ನವಜಾತ ಶಿಶುಗಳಿಗೆ ಅಮೃತವಾಗಿರುವ ತಾಯಿ ಎದೆ ಹಾಲು ಒದಗಿಸುವ ‘ಅಮೃತಧಾರೆ’ ಎದೆಹಾಲಿನ ಬ್ಯಾಂಕ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಿದ್ದು ಜಿಲ್ಲೆಯ ಮತ್ತು ಸುತ್ತಮುತ್ತಲ ಜಿಲ್ಲೆಯ ಎದೆಹಾಲು ವಂಚಿತ ಶಿಶುಗಳಿಗೆ ಮರುಜೀವ ಲಭಿಸಿದಂತಾಗಿದೆ.
ನವಜಾತ ಶಿಶುಗಳಿಗೆ ತಾಯಿಯ ಎದೆ ಹಾಲು ಅಮೃತವಾಗಿರುತ್ತದೆ, ಇದು ಶಿಶುಗಳಿಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನೆಲ್ಲ ಒಸಗಿಸಿ, ಶಿಶುಗಳ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಆರೋಗ್ಯವಾಗಿರುತ್ತದೆ. ಆದರೆ ಕೆಲವೂಮ್ಮೆ ತಾಯಿಯ ಆರೋಗ್ಯ ಅಥಾವ ಶಿಶುವಿನ ಆರೋಗ್ಯ ಸಮಸ್ಯೆಯಿಂದ ಅನೇಕ ಶಿಶುಗಳು ಹುಟ್ಟುತ್ತಲೇ ಈ ಅಮೃತದಿಂದ ವಂಚಿತರಾಗಿರುತ್ತಾರೆ. ಇಂತಹ ಸಂಧರ್ಭದಲ್ಲಿ ನವಜಾತ ಶಿಶಿಗಳಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಮಗುವಿನ ತಾಯಿಯಿಂದಲೇ ಅಥವಾ ಬೇರೆ ತಾಯಿಯಿಂದ ಹಾಲನ್ನು ದಾನವಾಗಿ ಪಡೆದು ಪಾಶ್ಚಕರಿಸಿ ಶಿಶುಗಳಿಗೆ ನೀಡುವ ಹೊಸ ಯೋಜನೆ ಅಮೃತಧಾರೆ.
ಮಲೆನಾಡು ಭಾಗದಲ್ಲಿ ನಿರ್ಮಿಸಿರುವ ಮೊದಲನೇಯ ಹಾಗೂ ರಾಜ್ಯದ ಮೂರನೇಯದಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಮತ್ತು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರ ಸಹಾಯದಿಂದ ಅಗತ್ಯವಿರುವ ಶಿಶುಗಳಿಗೆ ಪಾಶ್ಚರೀಕರಿಸಿದ ತಾಯಿಯ ಹಾಲನ್ನು ಒದಗಿಸಲು ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ತಾಯಿ ಹಾಲಿನ ಬ್ಯಾಂಕ್ ಅಮೃತದಾರೆಯನ್ನು ಸ್ಥಾಪನೆ ಮಾಡಲಾಗಿದೆ.
