ಹೊಸನಗರ ; ಮಲೆನಾಡಿನ ಶಕ್ತಿ ದೇವತೆ, ಇತಿಹಾಸ ಪ್ರಸಿದ್ಧ ಕೋಡೂರು ಸಮೀಪವಿರುವ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ದೇವಸ್ಥಾನ ಮುಂದಿನ ದಿನದಲ್ಲಿ ಪ್ರವಾಸಿ ತಾಣವಾಗಿ ನಂಬಿ ಬಂದಿರುವ ಭಕ್ತರಿಗೆ ಕೈ ಹಿಡಿಯುವ ದೇವತೆಯಾಗಿ ಹೊರ ಹೊಮ್ಮಲಿದ್ದಾರೆ ಎಂದು ಹೊಸನಗರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪ್ರದೀಪ್ ಆರ್. ಹೇಳಿದರು.
ತಾಲ್ಲೂಕಿನ ಯೋಜನಾ ಕಛೇರಿ ವ್ಯಾಪ್ತಿಯ ಕೋಡೂರು ವಲಯದ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದಿಂದ 2 ಲಕ್ಷ ರೂ. ಮೊತ್ತದ ಧನ ಸಹಾಯ ಮಂಜೂರಾತಿ ಮಾಡಲಾಗಿದ್ದು ಅದನ್ನು ಸಂಬಂಧಿಸಿದ ಜೇನುಕಲ್ಲಮ್ಮ ದೇವಸ್ಥಾನ ಸಮಿತಿಯವರಿಗೆ ಡಿ.ಡಿಯನ್ನು ವಿತರಿಸಿ ಮಾತನಾಡಿದರು.
ಈ ದೇವಸ್ಥಾನ ಪುರಾಣ ಪ್ರಸಿದ್ದಿ ಪಡೆದ ದೇವಸ್ಥಾನವಾಗಿದ್ದು ಕರ್ನಾಟಕ ರಾಜ್ಯದವರಲ್ಲದೇ ಹೊರ ರಾಜ್ಯದ ಭಕ್ತರು ಈ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಹೆಬ್ಬಂಡೆಯೇ ಆಲಯವಾಗಿರಿಸಿಕೊಂಡಿರುವ ದೇವಿ ನಂಬಿ ಬಂದ ಭಕ್ತಾರಿಗೆ ಎಂದೆದಿಗೂ ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ. ಮುಂದಿನ ದಿನದಲ್ಲಿ ನಮ್ಮ ಸಂಸ್ಥೆಯಿಂದ ಇನ್ನೂ ಹೆಚ್ಚಿನ ಸಹಾಯ ಹಸ್ತ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್‌ರವರಿಗೆ ಡಿ.ಡಿ ವಿತರಿಸಲಾಯಿತು.
ಕೋಡೂರು ಗ್ರಾಮ ಪಂಚಾಯತಿ ಅಧ್ಯಕ್ಷ ಜಯಪ್ರಕಾಶ್‌ಶೆಟ್ಟಿ, ಒಕ್ಕೂಟದ ಅಧ್ಯಕ್ಷ ರಾಘವೇಂದ್ರ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ವಲಯ ಮೇಲ್ವಿಚಾರಕಿ ಉಮಾ ಜಿ, ಸೇವಾಪ್ರತಿನಿಧಿ, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.