ಶಿವಮೊಗ್ಗ ; ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗದ ಮೂಲದ ವ್ಯಕ್ತಿ ಸಾವನ್ನಪ್ಪಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ (47) ಮೃತ ದುರ್ಧೈವಿ. ಶಿವಮೊಗ್ಗ ವಿಜಯನಗರ ನಿವಾಸಿಯಾಗಿರುವ ಮಂಜುನಾಥ್ ಅವರು ಪತ್ನಿ ಪಲ್ಲವಿ ಹಾಗೂ ಪುತ್ರ ಅಭಿಜೇಯ ಜೊತೆ ಪ್ರವಾಸಕ್ಕೆ ಹೋಗಿದ್ದರು. ಮಂಜುನಾಥ್ ಕುಟುಂಬಸ್ಥರು ಏ.19 ರಂದು ಶಿವಮೊಗ್ಗದಿಂದ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದ ವೇಳೆ ಕಾಶ್ಮೀರದ ಪೆಹಲ್ಗಾವ್ ಬಳಿ ಉಗ್ರ ದಾಳಿ ನಡೆದಿದೆ. ದಾಳಿಯಲ್ಲಿ ಮಂಜುನಾಥ್ ರಾವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಜುನಾಥ್ ಪತ್ನಿ ಹಾಗೂ ಪುತ್ರರನ್ನು ರಕ್ಷಿಸಿರುವ ಸ್ಥಳೀಯರು ಬೇರೆಡೆ ಕರೆದೊಯ್ದಿದ್ದಾರೆ.

ಮೋದಿಗೆ ಹೇಳು ಎಂದ ಉಗ್ರ !
ಪ್ರವಾಸಕ್ಕೆ ತೆರಳಿದ್ದ ಮಂಜುನಾಥ್ ಕುಟುಂಬದ ಬಳಿ ಬಂದ ಉಗ್ರನೊಬ್ಬ ಮಂಜುನಾಥ್ ಅವರನ್ನು ಗುಂಡಿಕ್ಕಿ ಕೊಂದಿದ್ದಾನೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮಂಜುನಾಥ್ ಪತ್ನಿ ಪಲ್ಲವಿ ಅವರು, “ನೀನು ನನ್ನನ್ನು ಮತ್ತು ಮಗನನ್ನು ಕೊಲ್ಲು ಎಂದು ಹೇಳಿದೆ. ಆದರೆ ಆ ಉಗ್ರ, ʼನಾನು ನಿನ್ನನ್ನು ಕೊಲ್ಲಲ್ಲ. ನೀನು ಹೋಗಿ ಮೋದಿಗೆ ಹೇಳುʼ ಎಂದ” ಎಂದು ಹೇಳಿದ್ದಾರೆ.