SORABA ; ಬೈಕ್ ಮತ್ತು ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಮಹಿಳೆಯೊಬ್ಬರು ತೀವ್ರ ಗಾಯಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಸಮೀಪದ ಜೋಳದಗುಡ್ಡೆಯ ವರದಾನದಿ ಸೇತುವೆ ಬಳಿ ಇಂದು ಮಧ್ಯಾಹ್ನ 3:30 ರ ಸುಮಾರಿಗೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಕಾರಕ್ಕಿ ಗ್ರಾಮದ ಬುಲ್ಡೋಜರ್ ಗುಡ್ಡ ನಿವಾಸಿ ಸುದರ್ಶನ್ ಬಂದಿಗೇರ್ (22) ಮೃತ ಯುವಕ.
ಸುದರ್ಶನ್ ಅವರ ಅತ್ತೆಯೊಂದಿಗೆ ಬೈಕಿನಲ್ಲಿ ತಮ್ಮ ಮನೆಯಿಂದ ಸೊರಬ ಮಾರ್ಗವಾಗಿ ಚಂದ್ರಗುತ್ತಿ ಸಮೀಪದ ಭದ್ರಾಪುರ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಚಂದ್ರಗುತ್ತಿ ಮಾರ್ಗವಾಗಿ ಆಗಮಿಸಿದ ಮಾರುತಿ 800 ಕಾರು ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.

ಅಪಘಾತದಲ್ಲಿ ತೀವ್ರ ಗಾಯಗೊಂಡ ಬೆಳ್ಳಮ್ಮ ಪುಟ್ಟಪ್ಪ ಚಿಟ್ಟಕ್ಕಿ (65) ಅವರಿಗೆ ಸೊರಬದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಸುದರ್ಶನ್ ತಂದೆ, ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದು ಸ್ವಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಘಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತ ಸುದರ್ಶನ್ ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.