ಶಿವಮೊಗ್ಗ ಅಮೃತಧಾರೆಯಲ್ಲಿ ಮೇ ಮಾಹೆಯಿಂದ ಜುಲೈವರೆಗೆ 376 ತಾಯಂದಿರು ಹಾಲನ್ನು ದಾನ ಮಾಡಿದ್ದಾರೆ. ಒಟ್ಟು 127 ನವಜಾತ ಶಿಶುಗಳಿಗೆ ಹಾಲನ್ನು ನೀಡಿ ಪೋಷಿಸಲಾಗಿದೆ. ಹಾಲನ್ನು ಪಾಶ್ಚರೀಕರಿಸಿದ ಬಳಿಕ 6 ತಿಂಗಳವರೆಗೆ ಅದನ್ನು ಬಳಸಬಹುದಾಗಿದೆ. ದಾನಿಗಳು ನೀಡಿದ ಹಾಲನ್ನು ಮಗುವಿನ ತಾಯಿಯ ಒಪ್ಪಿಗೆ ಮೇರೆಗೆ ನೀಡಲಾಗುತ್ತಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ, ನವಜಾತ ಶಿಶುಗಳ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಹಲವಾರು ಯೋಜನೆಗಳನ್ನು ಪ್ರಾರಂಭಿಸಲಾಯಿತು. ತೃತೀಯ ಆರೈಕೆ ಸೌಲಭ್ಯಗಳಲ್ಲಿ ನೆಲೆಗೊಂಡಿರುವ ಎಸ್‌ಎನ್‌ಸಿಯುಗಳು ಮತ್ತು ನವಜಾತ ತೀವ್ರ ನಿಗಾ ಘಟಕಗಳಲ್ಲಿ ವಿಶೇಷ ಆರೈಕೆಯ ಸುಧಾರಿತ ಪ್ರವೇಶದ ಹೊರತಾಗಿಯೂ, ಅನಾರೋಗ್ಯ ಮತ್ತು ಅಕಾಲಿಕ ಶಿಶುಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವಲ್ಲಿ ಗಮನಾರ್ಹ ಅಂತರವಿದೆ. ಎಲ್ಲಾ ನವಜಾತ ಶಿಶುಗಳು ಮತ್ತು ಶಿಶುಗಳು ಕೇವಲ ತಾಯಿ ಹಾಲನ್ನು ಮಾತ್ರ ಸೇವಿಸುವುದನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಸೌಲಭ್ಯಗಳಲ್ಲಿ ಸೂಕ್ತವಾದ ಸ್ತನ್ಯಪಾನ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಈ ಅಂತರದ ಹೆಚ್ಚಿನ ಭಾಗವನ್ನು ನಿವಾರಿಸಬಹುದು. ತಾಯಿ ಹಾಲು ಅತ್ಯುತ್ತಮ ಪೋಷಣೆಯನ್ನು ಒದಗಿಸುತ್ತದೆ, ಸಾಮಾನ್ಯ ಬೆಳವಣಿಗೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮಗುವಿನ ನರ-ಅಭಿವೃದ್ಧಿಯ ಮೇಲೆ ದೀರ್ಘಕಾಲೀನ ಪ್ರಭಾವದ ಜೊತೆಗೆ ಅನಾರೋಗ್ಯ ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ತಾಯಿಯ ಹಾಲು ಮಗುವಿಗೆ ಅಮೃತವಾಗಿದೆ. ಏಕೆಂದರೆ ಇದು ನವಜಾತ ಶಿಶುವಿನ ಎಲ್ಲಾ ಅಗತ್ಯಗಳನ್ನು, ಅತ್ಯುತ್ತಮ ಪೋಷಣೆ ಮತ್ತು ರಕ್ಷಣಾತ್ಮಕ ಸೋಂಕು ನಿವಾರಕ ವಸ್ತುಗಳನ್ನು ಒದಗಿಸುತ್ತದೆ. ಆದರೆ ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಅವಧಿಪೂರ್ವ, ಕಡಿಮೆ ತೂಕದ ಮತ್ತು ಅನಾರೋಗ್ಯದ ಶಿಶುಗಳು ತಾಯಿಯ ಹಾಲನ್ನು ಹೊಂದಿರುವುದಿಲ್ಲ. ಈ ಸಮಯದಲ್ಲಿ ಶಿಶುಗಳ ಸುಧಾರಿತ ಬದುಕುಳಿಯುವಿಕೆ ಮತ್ತು ಯೋಗಕ್ಷೇಮಕ್ಕಾಗಿ ಆರೋಗ್ಯ ಸೌಲಭ್ಯಗಳಲ್ಲಿ ದಾಖಲಾದ ಎಲ್ಲಾ ಶಿಶುಗಳಿಗೆ ಸುರಕ್ಷಿತ ಎದೆಹಾಲು ನಿರಂತರ ಪೂರೈಕೆಯ ಅವಶ್ಯಕತೆಯಿದೆ. ಅಮೃತಧಾರೆ ತಾಯಿ ಹಾಲಿನ ಬ್ಯಾಂಕ್‌ನಿಂದ ತಾಯಂದಿರಿಂದ ನೈಸರ್ಗಿಕ ಹಾಲುಣಿಸುವಿಕೆಯನ್ನು ಉತ್ತೇಜಿಸುವುದರ ಜೊತೆಗೆ ಎಲ್ಲಾ ಶಿಶುಗಳಿಗೆ ಉಚಿತ, ಪಾಸ್ಚರೈಸ್ ಮಾಡಿದ ಎದೆಹಾಲನ್ನು ಒದಗಿಸುವ ಪ್ರಯತ್ನವಾಗಿದೆ.
