ಹೊಸನಗರ ಭಾಗದಲ್ಲಿ ಪ್ರವಾಸೋದ್ಯಮ ಹಬ್ ರಚಿಸುವ ಚಿಂತನೆ ; ಸಂಸದ ಬಿ.ವೈ.ರಾಘವೇಂದ್ರ

Written by malnadtimes.com

Published on:

ಹೊಸನಗರ ; ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ 1000 ಕೋಟಿ ರೂ. ಗಳಿಗೂ ಹೆಚ್ಚು ಅನುದಾನದಲ್ಲಿ ಭರದಿಂದ ಸಾಗುತ್ತಿದೆ. ಹೆದ್ದಾರಿ ಅಭಿವೃದ್ಧಿ ಹೊಸನಗರ ಪಟ್ಟಣದ ಮಾವಿನಕೊಪ್ಪ ಹಾಗೂ ಅಡಗೋಡಿ ಸಂಪರ್ಕ ಬೈಪಾಸ್ ರಸ್ತೆ ಕಾಮಗಾರಿ ನಡುವೆ ಎರಡು ಬೃಹತ್ ಸೇತುವೆ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದೆ. ಸುತ್ತಾ ರ‍್ಯಾವೆ ನೂತನ ಸೇತುವೆ 320 ಕೋಟಿ ರೂ. ಹಾಗೂ ಬೆಕ್ಕೋಡಿ ಸೇತುವೆಗೆ 200 ಕೋಟಿ ರೂ. ಅನುದಾನದಲ್ಲಿ ಇಕೋ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕಾಮಗಾರಿ ನಡೆಯುತ್ತಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಹೊಸನಗರದಿಂದ ಅಡಗೋಡಿವರೆಗೆ 122 ಕ್ಕೂ ಹೆಚ್ಚು ರಸ್ತೆ ತಿರುವುಗಳನ್ನು ಸರಳೀಕರಣಗೊಳಿಸಿ ಬೈಪಾಸ್ ರಸ್ತೆ ನಿರ್ಮಾಣಗೊಳಿಸಲಾಗುತ್ತಿದೆ. ಇದರಿಂದ ಒಟ್ಟಾರೆ 25 ಕಿ.ಮೀ. ದೂರ ಹಾಗೂ ಸಂಚಾರಕ್ಕೆ ಸಮಯದ ಉಳಿತಾಯವಾಗುತ್ತದೆ. ಮುಂದಿನ ಏಳೆಂಟು ತಿಂಗಳ ಒಳಗಾಗಿ ಕಾಮಗಾರಿ ಸಂಪೂರ್ಣಗೊಂಡು ರಸ್ತೆ ಲೋಕಾರ್ಪಣೆಗೊಳ್ಳುವ ವಿಶ್ವಾಸವಿದೆ ಎಂದರು.

ಕೊಡಚಾದ್ರಿ-ಕೊಲ್ಲೂರು ನಡುವೆ ಕೇಬಲ್ ಕಾರ್ ಕಾಮಗಾರಿ ಶೀಘ್ರದಲ್ಲಿಯೇ ಆರಂಭಗೊಳ್ಳಲಿದ್ದು, ಈ ಭಾಗದ ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ. ನಗರ ಕೋಟೆ ಒಳಗೊಂಡಂತೆ ಈ ಭಾಗದ ಜೈನ ಬಸದಿಗಳ ಭೇಟಿಗೆ ಅನುವಾಗುವಂತೆ ಪ್ರವಾಸೋದ್ಯಮ ಹಬ್ ನಿರ್ಮಿಸುವ ಚಿಂತನೆ ನಡೆಸಲಾಗಿದೆ. ಮೇ 8 ರಂದು ಬೈಂದೂರಿಗೆ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಭೇಟಿ ನೀಡಲಿದ್ದು, ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಅವರ ಜೊತೆ ಚರ್ಚೆ ನಡೆಸಲಾಗುವುದು ಎಂದರು.

ಈ ವೇಳೆ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಮತ್ತಿಮನೆ ಸುಬ್ರಮಣ್ಯ, ಮಾಜಿ ಅಧ್ಯಕ್ಷ ಗಣಪತಿ ಬೆಳಗೋಡು, ಜಿ.ಪಂ.ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ತಾ.ಪಂ. ಮಾಜಿ ಅಧ್ಯಕ್ಷ ಆಲವಳ್ಳಿ ವೀರೇಶ್, ಮಾಮ್‌ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ಪಕ್ಷದ ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷ ಎಂ.ಎನ್.ಸುಧಾಕರ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್ ಪ್ರಮುಖರಾದ ಟಿ.ಡಿ.ಮೇಘರಾಜ್, ಬಿ.ಯುವರಾಜ್, ಎನ್.ಆರ್.ದೇವಾನಂದ, ಶಿವಾನಂದ, ತೀರ್ಥೇಶ, ಬಸವರಾಜ ಮೊದಲಾದವರು ಇದ್ದರು.

Leave a Comment