ಹಂಚಿ ಉಣ್ಣುವುದು ಭಾರತೀಯ ಸಂಸ್ಕೃತಿ ; ರಂಭಾಪುರಿ ಜಗದ್ಗುರುಗಳು

Written by malnadtimes.com

Updated on:

ಬಾಳೆಹೊನ್ನೂರು ; ಮನುಷ್ಯನ ಜೀವನಾಧಾರಕ್ಕೆ ನೀರು ಅನ್ನ ಗಾಳಿ ಮುಖ್ಯವಾಗಿರುವಂತೆ ಆದರ್ಶ ವ್ಯಕ್ತಿಯಾಗಿ ಬಾಳಲು ಸಜ್ಜನರ ನುಡಿಗಳು ಮುಖ್ಯ. ಹಸಿದು ಉಣ್ಣುವುದು ಪ್ರಕೃತಿಯ ಧರ್ಮ. ಹಂಚಿ ಉಣ್ಣುವುದು ಸಂಸ್ಕೃತಿ ಲಕ್ಷಣವೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಮಂಗಳವಾರ ಸಂಜೆ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಕೃಷಿ ಮೇಳ-ಚಿಂತನ-ಮಂಥನ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

WhatsApp Group Join Now
Telegram Group Join Now
Instagram Group Join Now

ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ರೈತರ ಪಾತ್ರ ಬಹು ಮುಖ್ಯವಾದುದು. ಸಾಂಪ್ರದಾಯಕವಾಗಿ ಬೆಳೆದು ಬಂದ ಕೃಷಿ ಇಂದು ಆಧುನಿಕ ವ್ಯವಸ್ಥೆಯಲ್ಲಿ ಬಹಳಷ್ಟು ಪ್ರಗತಿ ಪಥದಲ್ಲಿ ನಡೆಯುತ್ತಿದೆ. ಶ್ರೀಮಂತ ರೈತರಿಗೆ ಮಾತ್ರ ಆಧುನಿಕ ಸೌಲಭ್ಯ ಕೃಷಿ ಮಾಡಲು ಸಾಧ್ಯ. ಬಹಳಷ್ಟು ಬಡ ಜನ ರೈತರಿಗೆ ಇದು ಅಸಾಧ್ಯವೆಂದರೆ ತಪ್ಪಾಗದು. ಸಾಮಾನ್ಯ ಬಡ ರೈತ ಉದ್ಧಾರವಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡುವ ಅವಶ್ಯಕತೆಯಿದೆ. ಮಲೆನಾಡಿನ ಪ್ರಮುಖ ಬೆಳೆಗಳಾದ ಕಾಫಿ ಅಡಿಕೆ ಮತ್ತು ಮೆಣಸು ಇನ್ನಿತರ ಉಪ ಬೆಳೆಗಳನ್ನು ಬೆಳೆಸುವ ನಿಟ್ಟಿನಲ್ಲಿ ರೈತರು ಶ್ರಮವಹಿಸಿ ದುಡಿಯುತ್ತಿದ್ದಾರೆ. ಆದರೆ ಕೆಲವು ಸಂದರ್ಭದಲ್ಲಿ ಮಳೆ ಬೆಳೆಯಿಲ್ಲದೇ ಮತ್ತು ಯೋಗ್ಯ ಬೆಲೆ ಸಿಗದೇ ಸಾಲದ ಸುಳಿಯಲ್ಲಿ ಸಿಕ್ಕು ನಲುಗಿದವರೂ ಉಂಟು. ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ಬರುವ ಬೆಳೆಗಳನ್ನು ಬೆಳೆಸುವತ್ತ ರೈತರು ಗಮನ ಹರಿಸಬೇಕಾಗಿದೆ. ಕಾಯಕದಿಂದ ಗಳಿಸಿದ ಸಂಪತ್ತು ಜೀವನಕ್ಕೆ ನೆಮ್ಮದಿ ಮತ್ತು ಚೇತೋಹಾರಿ ಎಂದರು.