ಹ್ಯೂಮನ್ ಮಿಲ್ಕ್ ಬ್ಯಾಂಕ್ ಎನ್ನುವುದು ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಆಸ್ಪತ್ರೆಯ ವಾಸ, ಸುಧಾರಿತ ಬದುಕುಳಿಯುವ ಫಲಿತಾಂಶ, ಕಡಿಮೆ ಸೋಂಕಿನ ದರಗಳನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಯಶಸ್ಸನ್ನು ಹೊಂದಿರುವ ನವೀನ ತಂತ್ರವಾಗಿದೆ. ಮಗುವಿನ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವಲ್ಲಿ ತಾಯಿ ಹಾಲಿನ ಕೊಡುಗೆಯು ಅಪಾರವಾಗಿರುವ ಕಾರಣ ಹಾಲಿನ ಬ್ಯಾಂಕ್ ತೆರೆಯಲು ವಿಶಿಷ್ಟ ಪ್ರೇರೇಪಣೆ ದೊರೆತಿದೆ.
ಭಾರತದಲ್ಲಿ ಪ್ರತಿ ವರ್ಷ 27 ಮಿಲಿಯನ್ ಶಿಶುಗಳು ಜನಿಸುತ್ತವೆ. ಅದರಲ್ಲಿ 3.5 ಮಿಲಿಯನ್ ಅವಧಿಪೂರ್ವ ಮತ್ತು 7.5 ಮಿಲಿಯನ್ ಕಡಿಮೆ ತೂಕ ಹೊಂದಿದ ಶಿಶುವಗಳ ಜನನವಾಗಿದೆ. ಭಾರತದಲ್ಲಿ ಸುಮಾರು ಶೇ. 47 ರಷ್ಟು ಶಿಶುಗಳು ಅವಧಿಪೂರ್ವವಾಗಿ ಜನಿಸಿದ ಮಕ್ಕಳಾಗಿರುತ್ತವೆ. ಕರ್ನಾಟಕವು ಸುಮಾರು 23% ರಷ್ಟು ಅವಧಿಪೂರ್ವ ಜನನ ಪ್ರಮಾಣವನ್ನು ಹೊಂದಿದೆ. ಪ್ರಸವಪೂರ್ವ ಮತ್ತು ಕಡಿಮೆ ತೂಕದ ಶಿಶುಗಳು 28 ದಿನಗಳಲ್ಲಿ ನವಜಾತ ಶಿಶುಗಳ ಮರಣದ ಹೆಚ್ಚಿನ ಅಪಾಯವನ್ನು ಹೊಂದಿದೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ.
