ರಿಪ್ಪನ್‌ಪೇಟೆ ; “ಜೈನ ಧರ್ಮಿಯರಿಗೆ ಇಪ್ಪತ್ತನಾಲ್ಕು ತೀರ್ಥಂಕರರ ಉಪದೇಶಗಳು ಜೈನಾಚಾರದ ಬುನಾದಿಯಾಗಿದೆ. ಇಪ್ಪತ್ತನಾಲ್ಕನೇಯ ತೀರ್ಥಂಕರಾದ ಶ್ರೀ ಮಹಾವೀರ ತೀರ್ಥಂಕರರು ಜ್ಞಾನವೃದ್ಧಿಗಾಗಿ ಖಗೋಳ, ವೈಧ್ಯಕೀಯ, ವಿಜ್ಞಾನ, ಗಣಿತ, ಜ್ಯೋತಿಷ್ಯ, ವಾಸ್ತು ಮುಂತಾದ ವಿಷಯಗಳಲ್ಲಿ ಪಾರಂಗತರಾಗಿ ಮಾನವ ಕ್ಷೇಮ ಕಲ್ಯಾಣ ಮಾರ್ಗವನ್ನು ವೈಜ್ಞಾನಿಕ ದೃಷ್ಠಿಕೋನದಿಂದಲೂ ಸರಳವಾಗಿ ಪ್ರಚುರಪಡಿಸಿರುವರು. ಆಹಾರ-ವಿಹಾರ ಕ್ರಮಗಳನ್ನು, ಪರಿಸರ ಸಂರಕ್ಷಣೆ, ಪ್ರಾಣಿದಯಾ ವಿಚಾರವನ್ನು ಮನಮುಟ್ಟುವಂತೆ ಬೋಧಿಸಿರುವರು. ಹಾಗಾಗಿ ಅವರ ಉಪದೇಶಗಳು ಜೈನ ಪ್ರಾಚೀನ ಗ್ರಂಥಗಳ ಅವಲೋಕನ ಮತ್ತು ನಿತ್ಯ ನಿರಂತರ ಆಚರಿಸಲ್ಪಡುವ ಧರ್ಮಮಾರ್ಗವನ್ನು ನಂದಾದೀಪದಂತೆ ಬೆಳಗಿಸಿದೆ” ಎಂದು ಪರಮಪೂಜ್ಯ ಚತುರ್ಥಪಟ್ಟಾಚಾರ್ಯ ಶ್ರೀ 108 ಸುವಿಧಿಸಾಗರ ಮಹಾರಾಜರು ಮಂಗಳ ಪ್ರವಚನದಲ್ಲಿ ತಿಳಿಸಿದರು.

ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ದಿವ್ಯ ಸಾನಿಧ್ಯ, ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ 2624ನೇ ಶ್ರೀ ಮಹಾವೀರ ತೀರ್ಥಂಕರರ ಜನ್ಮಕಲ್ಯಾಣ ಸುದಿನವನ್ನು ಆಗಮೋಕ್ತ ವಿಧಿ-ವಿಧಾನದಲ್ಲಿ ನೆರವೇರಿಸಲಾಯಿತು.

ಸ್ವಸ್ತಿಶ್ರೀಗಳವರು “ಭಗವಾನ ಮಹಾವೀರ ಸ್ವಾಮಿ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಮಾನವ ಸಮಾಜಕ್ಕೆ ಅತ್ಯುತ್ತಮ ಧರ್ಮಸಂದೇಶ ಸಾರಿದ್ದಾರೆ ಎನ್ನುತ್ತಾ, ಜೈನ ಧರ್ಮದ ಸರ್ವಧರ್ಮ ಸಮನ್ವಯತೆ, ಪ್ರಾಣಿದಯೆ, ದಿನಚರ್ಯೆಯಲ್ಲಿ ಸಾಧನಾ ಮಾರ್ಗಗಳನ್ನು ಶ್ರೀ ಮಹಾವೀರರು ನಿರ್ದೇಶಿಸಿರುವುದನ್ನು ನಾವೆಲ್ಲರು ಪರಿಪಾಲಿಸೋಣ” ಎಂದರು.

ಮುನಿಶ್ರೀ ಗುಲಾಭಭೂಷಣರು, ಆರ್ಯಿಕೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭಗವಾನ ಮಹಾವೀರ ಜಯಂತಿ ಸಂದರ್ಭದಲ್ಲಿ ಶ್ರೀ ಮಹಾವೀರ ಸ್ವಾಮಿ ಜಿನಬಿಂಬದ ರಜತ ಪಲ್ಲಕ್ಕಿಯಲ್ಲಿ ಶೋಭಾಯಾತ್ರೆ, ಅರ್ಘ್ಯ ವಿಧಾರ್ಚನೆ, ನಾಮಕರಣ ವಿಧಿ-ವಿಧಾನಗಳು ಜರುಗಿದರು.

ಜಯ ಮಹಾವೀರ, ಅಹಿಂಸಾ ಪರಮೋಧರ್ಮ, ಮಹಾವೀರ ಕೀ ಜೈ ಜೈಕಾರಗಳು, ಜಿನಭಜನೆ ಸುಶ್ರಾವ್ಯವಾಗಿತ್ತು.

ಹೊಂಬುಜ ಶ್ರೀ ಪದ್ಮಾವತಿ ಮಹಿಳಾ ಮಂಡಲ, ಊರ ಪರವೂರ ಭಕ್ತರು ಜಿನಭಜನೆ, ಆರಾಧನೆಯಲ್ಲಿ ಪಾಲ್ಗೊಂಡರು.
ಶ್ರೀ ಪದ್ಮರಾಜ ಹಾಗೂ ಸಹ ಪುರೋಹಿತರು ಪೂಜಾ ವಿಧಿಯನ್ನು ಸ್ತ್ರೋತ್ರ ಪಠಣದ ಮೂಲಕ ನೆರವೇರಿಸಿದರು.