ಶಿವಮೊಗ್ಗ ; ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಇತ್ತೀಚಿಗೆ ನಡೆದ ಜನಿವಾರ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಜನಿವಾರ ಪ್ರಕರಣದ ಕುರಿತು ಸಂಬಂಧಪಟ್ಟ ಅಧಿಕಾರಿಗಳ ವಿಚಾರಣೆ ಹಾಗೂ ಸಿಸಿಟಿವಿ ವಿಡಿಯೋವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ. ಸಿಸಿಟಿವಿ ವಿಡಿಯೋದಲ್ಲಿ ಒಬ್ಬ ವಿದ್ಯಾರ್ಥಿ ಬರುತ್ತಾರೆ, ಇಬ್ಬರು ಸೆಕ್ಯೂರಿಟಿಗಳಿಗೆ ಆ ವಿದ್ಯಾರ್ಥಿಯೇ ಜನಿವಾರ ತೆಗೆದು ತೋರಿಸುತ್ತಾರೆ. ಇದಕ್ಕೆ ಅನುಮತಿ ಇದೆಯೇ ಎಂದಾಗ, ಆಗ ಸೆಕ್ಯೂರಿಟಿರವರು ಇಲ್ಲ ಎನ್ನುತ್ತಾರೆ. ಆ ವಿದ್ಯಾರ್ಥಿಯೇ ಪಕ್ಕಕ್ಕೆ ಹೋಗಿ ಜನಿವಾರ ತೆಗೆದುಕೊಂಡು ಬರುತ್ತಾರೆ. ಇನ್ನೋರ್ವ ವಿದ್ಯಾರ್ಥಿ ಬಂದಾಗ ಸೆಕ್ಯೂರಿಟಿರವರು ಜನಿವಾರ ಹಾಕಿಕೊಂಡು ಪರೀಕ್ಷಾ ಕೊಠಡಿಗೆ ಅವಕಾಶ ಇಲ್ಲ ಎಂದಾಗ, ವಿದ್ಯಾರ್ಥಿ ಇಲ್ಲ ನಾನು ಜನಿವಾರ ತೆಗೆಯುವುದಿಲ್ಲ ಎಂದು ಪರೀಕ್ಷಾರ್ಥಿಯನ್ನು ಸೆಕ್ಯೂರಿಟಿರವರು ಪರೀಕ್ಷಾ ಕೇಂದ್ರದ ಒಳಗೆ ಬಿಡದೆ ಅಲ್ಲೆ ಕೂರಿಸುತ್ತಾರೆ. ಆಗ ಕಾಲೇಜಿನ ಪ್ರಾಂಶುಪಾಲರು ಅಲ್ಲಿ ಬಂದು ವಿದ್ಯಾರ್ಥಿ ಕುಳಿತುಕೊಂಡಿರುವ ಕುರಿತು ವಿಚಾರಿಸಿದಾಗ ಜನಿವಾರದ ವಿಚಾರವನ್ನು ಸೆಕ್ಯೂರಿಟಿರವರು ಹೇಳಿದಾಗ ಸಂಪ್ರದಾಯಕ್ಕೆ ಅಡ್ಡಿಪಡಿಸುವ ಯಾವುದೇ ಕ್ರಮ ಇಲ್ಲ. ವಿದ್ಯಾರ್ಥಿ ಹೋಗಿ ಪರೀಕ್ಷೆ ಬರೆಯಬಹುದು ಎಂದು ಹೇಳಿ ವಿದ್ಯಾರ್ಥಿಯನ್ನು ಪರೀಕ್ಷೆ ಬರೆಯಲು ಒಳಗೆ ಕಳುಹಿಸಿಕೊಟ್ಟಿರುತ್ತಾರೆ.
ಇಲ್ಲಿ ಪರೀಕ್ಷೆ ಬರೆಯಲು ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವುದಿಲ್ಲ. ಸರಿಯಾದ ಸಮಯಕ್ಕೆ ಹೋಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುತ್ತಾರೆ. ಇಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆಯೆಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದ್ದರಿಂದ ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಅಲ್ಲದೆ, ಮುಂದಿನ ಹಂತದ ತನಿಖೆಗೆ ಆದೇಶ ಮಾಡಲಾಗಿದೆ.
ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಸಮಯ ಪ್ರಜ್ಞೆ ಹಾಗೂ ಸಕಾಲಿಕಾ ಕ್ರಮಗಳಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ತೊಂದರೆ ಆಗಿಲ್ಲ. ಆದರೆ ಇಬ್ಬರು ಸೆಕ್ಯೂರಿಟಿ ರವರ ತಿಳುವಳಿಕೆಯ ಕೊರತೆಯಿಂದ ಈ ರೀತಿಯ ಘಟನೆ ನಡೆದಿದೆ.
ಬ್ರಾಹ್ಮಣ ಮಹಾಸಭಾದ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಇಲ್ಲಿ ಜನಿವಾರ ಕತ್ತರಿಸಲಾಗಿಲ್ಲ. ಜನಿವಾರವನ್ನು ವಿದ್ಯಾರ್ಥಿಯ ಕೈಯಿಂದಲೇ ತೆಗೆಯಿಸಲಾಗಿದೆ ಎಂದರು.
ಜನಿವಾರ ಪ್ರಕರಣದ ಕುರಿತು ಸೂಕ್ತ ತನಿಖೆಗೆ ಆದೇಶಿಸಲಾಗಿದೆ ಅಲ್ಲದೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಲಾಗಿದೆ. ಇಲ್ಲಿ ಜನಿವಾರವನ್ನು ಕತ್ತರಿಸಿ, ಕಸದ ಬುಟ್ಟಿಗೆ ಎಸೆಯುವ ಯಾವ ಕುಕೃತ್ಯವೂ ನಡೆದಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ಜನಿವಾರ ತೆಗೆದುಕೊಂಡು ಬನ್ನಿ ಎನ್ನುವುದು ಸಹ ಒಪ್ಪುವಂತದ್ದು ಅಲ್ಲ. ಈ ಜನಿವಾರದ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದರು.
ಗೃಹ ರಕ್ಷಕ ದಳದ ಇಬ್ಬರು ಸಿಬ್ಬಂದಿಯನ್ನು ಗೃಹ ರಕ್ಷಕ ದಳದ ಕಮಾಂಡೆಟ್ ಅಮಾನತು ಮಾಡಿದ್ದಾರೆ. ಅಮಾನತು ಕುರಿತ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.