ಸಮಾರಂಭ ಉದ್ಘಾಟಿಸಿದ ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಅವರು ಮಾತನಾಡಿ ಪ್ರಪಂಚ ಅನ್ನುವುದು ಗುಲಾಬಿ ಗಿಡದಂತೆ. ಮೂರ್ಖರು ಮುಳ್ಳನ್ನು ಸಜ್ಜನರು ಹೂವನ್ನು ಪಡೆಯುತ್ತಾರೆ. ಸ್ವಾರ್ಥ ರಹಿತ ಬದುಕಿಗೆ ಬೆಲೆಯಿದೆ. ಶ್ರಮದಿಂದ ಗಳಿಸಿದ ಸಂಪತ್ತು ಸ್ಥಿರವಾಗಿರುತ್ತದೆ. ಶ್ರಮವಿಲ್ಲದ ಸಂಪತ್ತು ಬಯಸುವ ಜನ ಹೆಚ್ಚಾಗಿದ್ದಾರೆ. ಮಲೆನಾಡಿನಲ್ಲಿಯೂ ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಆತಂಕದ ಸಂಗತಿಯಾಗಿದ್ದು ನೀರಿನ ಸದ್ಬಳಕೆ ಮಾಡಿಕೊಂಡು ಹೋಗಬೇಕು. ಔದ್ಯೋಗಿಕ ಕ್ಷೇತ್ರಕ್ಕೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಕೃಷಿ ಕ್ಷೇತ್ರಕ್ಕೂ ಕೊಡುವ ಅಗತ್ಯವಿದೆ. ರೈತನ ಬೆವರಿಗೆ ಬೆಲೆ  ಬರುವಂತಾಗಬೇಕು. ಶ್ರೀ ರಂಭಾಪುರಿ ಪೀಠದಲ್ಲಿ ಕೃಷಿ ಮೇಳ ಹಮ್ಮಿಕೊಂಡು ರೈತ ಪರವಾದ ಚಿಂತನ ಮಂಥನ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹರುಷ ವ್ಯಕ್ತಪಡಿಸಿದರು.

ಡಾ|| ಮಮತಾ ರಾಣಿ ಅವರ ಸಂಶೋಧಿತ “ಅವಿಭಜಿತ ಬೆಂಗಳೂರು ಜಿಲ್ಲೆಯ ವೀರಭದ್ರ ಆರಾಧನೆ-ಒಂದು ಅಧ್ಯಯನ” ಕೃತಿಯನ್ನು ರಾಯಚೂರಿನ ಡಾ.ಚನ್ನಬಸವಯ್ಯ ಹಿರೇಮಠ ಬಿಡುಗಡೆ ಮಾಡಿ ಆದರ್ಶ ಬದುಕಿಗೆ ಸಾಹಿತ್ಯ ಸಂಸ್ಕೃತಿಯ ಅರಿವು ಮುಖ್ಯ. ಶಾಂತಿ ಸಮೃದ್ಧಿಯ ಬದುಕಿಗೆ ಪೂರ್ವಜರ ಚಿಂತನೆಗಳು ದಾರಿದೀಪ. ಶ್ರೀ ವೀರಭದ್ರಸ್ವಾಮಿ ಪರಾಕ್ರಮ ನಿಷ್ಠೆ ಶಿವ ಸಂಸ್ಕೃತಿಯ ಸಂವರ್ಧನ ಚಿಂತನಗಳನ್ನು ಅರಿಯುವ ಅವಶ್ಯಕತೆ ಇದೆಯೆಂದರು.



ಇದೇ ಸಂದರ್ಭದಲ್ಲಿ ಕೃತಿಕಾರರಾದ  ಡಾ. ಮಮತಾ ರಾಣಿ ಅವರಿಗೆ ಹಾಗೂ ಅಚಲೇರಿ ಹಿರೇಮಠದ ಸೂತ್ರೇಶ್ವರ ಶಿವಾಚಾರ್ಯ ಸ್ವಾಮಿಗಳಿಗೆ ಶಾಲು ಹೊದಿಸಿ ಸ್ಮರಣಿಕೆ ಫಲಪುಷ್ಪವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.

