HOSANAGARA ; ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಬಾಲ ನ್ಯಾಯ ಮಂಡಳಿ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಪ್ರತಿಭೋತ್ಸವ ಆಯ್ಕೆ ಸ್ಪರ್ಧೆಯಲ್ಲಿ ತಾಲೂಕಿನ ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲ ಯಕ್ಷ ಕುಟೀರದ ಮಕ್ಕಳು ದ್ವೀತಿಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಬಾಲ ನ್ಯಾಯ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಶಿವಮೊಗ್ಗ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ 16 ವರ್ಷ ವಯೋಮಾನದೊಳಗಿನ ಸೃಜನಾತ್ಮಕ ಕಲಾ ಪ್ರದರ್ಶನ ವಿಭಾಗದಲ್ಲಿ ವಾಲ್ಮೀಕಿ ರಾಮಾಯಣವನ್ನು ಯಕ್ಷ ನೃತ್ಯದ ಮೂಲಕ ಪ್ರದರ್ಶನ ನೀಡಿದ ಯಕ್ಷ ಕುಟೀರದ ಮಕ್ಕಳು ದ್ವಿತೀಯ ಸ್ಥಾನ ಪಡೆದರು. ಅಲ್ಲದೇ ಇದೇ ವಿಭಾಗದಲ್ಲಿ ನವೆಂಬರ್ 14ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಮಕ್ಕಳ ದಿನಾಚರಣೆಯಲ್ಲಿ ಭಾಗವಹಿಸಿ ನೃತ್ಯ ಪ್ರದರ್ಶನ ಮತ್ತು ಸ್ಪರ್ಧೆ ನೀಡಲಿದ್ದಾರೆ.
ಸ್ಪರ್ಧೆಯಲ್ಲಿ ಪೃತ್ವಿಕಾ ಯು. ಶೆಟ್ಟಿ, ಚಿನ್ಮಯಿ ಎಂ. ಬ್ಯಾಣದ, ಚುಕ್ಕಿ ಎಂ. ಬ್ಯಾಣದ ಭಾಗವಹಿಸಿ ವಿಜೇತರಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಶ್ರೀ ವ್ಯಾಸ ಮಹರ್ಷಿ ಗುರುಕುಲ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು, ಫೋಷಕರು ಹಾಗೂ ಹೊಸನಗರ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಅಭಿನಂದಿಸಿದ್ದಾರೆ.
ಜಿಲ್ಲಾ ನ್ಯಾಯಾಧೀಶ ಸಂತೋಷ ಕುಮಾರ್, ಇಲಾಖಾ ಜಿಲ್ಲಾ ಅಧಿಕಾರಿಗಳಾದ ಶಶಿರೇಖಾ, ಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಹೊಸನಗರ ಅಧಿಕಾರಿಗಳು ಉಪಸ್ಥಿತರಿದ್ದರು.