ಹೊಸನಗರ ; ಹಾಡಹಗಲೇ ಮನೆ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಅರಸಾಳು ಗ್ರಾ.ಪಂ ವ್ಯಾಪ್ತಿಯ ಬಸವಾಪುರ ಗ್ರಾಮದ ಅಶೋಕ ಬಂಧಿತ ಆರೋಪಿ. ಕಳೆದ ವರ್ಷ ನವೆಂಬರ್ 30 ರಂದು ತಾಲೂಕಿನ ಮಾರುತಿಪುರ ಗ್ರಾಮದ ಸುಧೀಂದ್ರ ಹೊಳ್ಳ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಗಿಲು ಬೀಗ ಮುರಿದು ಸುಮಾರು 130 ಗ್ರಾಂ. ಚಿನ್ನಾಭರಣ ಕಳುವು ಮಾಡಿದ್ದರು. ಕೆಲ ತಿಂಗಳ ಹಿಂದೆ ಸಾಗರ ತಾಲೂಕಿನ ಆನಂದಪುರ ವ್ಯಾಪ್ತಿಯಲ್ಲಿ ನಡೆದ ಕಳುವು ಪ್ರಕರಣದಲ್ಲಿ ಬಂಧಿತನಾಗಿದ್ದ ಇದೇ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದ. ಬಳಿಕ ಹೊಸನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮಹಜರು ನಡೆಸಿದ್ದಾರೆ.

ಆನಂದಪುರ ಪೊಲೀಸರು ಆರೋಪಿಯಿಂದ 387ಗ್ರಾಂ. ಚಿನ್ನ, 384 ಗ್ರಾಂ ಬೆಳ್ಳಿ ಆಭರಣ ಹಾಗೂ ಒಂದು ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ. ಈತನ ವಿರುದ್ಧ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 14 ಪ್ರಕರಣಗಳು ಇವೆ ಎನ್ನುವ ಮಾಹಿತಿಯನ್ನು ಪೊಲೀಸ್ ಮೂಲಗಳು ತಿಳಿಸಿವೆ.
ಕೃಷಿಕರಿಗೆ ಸನ್ಮಾನ ಪ್ರಶಸ್ತಿ ನೀಡುವುದರಲ್ಲಿ ಅರ್ಥವಿದೆ ; ಬಿ.ಜಿ.ಸತ್ಯನಾರಾಯಣ
ಹೊಸನಗರ ; ದಿನದ 24 ಗಂಟೆಯೂ ದುಡಿಯುವುದರಲ್ಲಿ ಮಗ್ನರಾಗಿರುವ ನಮ್ಮ ನಿಮ್ಮೆಲ್ಲರಿಗೂ ಒಂದು ತುತ್ತು ಅನ್ನ ನೀಡುವುದರಲ್ಲಿ ಪ್ರಮುಖ ಪಾತ್ರವಹಿಸುವ ರೈತರನ್ನು ಸನ್ಮಾನಿಸುವುದರಲ್ಲಿ, ಪ್ರಶಸ್ತಿ ನೀಡುವುದರಲ್ಲಿ ಅರ್ಥವಿದೆ ಎಂದು ಹೊಸನಗರದ ಜೇನುಕಲ್ಲಮ್ಮ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಿ.ಜಿ.ಸತ್ಯನಾರಾಯಣ ಹೇಳಿದರು.
ಇಲ್ಲಿನ ಆರ್ಯ ಈಡಿಗರ ಸಭಾಭವನದ ಆವರಣದಲ್ಲಿ ಕರ್ನಾಟಕ ಸರ್ಕಾರದ ಕೃಷಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ತೊಗರೆ ಗ್ರಾಮದ ಶ್ರೀಪತಿ ಟಿ.ಎನ್.ರನ್ನು ಹೊಸನಗರ ಜೇನುಕಲ್ಲಮ್ಮ ಸೌಹಾರ್ದ ಸಂಘದ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಮಾತನಾಡಿದರು.

ಕೃಷಿಕ ಅರ್ಥಾತ್ ಒಬ್ಬ ರೈತ ಒಂದು ಮೇಣದ ಬತ್ತಿ ಇದ್ದ ಹಾಗೇ, ತಾನು ಸುಟ್ಟಿಕೊಂಡು ಇನ್ನೊಬ್ಬರಿಗೆ ಈ ಸಮಾಜಕ್ಕೆ ಬೆಳಕನ್ನು ನೀಡುತ್ತದೆ. ರೈತರು ಹಾಗೆಯೇ ತನ್ನ ಕಷ್ಟವನ್ನು ತಾನೆ ಮೈಮೇಲೆ ಎಳೆದುಕೊಂಡು ಇನ್ನೊಬ್ಬರಿಗೆ ಅನ್ನ ನೀಡುತ್ತಾರೆ. ರೈತರ ಬಗ್ಗೆ ಎಷ್ಟೇ ಹೇಳಿದರೂ ಕಡಿಮೆಯೇ. ಹಗಲಿರುಳು ಸೇವೆ ಸಲ್ಲಿಸಿ ನಮ್ಮ ನಿಮ್ಮೆಲ್ಲರನ್ನು ಸಾಕುತ್ತಿರುವ ರೈತರನ್ನು ಸನ್ಮಾನಿಸುವುದರಲ್ಲಿ ಅರ್ಥವಿದೆ ಎಂದರು.
ಈ ಸಂದರ್ಭದಲ್ಲಿ ಜೇನುಕಲ್ಲಮ್ಮ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ಪೂರ್ಣಿಮ ಮೂರ್ತಿರಾವ್, ಧನಂಜಯ ಎಂ.ವಿ, ಟಿ.ಎಂ ದಿನೇಶ, ಗಂಗಾ ದೇವರಾಜ್, ನಾಗೇಶ್ ಹೆಚ್. ಎನ್, ರಮೇಶ್ ನರ‍್ಲೆ, ನಾಗಪ್ಪ ಎಸ್.ಕೆ, ಲೋಕೇಶ್ವರ ಎಂ.ಪಿ, ಯೋಗೇಂದ್ರ ಕೆ ಈ, ಮಧುಸೂದನ್, ದಿವಾಕರ ಟಿ, ಟೀಕಪ್ಪ, ಕಾರ್ಯನಿರ್ವಹಣಾಧಿಕಾರಿ ಸುಮಂತ್, ರೋಹನ್ ಎಸ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.