ಶಿವಮೊಗ್ಗ : ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಂಡು, ಮದುವೆಯಾಗುವುದಾಗಿ ನಂಬಿಸಿ, ಕೊನೆಗೆ ಹಣ, ಚಿನ್ನಾಭರಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿ ಗ್ರಾಮದ ಭೀಮರಾಜ್ ಅಲಿಯಾಸ್ ಜೈಭೀಮ್ (40) ಬಂಧಿತ ಆರೋಪಿ. ಈತ ಪದಕೋಠಿ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿ ಹಣ, ಚಿನ್ನಾಭರಣ ಪಡೆಯುತ್ತಿದ್ದ.
ಭದ್ರಾವತಿಯ 40 ವರ್ಷದ ಮಹಿಳೆಯೊಬ್ಬರಿಗೆ ಇದೇ ರೀತಿ ವಂಚನೆ ಮಾಡಿದ್ದ. ಆ ಮಹಿಳೆಯಿಂದ ಫೋನ್ ಪೇ ಮೂಲಕ 5.43 ಲಕ್ಷ ರೂ. ಹಣ ವರ್ಗಾಯಿಸಿಕೊಂಡಿದ್ದ. 2 ಲಕ್ಷ ರೂ. ನಗದು ಹಣ, ಸುಮಾರು 2.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ್ದ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭೀಮರಾಜ್‌ಗೆ ಈಗಾಗಲೇ ಮದುವೆಯಾಗಿದೆ. ಹಾಗಿದ್ದು ತಾನು ವಿವಾಹಿತ ಅನ್ನುವುದನ್ನು ಮರೆಮಾಚಿ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಇದೇ ರೀತಿ ರಾಜ್ಯಾದ್ಯಂತ ಈತ ಮಹಿಳೆಯರನ್ನು ವಂಚಿಸಿದ್ದಾನೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ಭೀಮರಾಜ್ ವಿರುದ್ಧ 12 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಭದ್ರಾವತಿಯ ಹಳೇ ನಗರ ಠಾಣೆ ಮತ್ತು ಹೊಸನಗರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಈಗಾಗಲೇ ಈತನ ಬಂಧಿತನಾಗಿದ್ದು ಕೊಪ್ಪಳದ ಕಾರಾಗೃಹದಲ್ಲಿದ್ದಾನೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.