ಸಾಗರ ; ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ನ್ಯಾಯಾಲಯ ಆದೇಶ ನೀಡಿದರೂ ಸಹ ಕೆಎಸ್ಆರ್ಟಿಸಿ ಕ್ಯಾರೇ ಎಂದಿಲ್ಲ. ಹೀಗಾಗಿ ಆಕ್ರೋಶಗೊಂಡ ಕೋರ್ಟ್, ಬಸ್ ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ. ಅದರಂತೆ ಕೆಎಸ್ಆರ್ಟಿಸಿಯ ಶಿರಸಿ ಡಿಪೋದ ಬಸ್ ಅನ್ನು ತಂದು ಕೋರ್ಟ್ ಆವರಣದಲ್ಲಿ ನಿಲ್ಲಿಸಲಾಗಿದೆ.

ಏನಿದು ಘಟನೆ ?
2022ರ ಜುಲೈ 7 ರಂದು ಪತ್ರಿಕೆ ಹಂಚಲು ಹೋಗಿದ್ದ ಗಣೇಶ್ ಎನ್ನುವಾತನಿಗೆ ಸಾಗರದ ಪ್ರವಾಸಿ ಮಂದಿರದ ಎದುರು ಶಿರಸಿ ಡಿಪೋದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಗಣೇಶ್ ಮೃತಪಟ್ಟಿದ್ದ. ಇದರಿಂದ ಪರಿಹಾರ ಕೊಡಿಸುವಂತೆ ಮೃತರ ಕುಟುಂಬಸ್ಥರು ನಗರದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಗಣೇಶ್ ಅವರ ಪೋಷಕರಿಗೆ ಮೂರು ತಿಂಗಳೊಳಗೆ ಪರಿಹಾರ ನೀಡುವಂತೆ 2024ರ ಜುಲೈ 8 ರಂದು ನ್ಯಾಯಾಲಯ ಆದೇಶಿಸಿತ್ತು. ಆದರೆ ಇದುವರೆಗೂ ಕೆಎಸ್ಆರ್ಟಿಸಿ ಯಾವುದೇ ಪರಿಹಾರ ನೀಡಿಲ್ಲ. ಹೀಗಾಗಿ ಮೃತ ಗಣೇಶನ ತಾಯಿ ಉಮಾ ಅವರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಬಸ್ ಜಪ್ತಿ ಮಾಡುವಂತೆ ಆದೇಶ ನೀಡಿತ್ತು. ಅದರಂತೆ ಬಸ್ಸನ್ನೇ ಜಪ್ತಿ ಮಾಡಿ ನ್ಯಾಯಾಲಯದ ಆವರಣದಲ್ಲಿ ತಂದು ನಿಲ್ಲಿಸಲಾಗಿದೆ. ಪರಿಹಾರ ಮೊತ್ತ ಪಾವತಿಸಿ ಸಾರಿಗೆ ಇಲಾಖೆ ಈಗ ಬಸ್ ವಾಪಸ್ ಪಡೆಯಬೇಕಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.