ನೇತೃತ್ವ ವಹಿಸಿದ ಸೂಡಿ ಜುಕ್ತಿ ಹಿರೇಮಠದ ಡಾ|| ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮ ಸಂಸ್ಕೃತಿ ಮಾನವ ಜನಾಂಗದ ವಿಕಾಸಕ್ಕೆ ಅಡಿಪಾಯ. ಎಲ್ಲ ವರ್ಗ ಸಮುದಾಯದವರ ಏಳಿಗೆಯನ್ನು ಬಯಸಿದ ಧರ್ಮ ವೀರಶೈವ. ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂಲ ತತ್ವ ಸಿದ್ಧಾಂತಗಳ ನೆಲೆಯಲ್ಲಿ ಬಹಳಷ್ಟು ಆಧ್ಯಾತ್ಮ ಜೀವಿಗಳು ಉಜ್ವಲ ಬದುಕನ್ನು ಕಟ್ಟಿಕೊಂಡಿದ್ದಾರೆ. ವೀರಶೈವ ಧರ್ಮ ಸಂಸ್ಕೃತಿಗೆ ವೀರಭದ್ರಸ್ವಾಮಿಯ ಕೊಡುಗೆ ಅಪಾರ. ಶ್ರೀ ರಂಭಾಪುರಿ ಪೀಠದಲ್ಲಿ ನೆಲೆ ನಿಂತ ಶ್ರೀ ವೀರಭದ್ರಸ್ವಾಮಿ ನಾಡಿನೆಲ್ಲೆಡೆಯಲ್ಲಿ ನೆಲೆಗೊಂಡು ಭಕ್ತ ಸಂಕುಲವನ್ನು ಸಂರಕ್ಷಿಸುತ್ತಿದ್ದಾನೆ. ಜಾತ್ರಾ ಜಯಂತಿ ಶುಭ ಪ್ರಸಂಗದಲ್ಲಿ ಹಲವಾರು ಆದರ್ಶ ಚಿಂತನೆಗಳು ನಡೆದಿರುವುದು ಭಕ್ತ ಸಮೂಹಕ್ಕೆ ಸಂತೋಷ ಉಂಟು ಮಾಡಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಸ್ಕರ ವೆನಿಲ್ಲಾ, ಎಸ್.ಹೆಚ್. ರಾಜಶೇಖರ್, ಹೆಚ್.ಎಂ.ಲೋಕೇಶ್, ಕುಮಾರಿ ಬಿ.ಸಿ.ಗೀತಾ,  ಟಿ.ಎಂ.ಉಮೇಶ ಕಲ್ಮಕ್ಕಿ, ಬಿ.ಎಸ್.ನಾಗರಾಜಭಟ್ ಭಾಗವಹಿಸಿದ್ದರು.

ಎನ್.ಆರ್.ಪುರ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸತೀಶ್ ಜೈನ್ ಸಮ್ಮೇಳನದ ನಿರ್ಣಯ ಮಂಡಿಸಿದರು. ಚೈತನ್ಯ ವೆಂಕಿ ಇವರು ಶ್ರೀ ಜಗದ್ಗುರುಗಳಿಗೆ ಗೌರವ ಸಮರ್ಪಿಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಜರುಗಿತು. ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢ ಶಾಲಾ ಮಕ್ಕಳು ಆಕರ್ಷಕ ನಾಟ್ಯ ಪ್ರದರ್ಶಿಸಿದರು. ಬೀರೂರು ರುದ್ರಮುನಿ ಶಿವಾಚಾರ್ಯರು ಸರ್ವರನ್ನು ಸ್ವಾಗತಿಸಿದರು. ಗಂಗಾಧರಸ್ವಾಮಿ ಹಿರೇಮಠ ವಿಠಲಾಪುರ ಇವರಿಂದ ಪ್ರಾರ್ಥನೆ, ಗಿರಿಜಾ ಕಲ್ಲೋಳಿಮಠ ಹಾಗೂ ಲಾವಣ್ಯ ಮಂಜುನಾಥ ಇವರಿಂದ ನಿರೂಪಣೆ ನಡೆದವು.

Leave a Comment