ಒಟ್ಟಾರೆ ಆರೋಗ್ಯ ಸಮಸ್ಯೆಯನ್ನು ಪರಿಹರಿಸಲು ಸಮಗ್ರ ಪೌಷ್ಠಿಕಾಂಶ ವಿಧಾನದ ಅಗತ್ಯವಿದೆ. ಈ ಎಲ್ಲಾ ಶಿಶುಗಳು ಬದುಕುಳಿಯುವಿಕೆ ಮತ್ತು ಅರಿವಿನ ಬೆಳವಣಿಗೆಯ ವಿಷಯದಲ್ಲಿ ದುರ್ಬಲವಾಗಿರುತ್ತವೆ. ಸಾಮಾನ್ಯವಾಗಿ ಅವರ ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ಆಹಾರ ಸಮಸ್ಯೆಗಳನ್ನು ಹೊಂದಿರುತ್ತಾರೆ. ಆದ್ದರಿಂದ ಈ ನವಜಾತ ಶಿಶುಗಳ ಬೆಳವಣಿಗೆಗೆ ಮತ್ತು ಪೋಷಣೆಯನ್ನು ಮಾಡಲು ಶಿಶುಗಳಿಗೆ ನೇರ ಹಾಲುಣಿಸುವಿಕೆಯು ಸಾಧ್ಯವಾಗುವುದಿಲ್ಲ. ಹಾಗಾಗಿ ಅದೇ ಜೈವಿಕ ತಾಯಿಯಿಂದ ಅಥಾವ ದಾನ ಮಾಡಿ ತಾಯಿಯ ಎದೆ ಹಾಲನ್ನು ಪಾಶ್ಚರೀಕರಿಸಿ ಶಿಶುವಿಗೆ ನೀಡಿ ಆರೈಕೆ ಮಾಡಲಾಗುತ್ತದೆ. ದುರ್ಬಲ ಶಿಶುಗಳಿಗೆ ಡಿಹೆಚ್‌ಎಂ (ಡೋನರ್ ಹ್ಯೂಮನ್ ಮಿಲ್ಕ್) ನಿಂದ ಪ್ರಯೋಜನಗಳು ಸಾಕಷ್ಟಿವೆ ಎಂದು ಜಾಗತಿಕ ಪುರಾವೆಗಳು ಹೇಳುತ್ತವೆ.
ಯಾರು ಎದೆಹಾಲು ದಾನ ಮಾಡಬಹುದು:
ಹಾಲುಣಿಸುವ ಮಹಿಳೆ ತನ್ನ ಹೆಚ್ಚುವರಿ ಎಕ್ಸ್ಪ್ರೆಸ್ಡ್ ಸ್ತನ ಹಾಲು (EBM) ದಾನ ಮಾಡಲು ಸಿದ್ಧರಿದ್ದರೆ ಅವರು ಸಂಭಾವ್ಯ ದಾನಿಯಾಗಿದ್ದಾರೆ. ಹಿಂದಿನ ಮತ್ತು ದೈಹಿಕ ಪರೀಕ್ಷೆಯಿಂದ ಖಚಿತವಾದಂತೆ ಉತ್ತಮ ಆರೋಗ್ಯ ಹೊಂದಿದ ತಾಯಂದಿರು ದಾನ ಮಾಡಬಹುದು. ತಮ್ಮ ಸ್ವಂತ ಶಿಶುಗಳಿಗೆ ಸಮರ್ಪಕವಾಗಿ ಹಾಲುಣಿಸಿದ ನಂತರ ಹೆಚ್ಚುವರಿ ಹಾಲನ್ನು ಸ್ರವಿಸುವ ತಾಯಂದಿರು ದಾನ ಮಾಡಬಹುದು. ಎದೆಹಾಲು ದಾನವು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ.
