ಹೊಸನಗರ : ತಾಲ್ಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ವೆ ನಂಬರ್ 15ರಲ್ಲಿ ಬಲಾಢ್ಯರೊಬ್ಬರು ಸುಮಾರು 50 ವರ್ಷಗಳ ಹಳೆಯ ಬಾವಿಯನ್ನು ವಶಪಡಿಸಿಕೊಂಡು ನಂತರ ಆ ಬಾವಿಯನ್ನು ಮುಚ್ಚಿ ಜಾಗ ಕಬಳಿಕೆ ಮಾಡಿದ್ದಾರೆ. ಎಂ ಗುಡ್ಡೆಕೊಪ್ಪ ಈ ಬಗ್ಗೆ ಗ್ರಾಮ ಪಂಚಾಯತಿಯ ಅಂದಿನ ಸದಸ್ಯರೊಬ್ಬರು ಆ ಜಾಗಕ್ಕೆ ಬೇಲಿ ಹಾಕಿ ಗ್ರಾಮ ಪಂಚಾಯತಿಯ ಜಾಗ ಎಂದು ಬೋರ್ಡ್ ಹಾಕಿದ್ದರೂ ಆ ಬೋರ್ಡ್ ಮಾಯವಾಗಿ ಜಾಗ ಬಲಾಢ್ಯರ ಪಾಲಾಗಿದೆ ಎಂದು ಮಾವಿನಕೊಪ್ಪ ದಲಿತ ಸಂಘರ್ಷ ಸಮಿತಿಯ ಸದಸ್ಯ ಮಂಜುನಾಥ್ (ಬಾಬು) ಗ್ರಾಮ ಪಂಚಾಯತಿ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ ಎಂದು ಆಪಾದಿಸಿದ್ದಾರೆ.
ಆದರೆ ಬಾವಿ ಮುಚ್ಚಿದ್ದರೂ ಆ ಜಾಗವನ್ನಾದರೂ ಗ್ರಾಮ ಪಂಚಾಯತಿಯವರು ವಶಪಡಿಸಿಕೊಳ್ಳಲಿ, ಇಲ್ಲವಾದರೆ ಮುಂದಿನ ದಿನದಲ್ಲಿ ಮುಚ್ಚಿರುವ ಬಾವಿಗಾಗಿ ಹಾಗೂ ಗ್ರಾಮ ಪಂಚಾಯತಿಯ ಜಾಗಕ್ಕಾಗಿ ಹೋರಾಟ ಅನಿವಾರ್ಯ ಎಂದು ಅಧಿಕಾರಿಗಳಿಗೆ ಅವರು ಎಚ್ಚರಿಸಿದ್ದಾರೆ.
ಮಾಯವಾಗುವ ಹಂತದಲ್ಲಿದೆ ಇನ್ನೊಂದು ಬಾವಿ !
ಶಿವಮೊಗ್ಗ ರಸ್ತೆಯಲ್ಲಿರುವ ಸುಮಾರು 50 ವರ್ಷದ ಹಳೆಯ ಬಾವಿಯನ್ನು ಬಲಾಢ್ಯರು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳುವ ಸಂಚು ನಡೆಯುತ್ತಿದೆ ಎಂದು ಮಂಜುನಾಥ್ ಆಪಾದಿಸುತ್ತಿದ್ದು, ಮುಂದಿನ ದಿನದಲ್ಲಿ ಆ ಬಾವಿಯನ್ನು ಗ್ರಾಮ ಪಂಚಾಯತಿಯ ಸ್ವಾಧೀನಕ್ಕೆ ಪಡೆದು ಸರ್ಕಾರಿ ಬಾವಿಯಿರುವ ಜಾಗಕ್ಕೆ ಬೇಲಿ ಹಾಕಿ ಸಾರ್ವಜನಿಕರಿಗೆ ನೀರಿಗೆ ಅನುಕೂಲ ಮಾಡಿದರೆ ಸರ್ಕಾರಿ ಬಾವಿ ಉಳಿಸಬಹುದು ಎಂದಿದ್ದಾರೆ.
ಲೇಖನವನ್ನು ಮುಂದುವರಿಸಿ ಓದಿ
ಹೊಸನಗರ ತಾಲ್ಲೂಕಿನಲ್ಲಿ ಮಳೆಯಿಲ್ಲದೆ ಮುಂದಿನ ದಿನದಲ್ಲಿ ಕುಡಿಯುವ ನೀರಿಗೆ ಅಭಾವವಾಗುವ ಸಂದರ್ಭ ಬರುತ್ತಿದೆ. ಮಾವಿನಕೊಪ್ಪದಲ್ಲಿ ಒಂದೆರಡು ಸರ್ಕಾರಿ ಕಲ್ಲಿನ ಬಾವಿ ಬಿಟ್ಟರೆ ಬಾವಿಗಳಿಲ್ಲ. ಬಲಾಢ್ಯರು ಈ ರೀತಿ ಸರ್ಕಾರಿ ಬಾವಿಗಳನ್ನು ಮುಚ್ಚಿ ಆ ಜಾಗವನ್ನು ತಮ್ಮ ಸ್ವಾದೀನಕ್ಕೆ ಪಡೆದುಕೊಂಡರೆ ಇಲ್ಲಿನ ಗ್ರಾಮಸ್ಥರ ಕಥೆಯೇನು? ಎಂದು ಅವರು ಪ್ರಶ್ನಿಸಿದ್ದಾರೆ.
ಅಧಿಕಾರಿಗಳೇ ಇತ್ತ ಗಮನ ಹರಿಸಿ :
ಒಂದು ಕಲ್ಲಿನ ಬಾವಿ ತೆಗೆಸಬೇಕೆಂದರೆ ಸುಮಾರು ಎರಡ್ಮೂರು ಲಕ್ಷ ಹಣಬೇಕು. ಜೊತೆಗೆ ಗ್ರಾಮ ಪಂಚಾಯತಿಯ ಜಾಗವಿರಬೇಕು. ಸುಮಾರು ಹತ್ತಾರೂ ವರ್ಷಗಳ ಕಾಲ ಮಾವಿನಕೊಪ್ಪ ಗ್ರಾಮಸ್ಥರ ಜೀವ ಉಳಿಸಿರುವ ಸರ್ಕಾರಿ ಬಾವಿಯನ್ನು ಮುಚ್ಚಿದರೆ ಇಲ್ಲಿನ ಸಾರ್ವಜನಿಕರ ಗತಿಯೇನು? ಎಂದು ಅವರು ಪ್ರಶ್ನಿಸಿದ್ದು, ಹೊಸನಗರ ತಹಸೀಲ್ದಾರ್ ಭರತ್‌ರಾಜ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯ ಪಿಡಿಒ ರವಿ ಹಾಗೂ ಆಡಳಿತಾಧಿಕಾರಿಗಳು ತಕ್ಷಣ ಬಾವಿ ಮುಚ್ಚಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇನ್ನೊಂದು ಬಾವಿಯನ್ನು ಗ್ರಾಮ ಪಂಚಾಯತಿಯವರು ವಶಪಡಿಸಿಕೊಂಡು ಸುತ್ತ ಬೇಲಿ ಹಾಕಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಂಡಬೇಕೆಂದು ಅವರು ಮನವಿ ಮಾಡಿದ್ದಾರೆ.

