ಅರಸಾಳು ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಡಾನೆಗಳನ್ನು ಸ್ಥಳಾಂತರಿಸಲು ಶತಾಯಗತಾಯ ಪ್ರಯತ್ನ

Written by malnadtimes.com

Published on:

ರಿಪ್ಪನ್‌ಪೇಟೆ ; ಕಳೆದ ಐದಾರು ತಿಂಗಳಿಂದ ಮಲೆನಾಡಿನ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡಿನ ಉಪಟಳದಿಂದಾಗಿ ರೈತಾಪಿ ವರ್ಗ ಮತ್ತು ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಜೀವ ಭಯದಲ್ಲಿ ಓಡಾಡುವಂತಾಗಿದ್ದು ಇತ್ತೀಚೆಗೆ ಓರ್ವನ ಬಲಿ ಸಹ ಪಡೆದ ಹಿನ್ನೆಲೆಯಿಂದಾಗಿ ಅರಣ್ಯ ಇಲಾಖೆಯವರು ಕಾಡಾನೆಗಳ ಹಿಂಡನ್ನು ಸ್ಥಳಾಂತರಿಸಲು ಶತಾಯಗತಾಯ ಪ್ರಯತ್ನದೊಂದಿಗೆ ಪಣತೊಟ್ಟು ಕಾಡಾನೆಗಳ ಹಿಂಡಿಗೆ ಭಯ ಹುಟ್ಟಿಸುತ್ತಾ ಓಡಿಸಿಕೊಂಡು ದಾಟಿಸುವ ಪ್ರಯತ್ನದಿಂದಾಗಿ ಇಂದು ಶಿವಮೊಗ್ಗ-ರಿಪ್ಪನ್‌ಪೇಟೆ ಮಾರ್ಗದ ಸೂಡೂರು ಬಳಿ ಕೆಲಕಾಲ ವಾಹನ ಸಂಚಾರ ನಿಷೇಧಿಸಿದ್ದು ಕೆಲ ಸಮಯ ಸಂಚಾರ ಅಸ್ತವ್ಯಸ್ತವಾಗಿತ್ತು.

WhatsApp Group Join Now
Telegram Group Join Now
Instagram Group Join Now

ಕಳೆದೊಂದು ವಾರದ ಹಿಂದೆ ಆಲವಳ್ಳಿ ಗ್ರಾಮದ ಮಜರೆ ಕಮದೂರು ಬಳಿ ಅಡಿಕೆ, ಬಾಳೆ ತೋಟಕ್ಕೆ ನುಗ್ಗಿ ಬೆಳೆ ನಾಶಗೊಳಿಸಿರುವುದು ಹಾಗೂ ಹಾರೋಹಿತ್ತಲು, ಬಸವಾಪುರ, ಬಟಾಣಿಜಡ್ಡು, ತುಪ್ಪೂರು, ಸೂಡೂರು, ಗಿಳಾಲಗುಂಡಿ, ಕೋಣೆಹೊಸೂರು, ತಂಗಳವಾಡಿ ಸೇರಿದಂತೆ ಹೀಗೆ ಹಲವು ಕಡೆಯಲ್ಲಿ ಕಾಡಾನೆಗಳ ಗುಂಪು ಕಾಣಿಸಿಕೊಂಡು ರೈತರ ಭತ್ತ, ಅಡಿಕೆ, ಬಾಳೆ ಬೆಳೆ ಧ್ವಂಸಗೊಳಿಸಿರುವ ಬಗ್ಗೆ ಮಾಜಿ ಸಚಿವ ಹರತಾಳು ಹಾಲಪ್ಪ ನೇತೃತ್ವದಲ್ಲಿ ಶಿವಮೊಗ್ಗ ಸಿಸಿಎಫ್ ಕಛೇರಿ ಎದುರು ನೂರಾರು ರೈತ ಮುಖಂಡರೊಂದಿಗೆ ಪ್ರತಿಭಟನೆ ಸಹ ನಡೆಸುವ ಮೂಲಕ ಆನೆಗಳನ್ನು ಕೂಡಲೇ ಸ್ಥಳಾಂತರ ಮಾಡುವಂತೆ ಆಗ್ರಹಿಸಿರುವ ಬೆನ್ನಲೇ ಇಂದು ಅರಸಾಳು ವಲಯ ಅರಣ್ಯಾಧಿಕಾರಿ ಶರಣಪ್ಪ ಮತ್ತು ಚೋರಡಿ ಆಯನೂರು, ಸಿರಿಗೆರೆ ವಲಯ ವ್ಯಾಪ್ತಿಯ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ ಆನೆಗಳ ಜಾಡು ಹಿಡಿದು ಪಟಾಕಿ ಶಬ್ದ ಮಾಡಿ ಓಡಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದು ಸೂಡೂರು ಅವಣಿಗೆ ಕ್ರಾಸ್ ಹತ್ತಿರ ಬರುತ್ತಿದ್ದಂತೆ ಪುನಃ ಕಾಡಿನೊಳಗೆ ಹಿಂತಿರುಗಿ ಓಡಿ ವಾಪಾಸ್ಸಾಗಿರುತ್ತವೆಂದು ಹೇಳಲಾಗಿದೆ.

ಒಟ್ಟಾರೆಯಾಗಿ ಮಲೆನಾಡಿನ ವ್ಯಾಪ್ತಿಯಲ್ಲಿ ರೈತಾಪಿ ವರ್ಗ ಕಾಡಾನೆಗಳ ಉಪಟಳಕ್ಕೆ ಹೈರಾಣಾಗಿದ್ದು ಇಲಾಖೆಯವರಿಗೆ ಹಿಡಿಶಾಪ ಹಾಕುತ್ತಾ ನಮಗೆ ಜೀವನ ನಡೆಸಲು ರಕ್ಷಣೆ ಮಾಡಿಕೊಡಿ ಎನ್ನುವ ಹಂತಕ್ಕೆ ತಲುಪಿದ್ದಾರೆ.

Leave a Comment