ಮಾ.23ಕ್ಕೆ ಹೊಸನಗರ ತಾಲೂಕು 10ನೇ ಕಸಾಪ ಸಮ್ಮೇಳನ | ಸರ್ವಾಧ್ಯಕ್ಷರಾಗಿ ದರೇಮನೆ ಶ್ರೀಧರ್ ಆಯ್ಕೆ – ಆಹ್ವಾನ ಪತ್ರಿಕೆ ಬಿಡುಗಡೆ

Written by malnadtimes.com

Published on:

ಹೊಸನಗರ ; ಕಳೆದ ಕೆಲವು ತಿಂಗಳಿನಿಂದ ನೂತನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಮಿತಿಯು ಭಾಷೆ, ನಾಡು, ನುಡಿ ಸಾಹಿತ್ಯ ಕುರಿತಂತೆ ಹಲವು ವಿಭಿನ್ನ ರೀತಿಯ ಕಾರ್ಯಗಳನ್ನು ಆಯೋಜಿಸುವ ಮೂಲಕ ಜನಮನ ತಲುಪಿದೆ ಎಂದು ತಹಸೀಲ್ದಾರ್ ರಶ್ಮಿ ಹಾಲೇಶ್ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಕಸಾಪ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ಇದೇ ಮಾರ್ಚ್ 23ರ ಭಾನುವಾರ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಆಯೋಜಿಸಿರುವ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಮ್ಮೇಳನದ ಯಶಸ್ವಿಗೆ ಸದಸ್ಯರ ಸಹಕಾರ ಆಗತ್ಯವಾಗಿದ್ದು, ತನು, ಮನ,ಧನ ಸಹಕಾರ ನೀಡುವ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿಸಿದರು.

ತಾಲೂಕು ಕಸಾಪ ಅಧ್ಯಕ್ಷ ನಾಗರಕೊಡಿಗೆ ಕೆ. ಗಣೇಶ್ ಮೂರ್ತಿ ಮಾತನಾಡಿ, ಈ ಬಾರಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯಕ್ಷಗಾನ ಅಕಾಡೆಮಿ ಸದಸ್ಯ, ಖ್ಯಾತ ಯಕ್ಷಗಾನ ಅರ್ಥಧಾರಿ, ಪ್ರಸಂಗ ಕತೃ, ಕಾದಂಬರಿಕಾರ ಮೂಲತಃ ತಾಲ್ಲೂಕಿನ ನಿಟ್ಟೂರು ಸಮೀಪದ ದರೇಮನೆ ಡಿ.ಎಸ್.ಶ್ರೀಧರ್ ಹೆಸರನ್ನು ತಾಲೂಕಿನ ಖ್ಯಾತ ಸಾಹಿತಿ ಡಾ.ಶಾಂತರಾಮ ಪ್ರಭು ನೇತೃತ್ವದ ಸಮಿತಿ ಶಿಫಾರಸ್ಸು ಮಾಡಿತ್ತು. ಈ ಬಾರಿ ಸರ್ವಾಧ್ಯಕ್ಷರ ಸ್ಥಾನಕ್ಕೆ ತಾಲೂಕಿನ ಹಲವು ಸಾಹಿತಿಗಳ ಹೆಸರು ಕೇಳಿ ಬಂದರೂ ಕಡೆಗೆ, ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಅವರು ಡಿ.ಎಸ್.ಶ್ರೀಧರ್ ಹೆಸರನ್ನು ಅಂತಿಮಗೊಳಿಸಿದರು ಎಂದರು.

ಯಾವುದೇ ಪ್ರಶಸ್ತಿ, ಪುರಸ್ಕಾರ, ಅಧ್ಯಕ್ಷಗಿರಿ ತಾನಾಗಿಯೇ ಒಲಿದು ಬರಬೇಕು, ಹೆಚ್ಚಿನ ಓದು, ಅಧ್ಯಯನ, ಸಂಘ- ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಪರಿ, ಸಾರ್ವಜನಿಕವಾಗಿ ಒಪ್ಪುವಂತ ಆಯ್ಕೆಯಾಗಬೇಕೆ ವಿನಃ ಕಾಡಿ, ಬೇಡಿ, ಗುದ್ದಾಡಿ ಪಡೆಯುವ ಪ್ರಕ್ರಿಯೆ ಸಲ್ಲದು ಎಂದರು.

ಸಾಹಿತ್ಯ ಆಸಕ್ತರು, ಪರಿಷತ್ತಿನ ಸದಸ್ಯರು ಸೂಚಿಸಿದ ಒಮ್ಮತದ ಆಯ್ಕೆಯನ್ನು ಜಿಲ್ಲೆಗೆ ರವಾನಿಸುವ ಹೊಣೆ ಮಾತ್ರವೇ ಸ್ಥಳೀಯ ಸಮಿತಿಯದ್ದು. ಆದರೆ ಆಯ್ಕೆಯ ಸಂಪೂರ್ಣ ಹೊಣೆ ಜಿಲ್ಲಾ ಸಮಿತಿಗಿದೆ ಎಂದರು.

ಪರಿಷತ್ತಿನ ಸಭೆ-ಸಮಾರಂಭಗಳಲ್ಲಿ ಭಾಗವಹಿಸದ ಸದಸ್ಯರಿಗೆ ಅಲ್ಲಿ ಏನು ನಡೆಯುತ್ತಿದೆ ಎಂಬುದೇ ತಿಳಿಯದು. ಪ್ರತಿಯೊಬ್ಬ ಸದಸ್ಯರು ಕಸಾಪ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಮ್ಮೇಳನದ ಯಶಸ್ವಿಗೆ ಸಹಕರಿಸುವಂತೆ ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ನಿಕಟಪೂರ್ವ ಅಧ್ಯಕ್ಷ ಕೆ.ಇಲಿಯಾಸ್, ರಿಪ್ಪನ್‌ಪೇಟೆ ಘಟಕದ ಹೆಚ್.ಎಂ.ಬಶೀರ್ ಅಹಮದ್, ನಿರ್ದೇಶಕಿ ರಾಧಿಕ ಶ್ರೇಷ್ಠಿ, ಕಾರ್ಯದರ್ಶಿ ಪ್ರವೀಣ್ ಎಂ ಕಾರ್ಗಡಿ, ನಿವೃತ್ತ ಶಿಕ್ಷಕ ಕುಬೇಂದ್ರಪ್ಪ, ಕೆ.ಜಿ.ನಾಗೇಶ್, ಸುಜಾತ ನಾಗೇಶ್, ಹುಂಚ ನಾಗಭೂಷಣ, ಅಶ್ವಿನಿ ಪಂಡಿತ್ ಇದ್ದರು.

Leave a Comment