೇಯಿಸಿ ತಿನ್ನುವುದರಿಂದ ಯಾವುದೆ ಸಮಸ್ಯೆ ಆಗುವುದಿಲ್ಲ, ಹೊಸ ಕೋಳಿ ಖರೀದಿ ಸದ್ಯಕ್ಕೆ ಮುಂದೂಡಬೇಕು ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು. ಮಧ್ಯಪ್ರವೇಶಿಸಿ ಮಾತನಾಡಿದ ಸಂಸದ ರಾಘವೇಂದ್ರ, ಅಧಿಕಾರಿಗಳು ಸ್ಥಳಕ್ಕೆ ಕೂಡಲೇ ಹೋಗಿ ಸಮಸ್ಯೆ ಬಗೆಹರಿಸಿ, ಅಗತ್ಯ ಇರುವ ಆರ್ಥಿಕ ನೆರವನ್ನು ಸರ್ಕಾರದಿಂದ ಕೊಡಿಸುವ ಭರವಸೆ ನೀಡಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ನಾಗರಾಜ್, ತಹಶೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ಟಿ ಎ ಪಿ ಸಿ ಎಂ ಎಸ್ ನ ಅಧ್ಯಕ್ಷರಾದ ಸುಧೀರ್, ಪಿ ಅಂಡ್ ಡಿ ಬ್ಯಾಂಕ್‌ನ ಅಧ್ಯಕ್ಷರಾದ ಲೋಹಿತ್ ಕುಮಾರ್, ಕೆಡಿಪಿ ಸದಸ್ಯರುಗಳಾದ ಕೆ ಎಸ್. ವೀರನಗೌಡ, ಟಿ ರೇವಣಸಿದ್ದಪ್ಪ, ಅಜೀಜ್ ಖಾನ್, ಪುಷ್ಪಾ, ಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಚಂದ್ರಶೇಖರ ಗೌಡ, ಡಿ.ಎಲ್. ಬಸವರಾಜ್, ರವೀಂದ್ರ ಹೆಚ್ ಎಸ್, ಹಾಗೂ ತಾಲೂಕಿನ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸದಸ್ಯರಿಗೆ ಸಭಾ ನಡುವಳಿಯು ಒಂದು ವಾರಕ್ಕಿಂತ ಮುಂಚೆಯೇ ಕೈ ಸಿಗುವಂತೆ ಅಧಿಕಾರಿಗಳು ಸಭಾ ನಡುವಳಿಯ ಪ್ರತಿಯನ್ನು ಕಳಿಸಬೇಕು ಇದನ್ನು ಗಮನಿಸಿ ಸದಸ್ಯರು ಯಾವ ಯಾವ ವಿಷಯದ ಬಗ್ಗೆ ಚರ್ಚಿಸಬೇಕೆಂದು ಗಮನದಲ್ಲಿಟ್ಟುಕೊಂಡು ಬರುತ್ತಾರೆ. ಆದರೆ ಸಭೆಯ ಹಿಂದಿನ ದಿನ ಅಥವಾ ಸಭೆಯ ನಡೆಯುವ ಸಮಯದಲ್ಲಿ ಸದಸ್ಯರಿಗೆ ಸಿಗುತ್ತಿದೆ ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೂ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ ಬಿ.ವೈ ವಿಜಯೇಂದ್ರರವರಿಗೂ ಸೂಚಿಸಿದರು. ಈಗಿನ ಸಭಾ ನಡುವಳಿಯಲ್ಲಿ ಹಿಂದಿನ ಸಭೆಯಲ್ಲಿ ಚರ್ಚೆ ನಡೆಸಿದ ಯಾವುದೇ ವಿಷಯಗಳು ಪ್ರಸ್ತಾವನೆಯಾಗಿಲ್ಲ ಎಂದು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ನಾಗರಾಜ ಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಗೆ ಎಂದೂ ಬಾರದಿರುವ ಕೆಎಸ್ಆರ್ಟಿಸಿ ಸಂಸ್ಥೆ, ಅಗ್ನಿಶಾಮಕ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ವಿವಿಧ ಇಲಾಖೆಗಳ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಶಾಸಕರು ಉಪನೋಂದಾವಣಿ ಬಗ್ಗೆ ಚರ್ಚಿಸಲು ಸಭೆಯಲ್ಲಿ ಕರೆದರೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳ ಗೈರಾಗಿರುವುದು ಕಂಡುಬಂದಿತಲ್ಲದೇ, ಕಾರ್ಮಿಕ ಇಲಾಖೆ ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಾಗದಿರುವುದು ಮೇಲ್ನೋಟಕ್ಕೆ ಕಂಡುಬಂದಿತು.

ಕೆಡಿಪಿ ಸದಸ್ಯ ರಾಘವೇಂದ್ರನಾಯ್ಕ ಮಾತನಾಡಿ, ತಾಲ್ಲೂಕಿನಲ್ಲಿರುವ ಹಾಸ್ಟೆಲ್‌ಗಳು, ವಸತಿ ಶಾಲೆಯಲ್ಲಿ ದೀಪಾವಳಿ ಸಂದರ್ಭದಲ್ಲೂ ಶೇ.100ರಷ್ಟು ಹಾಜರಾತಿ ತೋರಿಸಿ ಅಕ್ಕಿ, ಗೋಧಿ ಅಕ್ರಮ ಮಾರಾಟ ಮಾಡಲಾಗುತ್ತಿದೆ ಈ ಕುರಿತ ವಿಡಿಯೋ ಇದ್ದು, ಶಿವಮೊಗ್ಗ ಮಾಚೇನಹಳ್ಳಿ ಕೈಗಾರಿಕೆ ಪ್ರದೇಶಕ್ಕೆ, ಸಂಡ ಪಶು ಆಹಾರ ಘಟಕಕ್ಕೆ ಮಾರಲಾಗುತ್ತಿದೆ. ಆರೋಗ್ಯ ಸಮಸ್ಯೆ ಕಾರಣಕ್ಕೆ ಕೆಎಫ್‌ಸಿ ಗೋದಾಮಿನ ಅಧಿಕಾರಿ ಬದಲಿಗೆ ಬೇರೆ ವ್ಯಕ್ತಿ ಕಾರ್ಯನಿರ್ವಹಿಸುತ್ತಿದ್ದು ಆತನೆ ಅಕ್ರಮ ರೂವಾರಿ ಇದೊಂದು ಗಂಭೀರ ಪ್ರಕರಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಪ್ರಕರಣ ಕುರಿತು ತನಿಖೆ ನಡೆಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

Leave a Comment