ಹೊಸನಗರ ; ತಹಸೀಲ್ದಾರ್ ರಶ್ಮಿ ಹಾಲೇಶ್ ಸಾಗರ ತಹಸೀಲ್ದಾರ್‌ರಾಗಿ ವರ್ಗಾವಣೆಯಾಗಿ ಎರಡು ತಿಂಗಳು ಕಳೆಯುತ್ತಿದೆ. ಆದರೆ ಹೊಸನಗರ, ಸಾಗರ ಎರಡು ಕಡೆಗೂ ಅವರನ್ನೇ ಮುಂದುವರೆಸಲಾಗಿದೆ, ಇದರಿಂದ ಹೊಸನಗರ ತಾಲ್ಲೂಕಿನ ಜನತೆಗೆ ತಾಲ್ಲೂಕು ಕಛೇರಿಯ ಕೆಲಸಗಳು ಆಗದೆ ರೈತರು, ಜನ ಸಾಮಾನ್ಯರು ದಿನನಿತ್ಯ ಅಲೆಯುವಂತಾಗಿದೆ ತಕ್ಷಣ ತಹಸೀಲ್ದಾರ್‌ರನ್ನು ನೇಮಿಸಬೇಕು ಅವರು ಹೊಸನಗರ ತಾಲ್ಲೂಕು ಕಛೇರಿಯ ಅಧಿಕಾರ ಸ್ವೀಕರ ಮಾಡಬೇಕು ಒಂದು ವಾರದ ಒಳಗೆ ಯಾರು ಬರದಿದ್ದರೆ ಹೊಸನಗರ ಬಿಜೆಪಿ ಘಟಕದ ವತಿಯಿಂದ ತಾಲ್ಲೂಕು ಕಛೇರಿಯ ಮುಂಭಾಗ ಉಗ್ರ ಹೋರಾಟ ನಡೆಸುವುದಾಗಿ ಬಿಜೆಪಿ ಮಂಡಲದ ಅಧ್ಯಕ್ಷ ಮತ್ತಿಮನೆ ಸುಬ್ರಮಣ್ಯ ತಿಳಿಸಿದರು.
ಅವರು ಇಲ್ಲಿನ ಬಿಜೆಪಿ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸನಗರ ತಾಲ್ಲೂಕಿನಲ್ಲಿ ಹೆಚ್ಚು ರೈತರೆ ವಾಸಿಸುವ ಪ್ರದೇಶವಾಗಿದ್ದು ಮಲೆನಾಡಿನಲ್ಲಿ ಜ್ವಲಂತ ಸಮಸ್ಯೆಗಳಿರುತ್ತದೆ ರೈತರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಕಂದಾಯ ಇಲಾಖೆಗೆ ಬಂದರೆ ತಹಸೀಲ್ದಾರ್ ಇರುವುದಿಲ್ಲ. ಈಗಿರುವ ತಹಸೀಲ್ದಾರ್ ಎರಡು ಕಡೆಗಳಲ್ಲಿ ಅಧಿಕಾರ ಸ್ವೀಕರಿಸಿರುವುದರಿಂದ ವಾರದಲ್ಲಿ ಒಂದೆರಡು ದಿನ ಬರುತ್ತಾರೆ ಅವರು ಯಾವ ಸಮಯದಲ್ಲಿ ಬರುತ್ತಾರೆ ಎಂದು ರೈತರು ಕಾದು ಕುಳಿತುಕೊಂಡರೆ ರೈತರ ಕೆಲಸ ಮಾಡವವರಾರು? ಎಂದು ಪ್ರಶ್ನಿಸಿದರು.
ಗ್ರೇಡ್ 2 ತಹಸೀಲ್ದಾರ್‌ರಿಗೆ ಚಾರ್ಜ್ ನೀಡಬಹುದಿತ್ತು :
ಹೊಸನಗರ ತಾಲ್ಲೂಕು ಕಛೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಇದ್ದರು ಅವರಿಗಾದರೂ ತಹಸೀಲ್ದಾರ್ ಚಾರ್ಜ್ ನೀಡಬಹುದಿತ್ತು. ಅವರಿಗೆ ಈ ಹಿಂದೆ ಆಡಳಿತ ಮಾಡಿದೆ ಅನುಭವವಿದೆ. ಅವರಿಗೂ ಚಾಜ್ ನೀಡದೆ ಒಬ್ಬರೇ ಎರಡು ಕಡೆ ಅಧಿಕಾರ ನಡೆಸುತ್ತಿರುವುದಕ್ಕೆ ರಾಜಕೀಯ ನಾಯಕರ ಕೈವಾಡವಿದೆಯೇ? ಅಥವಾ ಶಾಸಕರ ಕೈವಾಡ ವಿದೆಯೇ? ಎಂಬ ಪ್ರಶ್ನೆ ಮೂಡುತ್ತಿದೆ ಎಂದರು.
ಎರಡು ಕಡೆ ಒಬ್ಬರೇ ಶಾಸಕರು, ಒಬ್ಬರೇ ತಹಸೀಲ್ದಾರರು !
ಹೊಸನಗರ-ಸಾಗರ ಕ್ಷೇತ್ರಕ್ಕೆ ಒಬ್ಬರೇ ಶಾಸಕರು. ಅದೇ ರೀತಿ ಎರಡು ತಾಲ್ಲೂಕಿಗೆ ಒಬ್ಬರೇ ತಹಸೀಲ್ದಾರ್ ಸಾಕು ಎಂಬ ಅಭಿಪ್ರಾಯದಲ್ಲಿ ನಮ್ಮ ಕ್ಷೇತ್ರದ ಶಾಸಕರು ಇದ್ದಂತೆ ಕಾಣುತ್ತಿದ್ದು ಅದಕ್ಕಾಗಿ ಹೊಸನಗರ ತಾಲ್ಲೂಕಿಗೆ ಯಾರು ತಹಸೀಲ್ದಾರ್ ಬರುತ್ತಿಲ್ಲ. ಅಥವಾ ಸರ್ಕಾರದ ಮೇಲೆ ಇತ್ತಡ ತರುತ್ತಿಲ್ಲ ಎಂಬ ಅನುಮಾನ ಬರುತ್ತಿದೆ. ತಕ್ಷಣ ಸರ್ಕಾರ ನೂತನ ತಹಸೀಲ್ದಾರ್ ನೇಮಕ ಮಾಡಬೇಕು ಹಾಗೂ ನೇಮಕವಾಗಿರುವ ತಹಸೀಲ್ದಾರ್ ತಾಲ್ಲೂಕು ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಬೇಕು ಇಲ್ಲವಾದರೆ ಉಗ್ರ ಹೋರಾಟ ಖಚಿತ ಎಂದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.