RIPPONPETE ; ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ಬಸವನಗುಡಿ ಆವರಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರತಿ ವರ್ಷ ಇವರು ನೀಡುವ ಅನಿತಾಕೌಲ್ ಐಎಎಸ್ ಇವರ ಸರಣಾರ್ಥವಾಗಿ ನೀಡುವ 2024-25ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಶಿಕ್ಷಕಿ ಮತ್ತು ಸಾಹಿತಿ ಅಂಬಿಕಾ ಸಂತೋಷ್‌ಗೆ ನೀಡಿ ಗೌರವಿಸಲಾಯಿತು.
ಅಂಬಿಕಾ ಹೊಸನಗರ ತಾಲೂಕಿನ ಗೌಡಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಸೇವೆಯ ಜೊತೆಗೆ ಕವಿತೆ, ಲೇಖನಗಳನ್ನು ಬರೆಯುವ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಪ್ರೇರಣಾ ಸ್ವಯಂ ಸೇವಾ ಸಂಘವನ್ನು ಮಾಡಿಕೊಂಡು ಶಾಲೆ ಹಾಗೂ ಪರಿಸರ ಕಾಳಜಿ ಕಾರ್ಯಕ್ರಮಗಳನ್ನು ಸದಸ್ಯರೊಂದಿಗೆ ನಿರ್ವಹಣೆ ಮಾಡುತ್ತಿದ್ದಾರೆ.
2022ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, 2024ನೇ ಸಾಲಿನ ರಾಷ್ಟ್ರಕವಿ ಕುವೆಂಪು ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇವರು ಸದಾಶಯ ಮತ್ತು ಭಾವತೇರು ಎನ್ನುವ ಎರಡು ಕವನ ಸಂಕಲನವನ್ನು ಪ್ರಕಟಿಸಿರುತ್ತಾರೆ. ಶಾಲೆಯ ಅಭಿವೃದ್ಧಿಯ ಜೊತೆಗೆ ಅನೇಕ ಸಮಾಜಮುಖಿ ಕಾರ್ಯವೈಖರಿಯನ್ನು ಮೆಚ್ಚಿ 2024-25ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇವರ ಜೊತೆಗೆ 17 ಪ್ರೌಢಶಾಲಾ ಶಿಕ್ಷಕರಿಗೆ ಮತ್ತು 20 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ವರ್ಷದ ರಾಜ್ಯ ಮಟ್ಟದ ಅನಿತಾಕೌಲ್ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇವರ ಈ ಸಾಧನೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಭಿನಂದಿಸಿದ್ದಾರೆ.