ಅಮೃತಧಾರೆ ಕೇಂದ್ರದ ಉಪಯೋಗಗಳು
ತಾಯಿಯ ಎದೆ ಹಾಲನ್ನು ದುರ್ಬಲ, ಕಡಿಮೆ ಜನನ ತೂಕದ ಶಿಶುಗಳಿಗೆ ನೀಡಿದಾಗ ಸೆಪ್ಸಿಸ್ ಅಪಾಯವನ್ನು 19% ರಷ್ಟು ಕಡಿಮೆ ಮಾಡುತ್ತವೆ. ಮಾನವ ಹಾಲು ಆಹಾರ, ಸೂತ್ರವನ್ನು ತಪ್ಪಿಸಿದಾಗ 79% ರಷ್ಟು ನೆಕ್ರೋಟೈಸಿಂಗ್ ಎಂಟ್ರೊಕೊಲೈಟಿಸ್ ಅನ್ನು ಕಡಿಮೆ ಮಾಡುತ್ತದೆ. ಹಲವಾರು ರೀತಿಯಲ್ಲಿ ಮಗುವಿನ ಆರೋಗ್ಯಕ್ಕೆ ಸಹಕಾರಿಯಾಗಿದ್ದು ಎನ್‌ಐಸಿಯು ನಲ್ಲಿ ಮಗು ಉಳಿಯುವ ಅವಧಿಯನ್ನು ಕಡಿಮೆ ಮಾಡಿದೆ. ಹಾಊ ವೆಚ್ಚ ಉಳಿತಾಯ ವಿಧಾನವಾಗಿದೆ. ತಾಯಿ ಹಾಲು ಫೀಡಿಂಗ್ ಉತ್ತಮ ನ್ಯೂರೋ ಡೆವಲಪ್‌ಮೆಂಟಲ್ ಫಲಿತಾಂಶ, ಉತ್ತಮ ಐಕ್ಯು ಸ್ಕೋರ್‌ಗಳು ಮತ್ತು ಇತರ ದೀರ್ಘಾವಧಿ ಪ್ರಯೋಜನಗಳನ್ನು ಹೊಂದಿದೆ.
ಯಾರಿಗೆ ನೀಡಲಾಗುತ್ತದೆ.
ಅವಧಿಪೂರ್ವ ಹಾಗೂ ಕಡಿಮೆ ತೂಕದ ಶಿಶುಗಳಿಗೆ ಈ ಎದೆಹಾಲು ಉಪಯಕ್ತವಾಗಿದೆ. ನೆಕ್ರೋಟೈಸಿಂಗ್ ಎಂಟ್ರೊಕೊಲೈಟಿಸ್ ಅಥವಾ ಜಠರಗರುಳಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಅನಾರೋಗ್ಯದ ನವಜಾತ ಶಿಶುಗಳು, ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಆಹಾರವನ್ನು ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿರು, ಪರಿತ್ಯಕ್ತ ಶಿಶುಗಳು ಮತ್ತು ತಾಯಿ ಇಲ್ಲದ ಶಿಶುಗಳಿಗೆ ಅಮೃತಧಾರೆ ಹೆಚ್ಚು ಉಪಯುಕ್ತವಾಗಿದೆ.
ಅಮೃತಧಾರೆಯಿಂದ ನವಜಾತ ಶಿಶುಗಳಿಗೆ ಹೆಚ್ಚು ಅನೂಕೂಲ ಆಗುತ್ತದೆ. ಈ ಯೋಜನೆಗೂ ಮುನ್ನ ಶಿಶುವಿಗೆ ಪೌಡರ್ ಹಾಲನ್ನು ನೀಡಲಾಗುತ್ತಿತ್ತು, ಈ ಯೋಜನೆ ಪೂರ್ಣಪ್ರಮಾಣದಲ್ಲಿ ಜಾರಿಯಾದರೆ ಅದನ್ನು ಸಹ ತಡೆಯಬುದಾಗಿದೆ. ಎದೆ ಹಾಲಿನ ಸೇವನೆಯಿಂದ ಶಿಶುಗಳ ದೀರ್ಘಕಾಲೀನ ನರ-ಅಭಿವೃದ್ಧಿ ಬೆಳವಣಿಗೆಯನ್ನು ಒದಗಿಸುತ್ತದೆ ಎಂಬುದು ಸಾಬೀತಾಗಿದೆ. 