RIPPONPETE ; ಇಲ್ಲಿನ ಗ್ರಾ.ಪಂ. ಅಧ್ಯಕ್ಷೆ ಧನಲಕ್ಷ್ಮಿಯವರು ಅಶ್ಲೀಲ ಪದ ಬಳಸಿ ವ್ಯಕ್ತಿಯೊಬ್ಬರಿಗೆ ‘ಚಡ್ಡಿ ಬಿಚ್ಚಿ ಸರ್ಕಲ್‌ನಲ್ಲಿ ಚಪ್ಪಲಿಯಲ್ಲಿ ಹೊಡೆಯುತ್ತೇನೆ. ನಾನು ಯಾರಿಗೂ ಹೆದರುವುದಿಲ್ಲ’ ಎಂದು ಹೇಳಿ ಅವಮಾನ ಮಾಡಿದ್ದಾರೆಂಬ ಬಗ್ಗೆ ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋದಿಂದ ಗ್ರಾಮ ಪಂಚಾಯ್ತಿಯ ಘನತೆ ಗೌರವಕ್ಕೆ ಧಕ್ಕೆ ತಂದಿರುವ ಧನಲಕ್ಷ್ಮಿ ತಮ್ಮ ಅಧ್ಯಕ್ಷ ಹುದ್ದೆಗೆ ತಕ್ಷಣ ರಾಜೀನಾಮೆ ನೀಡುವಂತೆ ಆಗ್ರಹಿಸಿ ನವೆಂಬರ್ 25 ರಂದು ಸೋಮವಾರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪನವರ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಬಿಜೆಪಿ ಮಹಾಶಕ್ತಿಕೇಂದ್ರ ಆಧ್ಯಕ್ಷ ಎನ್.ಸತೀಶ್ ತಿಳಿಸಿದರು.
ಇಲ್ಲಿನ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಳೆದ ಒಂದು ವಾರದ ಹಿಂದೆ ಗ್ರಾಮಧ್ಯಕ್ಷೆ ಧನಲಕ್ಷ್ಮಿ ಅಧ್ಯಕ್ಷತೆಯಲ್ಲಿ ಕರೆಯಲಾದ ತುರ್ತು ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಮತ್ತು ಬಿಜೆಪಿ ಬೆಂಬಲಿತ ಸದಸ್ಯರು ಅಧ್ಯಕ್ಷರ ರಾಜೀನಾಮೆ ನೀಡುವಂತೆ ಆಗ್ರಹಿಸಿ ಧಿಕ್ಕಾರ ಕೂಗಿ ಹೊರ ಬಂದು ದಿಢೀರ್ ಪ್ರತಿಭಟನೆ ನಡೆಸಿ ಪೊಲೀಸ್ ಠಾಣೆಗೆ ತೆರಳಿ ಮೊಬೈಲ್‌ನಲ್ಲಿ ಹರಿದಾಡುತ್ತಿರುವ ಆಡಿಯೋ ಕುರಿತು ತನಿಖೆ ನಡೆಸುವಂತೆ ದೂರು ಅರ್ಜಿಯನ್ನು ಸಲ್ಲಿಸಲಾಗಿತ್ತು.
ಆಡಿಯೋ, ವಿಡಿಯೋ ಚಿತ್ರೀಕರಣದಿಂದಾಗಿ ಸಾರ್ವಜನಿಕರಲ್ಲಿ ಭಯಭೀತರನ್ನಾಗಿಸುವ ಚಟುವಟಿಕೆ ನಡೆಸುತ್ತಿರುವವರ ವಿರುದ್ದ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ ಸಾರ್ವಜನಿಕರನ್ನು ಭಯಮುಕ್ತರನ್ನಾಗಿ ಮಾಡುವಂತೆ ಸಹ ಸುದ್ದಿಗೋಷ್ಟಿಯಲ್ಲಿ ವಿವರಿಸಿ, ಈ ರೀತಿಯಲ್ಲಿ ವಿಡಿಯೋ ಚಿತ್ರೀಕರಿಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇದರಿಂದ ರಾಜಕೀಯ ಮುಖಂಡರು ಸಾರ್ವಜನಿಕರು ಅಹವಾಲು ಹಿಡಿದು ತಮ್ಮ ಬಳಿ ಬಂದವರ ಜೊತೆ ಮಾತನಾಡಲು ಹಿಂಜರಿಯುವಂತಾಗಿ ಭಯದಲ್ಲಿ ಮಾತನಾಡುವಂತಾಗಿದ್ದಾರೆ. ಈಗಾಗಲೇ ಬಿಪಿಎಲ್ ಕಾರ್ಡ್ ರದ್ದತಿ ಸೇರಿದಂತೆ ಸರ್ಕಾರದಲ್ಲಿ ಹಲವು ಭ್ರಷ್ಟಾಚಾರ ಮತ್ತು ಅಭಿವೃದ್ಧಿ ಶೂನ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದಾಗಿ ಪ್ರತಿಭಟನೆಯ ರೂಪುರೇಷೆಯನ್ನು ರೂಪಿಸಲಾಗುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಬಿಜೆಪಿ ಮುಖಂಡರಾದ ಆರ್.ಟಿ.ಗೋಪಾಲ, ಪದ್ಮ ಸುರೇಶ್, ನಾಗರತ್ನ ದೇವರಾಜ್, ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಗ್ರಾಮ ಪಂಚಾಯ್ತಿ ಸದಸ್ಯರಾದ ಪಿ.ರಮೇಶ್, ಸುಂದರೇಶ್ ಕೆರೆಹಳ್ಳಿ, ದಾನಮ್ಮ, ದೀಪಾ ಪಿ.ಸುಧೀರ್, ಅಶ್ವಿನಿ ರವಿಶಂಕರ್, ಮಂಜುಳಾ ಕೇತಾರ್ಜಿರಾವ್, ವನಮಾಲ, ಜಿ.ಡಿ.ಮಲ್ಲಿಕಾರ್ಜುನ ಇದ್ದರು.