Hosanagara

ವಿಧಾನಸಭಾ ಕ್ಷೇತ್ರಕ್ಕಾಗಿ ಗಟ್ಟಿಗೊಂಡ ಧ್ವನಿ ; ಹೊಸನಗರ ಕ್ಷೇತ್ರ ಮರು ಸ್ಥಾಪನೆಗೆ ನಗರದಿಂದ ಪಾದಯಾತ್ರೆ

ಹೊಸನಗರ ; ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಪುನರ್‌ಸ್ಥಾಪನೆಗೆ ಬೇಡಿಕೆ ಸಲ್ಲಿಸುವ ಹಕ್ಕು ಇಲ್ಲಿನ ಜನತೆಗಿದೆ. ಮುಳುಗಡೆಯಿಂದ ಬದುಕು ಕಳೆದುಕೊಂಡ ಜನತೆಗೆ ಆಡಳಿತಾತ್ಮಕ ಸುವ್ಯವಸ್ಥೆ ಸಿಗುವಂತಾಗಲು ಪ್ರತ್ಯೇಕ ಕ್ಷೇತ್ರ ರಚನೆಯೇ ಪರಿಹಾರವಾಗಿದೆ ಎಂದು ಹೊಸನಗರ ವಿಧಾನಸಭಾ ಕ್ಷೇತ್ರ ಪುನರ್‌ ರಚನಾ ಸಮಿತಿ ಅಧ್ಯಕ್ಷರಾಗಿರುವ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ತಾಲೂಕಿನ ಬಿದನೂರು ನಗರದಿಂದ ಭಾನುವಾರ ಆರಂಭಗೊಂಡ ಪಾದಯಾತ್ರೆಯ ಮೊದಲ ದಿನದ ಸಭೆಯಲ್ಲಿ ಅವರು ಮಾತನಾಡಿದ ಅವರು, ಹೊಸನಗರದ ಜನತೆ ಒಂದಲ್ಲಾ ಒಂದು ಸಂಕಷ್ಟ ಅನುಭವಿಸುತ್ತಲೇ ಬಂದಿದ್ದಾರೆ. ಕಳೆದ 25 ವರ್ಷಗಳ ಹಿಂದೆ ಕ್ಷೇತ್ರವನ್ನೂ ಕಳೆದುಕೊಂಡಿದ್ದೇವೆ. ತಾಲೂಕನ್ನು ಇಬ್ಭಾಗ ಮಾಡಿ ಎರಡು ಕ್ಷೇತ್ರಗಳಿಗೆ ಹಂಚಿರುವುದು ಅನ್ಯಾಯ. ಈಗ ಕಾಲ ಕೂಡಿಬಂದಿದೆ. ನಮ್ಮ ಧ್ವನಿ ಗಟ್ಟಿಯಾಗಬೇಕಿದೆ. ಹೊಸನಗರ ವಿಧಾನಸಭಾ ಕ್ಷೇತ್ರ ರಚನೆ ಆಗುವವವರೆಗೂ ಹೋರಾಟದ ನಿರಂತರತೆ ಕಾಪಾಡಿಕೊಳ್ಳಬೇಕಿದೆ. ಸಾರ್ವಜನಿಕರು ಭಿನ್ನ ಭೇದ ಮರೆತು ಪಾಲ್ಗೊಳ್ಳಬೇಕೆಂದು ಅವರು ಕರೆ ನೀಡಿದರು.

ತಾಲೂಕು ಭೌಗೋಳಿಕವಾಗಿ ವಿಸ್ತಾರವಾಗಿದೆ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ನಮ್ಮದಲ್ಲದ ತಪ್ಪಿಗೆ ಮುಳುಗಡೆ ಸಮಸ್ಯೆ ಅನುಭವಿಸಿದ್ದೇವೆ. ಇದರಿಂದಾಗಿಯೇ ಇಲ್ಲಿ ಜನಸಂಖ್ಯೆ ಕಡಿಮೆಯಾಗಿದೆ. ಇದನ್ನೇ ಕಾರಣವಾಗಿಟ್ಟುಕೊಂಡು ನಮ್ಮ ಬೇಡಿಕೆ ತಿರಸ್ಕರಿಸುವುದು ನ್ಯಾಯವಲ್ಲ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, 2008ರ ಮೊದಲು ನಡೆದ ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿಯೇ ತಮಗೆ ಆಡಳಿತಾತ್ಮಕ ಸಮಸ್ಯೆ ಆಗುವ ಮುನ್ಸೂಚನೆ ಸಿಕ್ಕಿತ್ತು. ತಾವು ಹಾಗೂ ಕಾಗೋಡು ತಿಮ್ಮಪ್ಪ ಹೊಸನಗರ ಕ್ಷೇತ್ರ ರದ್ದುಗೊಳಿಸುವ ತೀರ್ಮಾನವನ್ನು ವಿರೋಧಿಸಿದ್ದೆವು. ಆದರೆ ಅಂದಿನ ಆಯೋಗ ನಮ್ಮ ಅಹವಾಲನ್ನು ಮಾನ್ಯ ಮಾಡಲಿಲ್ಲ. ಕೇಂದ್ರ ಸರ್ಕಾರ ಈಗ ಪುನರ್‌ ವಿಂಗಡಣೆಗೆ ಮುಂದಾಗಿದೆ. ವಿಶೇಷ ಲೋಕಸಭಾ ಅಧಿವೇಶನ ಸಹಾ ನಡೆಯಲಿದೆ. ಮತ್ತೊಮ್ಮೆ ಕ್ಷೇತ್ರ ಪುನರ್‌ ರಚನೆ ಆಗುವ ವಿಶ್ವಾಸವಿದೆ ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಹೊಸನಗರ ಕ್ಷೇತ್ರ ಹೋರಾಟಕ್ಕೆ ತಮ್ಮ ಸಂಪೂರ್ಣ ಸಹಮತವಿದೆ. ಒಂದು ತಾಲೂಕು ಎರಡು ಕ್ಷೇತ್ರಗಳಿಗೆ ಹಂಚಿ ಹೋಗಿರುವುದರಿಂದ ಕೇವಲ ಜನತೆಗಷ್ಟೇ ಅಲ್ಲ, ಆಡಳಿತ ನಡೆಸುವವರಿಗೂ ಸಮಸ್ಯೆಗಳಾಗುತ್ತವೆ ಎಂದರು.