8.3 ಐಕ್ಯೂ ಪಾಯಿಂಟ್‌ಗಳ ಪ್ರಯೋಜನ ಮತ್ತು ಸುಧಾರಿತ ಫಲಿತಾಂಶಗಳು ಲಭ್ಯವಾಗಿದೆ. ಹೀಗಾಗಿ ನವಜಾತ ಬದುಕುಳಿಯುವ ಮತ್ತು ಗುಣಮಟ್ಟದ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ರೂ. 75 ಲಕ್ಷ ಮತ್ತು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರ ಸಹಾಯದಿಂದ ಇದನ್ನು ಸ್ಥಾಪಿಸಲಾಗಿದೆ. ಈ ತಾಯಿಯ ಎದೆ ಹಾಲು ಕೇಂದ್ರ ನಮ್ಮ ಮಲೆನಾಡು ಭಾಗದ 5 ಜಿಲ್ಲೆಗಳಲ್ಲಿ ಮೊದಲನೆಯದು. ಸಾವಿರಾರು ನವಜಾತ ಶಿಶುಗಳಿಗೆ ಅನುಕೂಲವಾಗಲಿದೆ. ಕಡಿಮೆ ತೂಕ, ತಾಯಿಯ ಮರಣ, ಜನನದಲ್ಲೇ ಕಾಯಿಲೆಯಿರುವ ಮಕ್ಕಳನ್ನು ಐಸಿಯು ನಲ್ಲಿ ಇರಿಸಿಕೊಂಡು, ಅಮೃತಧಾರೆ ಮೂಲಕ ಹಾಲನ್ನು ನೀಡಿ ಪೋಷಿಸಲಾಗುತ್ತದೆ. ಇದು ಫಾರ್ಮೂಲ ಫೀಡ್ ನೀಡುವುದನ್ನು ಮತ್ತು ಅದರಿಂದಾಗುವ ತೊಂದರೆಯನ್ನು ತಪ್ಪಿಸುತ್ತದೆ. ಆದ್ದರಿಂದ ಮಕ್ಕಳು ಸ್ವಾಭಾವಿಕವಾಗಿ ಬೆಳವಣಿಗೆ ಹೊಂದುತ್ತವೆ. ಶಿಶುಗಳ ಬುದ್ಧಿ ಶಕ್ತಿಯು 8 ರಿಂದ 10 ರಷ್ಟು ಹೆಚ್ಚುತ್ತದೆ.
– ಡಾ|| ಸಿದ್ಧನಗೌಡ ಪಟೇಲ್ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮೆಗ್ಗಾನ್ ಆಸ್ಪತ್ರೆ
ಅಮೃತಧಾರೆ ಯೋಜನೆ ನಿಜಕ್ಕೂ ನಮ್ಮ ಮಗುವಿನ ವಿಷಯದಲ್ಲಿ ಅಮೃತದಂತೆ ಕೆಲಸ ಮಾಡುತ್ತಿದೆ. ನನ್ನ ಅನಾರೋಗ್ಯದ ಕಾರಣ ನನ್ನ ಎದೆ ಹಾಲನ್ನು ನನ್ನ ಮಗುವಿಗೆ ನೀಡಲು ಸಾಧ್ಯವಾಗಲಿಲ್ಲ. ಆಗ ಈ ಯೋಜನೆ ಬಗ್ಗೆ ತಿಳಿದು ಅಮೃತಧಾರೆಯಿಂದ ನನ್ನ ಮಗುವಿಗೆ ತಾಯಿ ಹಾಲು ನೀಡಲು ಸಾಧ್ಯವಾಗುತ್ತಿದ್ದು, ನನ್ನ ಮಗು ಆರೋಗ್ಯವಾಗಿದೆ.
– ಸಾವಿತ್ರಿ ಶಿವಮೊಗ್ಗ, ಫಲಾನುಭವಿ
ನನ್ನ ಶಿಶುವು ಅನಾರೋಗ್ಯದಿಂದಾಗಿ ಐಸಿಯುನಲ್ಲಿ ಇದ್ದ ಕಾರಣ ನೇರವಾಗಿ ಹಾಲನ್ನು ನೀಡಲು ಸಾದ್ಯವಾಗುತ್ತಿರಲಿಲ್ಲ, ಆದರೆ ಅಮೃತಧಾರೆ ಮೂಲಕ ಮಗುವಿಗೆ ಎದೆಹಾಲು ನೀಡಲು ಸಹಕಾರಿಯಾಗಿದೆ.
– ಕವಿತಾ ಸಾಗರ, ಫಲಾನುಭವಿ
ಲೇಖನ : ಮನೋಜ್ ಎಂ, ಅಪ್ರೆಂಟಿಸ್, ವಾರ್ತಾ ಇಲಾಖೆ