ನಾರಾಯಣಗುರು ಮಠದ ಶ್ರೀರೇಣುಕಾನಂದ ಸ್ವಾಮೀಜಿ, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಕಿಮ್ಮನೆ ರತ್ನಾಕರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಶಿಮುಲ್ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ, ಹೋರಾಟ ಸಮಿತಿಯ ಪ್ರಮುಖರಾದ ಮಾಜಿ ಶಾಸಕ ಬಿ.ಸ್ವಾಮಿರಾವ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಬಿ.ಜಿ. ಚಂದ್ರಮೌಳಿ, ಕೆ.ವಿ. ಕೃಷ್ಣಮೂರ್ತಿ, ಹಾಲಗದ್ದೆ ಉಮೇಶ್, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಎನ್.ಆರ್. ದೇವಾನಂದ್, ಚಿದಂಬರ, ಆಲವಳ್ಳಿ ವೀರೇಶ್, ಎಂ.ಎಂ. ಪರಮೇಶ್, ಬಂಡಿ ರಾಮಚಂದ್ರ, ಶ್ವೇತಾ ಬಂಡಿ, ಸುಮಾ ಸುಬ್ರಹ್ಮಣ್ಯ, ಕರುಣಾಕರ ಶೆಟ್ಟಿ, ನಾರಾಯಣ ಕಾಮತ್, ಸುರೇಶ್ ಸ್ವಾಮಿರಾವ್, ಮುರುಳಿ, ರಿಪ್ಪನ್‌ಪೇಟೆ ಚಾಬುಸಾಬ್, ರಿಪ್ಪನ್‌ಪೇಟೆ ವರ್ತೆಶ್, ಚರ್ಚ್ ಪಾದ್ರಿಗಳು ಮಾಸೀದಿಯ ಧರ್ಮಗುರುಗಳು ವಿವಿಧ ಧಾರ್ಮಿಕ ಸಂಸ್ಥೆ ಪ್ರಮುಖರು ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

95 ವರ್ಷದ ಮಾಜಿ ಶಾಸಕ ಬಿ.ಸ್ವಾಮಿರಾವ್ ಪಾದಯಾತ್ರೆಯಲ್ಲಿ ಭಾಗಿ !

ನನ್ನ ಜೀವಿತಾವಧಿಯಲ್ಲಿ ಹೊಸನಗರ ಕ್ಷೇತ್ರ ಮಾಡಬೇಕು ಹೊಸನಗರ ಕ್ಷೇತ್ರಕ್ಕೆ ಶಾಸಕರನ್ನು ಮಾಡಬೇಕು ಎಂಬ ಹಠ ಹಿಡಿದು ಈ ಹೋರಾಟದ ರೂವಾರಿಯಾಗಿರುವ ಹೊಸನಗರ ಕ್ಷೇತ್ರದ ಮಾಜಿ ಶಾಸಕ ಬಿ.ಸ್ವಾಮಿರಾವ್‌ 95ನೇ ವಯಸ್ಸಿನಲ್ಲಿ ಯಾವುದೇ ಯುವಕರಿಗಿಂತ ಕಮ್ಮಿಯಿಲ್ಲದಂತೆ ನಗರ ಬಿದನೂರಿನಿಂದ ಹೊಸನಗರಕ್ಕೆ ಸುಮಾರು 16 ಕಿ.ಮೀ. ಕಾಲ್ನಡಿಗೆಯಲ್ಲಿ ಪಾದಯಾತ್ರೆ ನಡೆಸಿದ್ದು ನಾಳೆಯೂ ಸುಮಾರು 26 ಕಿ.ಮೀ. ದೂರದ ರಿಪ್ಪನ್‌ಪೇಟೆಯವರೆಗೂ ನಡೆಯುವುದಾಗಿ ಹೇಳಿದ್ದು ಯಾರ ಮಾತಿಗೂ ಸೊಪ್ಪು ಹಾಕದೇ ಯಾವುದೇ ವಾಹನವನ್ನು ಏರದೇ ಪಾದಯಾತ್ರೆ ನಡೆಸುತ್ತಿದ್ದಾರೆ.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>