ರಿಪ್ಪನ್‌ಪೇಟೆ ; ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯಾಧಿಕಾರಿಗಳಿಲ್ಲದೆ ಇಂದು ಬೆಳಗ್ಗೆ ಕಲ್ಲೂರು ಗ್ರಾಮದ ರಾಮಪ್ಪ ಎಂಬುವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಲಭಿಸದೇ ಸಾವನ್ನಪ್ಪಿದ್ದಾರೆಂದು ಆರೋಪಿಸಿ ಇಂದು ಬಿಜೆಪಿ ಪಕ್ಷದವರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಈಚೆಗೆ ಮ.ಟೈ. ನಲ್ಲಿ ಖಾಯಂ ವೈದ್ಯಾಧಿಕಾರಿಗಳನ್ನ ನೇಮಕ ಮಾಡುವಂತೆ ಆಗ್ರಹಿಸಿರುವ ವರದಿ ಮುಂದೆ ಇಟ್ಟುಕೊಂಡು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ನೇತೃತ್ವದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಇರುವ ವೈದ್ಯರ ಬಳಿ ಚರ್ಚೆ ನಡೆಸಿ ನಂತರ ಪತ್ರಿಕಾಗೋಷ್ಠಿ ನಡೆಸಿ, ಇಲ್ಲಿನ ವೈದ್ಯಾಧಿಕಾರಿಗಳು ಇನ್‌ಚಾರ್ಜ್ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು ಬೆಳಗ್ಗೆಯಿಂದ ಸಂಜೆಯವರಗೆ ಕರ್ತವ್ಯ ಮಾಡಲಾಗುತ್ತಿದೆ. ಹೆರಿಗೆ ಇನ್ನಿತರ ಅಗತ್ಯ ಸೌಲಭ್ಯಗಳು ರಾತ್ರಿ ವೇಳೆ ಬಂದರೆ ಯಾರು ಇರುವುದಿಲ್ಲ ಇದರಿಂದಾಗಿ ಸಮಸ್ಯೆ ಉದ್ಬವವಾಗುವಂತಾಗಿದೆ. ಅಲ್ಲದೆ ಆರೋಗ್ಯ ಕಾರ್ಯಕರ್ತೆಯರು ಸಹ ಡೆಪ್ಟೇಷನ್ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು ಖಾಯಂ ಅರೋಗ್ಯ ಕಾರ್ಯಕರ್ತೆ ನಿಯೋಜನೆಯ ಮೇಲೆ ಭದ್ರಾವತಿಯಲ್ಲಿ ಕಾರ್ಯನಿಹಿಸುತ್ತಿದ್ದಾರೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರೇ ಚುಚ್ಚು ಮದ್ದು ನೀಡುವುದು ಅನಿವಾರ್ಯವಾಗಿದೆ ಎಂದ ಆವರು, ತಜ್ಞರಲ್ಲದ ಡಿ ಗ್ರೂಪ್ ನೌಕರರು ಇಂಜೆಕ್ಷನ್ ನೀಡಿ ಏನಾದರೂ ಅವಘಡ ಸಂಭವಿಸಿದರೆ ಹೊಣೆ ಯಾರು? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುವಂತಾಗಿದೆ. ತಕ್ಷಣ ಈ ಅವ್ಯವಸ್ಥೆಯನ್ನು ಸರಿಪಡಿಸಿಕೊಡುವುದರೊಂದಿಗೆ ರೋಗಿಗಳಿಗೆ ಸಮರ್ಪಕ ಸೇವೆ ಕಲ್ಪಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ಅಲ್ಲದೆ ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ನಾವು ಆಸ್ಪತ್ರೆಯ ಮುಂಭಾಗ ಆಥವಾ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿ ಸೇರಿದಂತೆ ಜಿಲ್ಲಾಧಿಕಾರಿಗಳ ಕಛೇರಿಗೆ ರಿಪ್ಪನ್‌ಪೇಟೆಯಿಂದ ಕಾಲ್ನಡಿಗೆ ಮೂಲಕ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಹಿಂದೆ ಬಿಜೆಪಿ ಸರ್ಕಾರದ ಶಾಸಕ ಹರತಾಳು ಹಾಲಪ್ಪನವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ಹಾಲಿ ಶಾಸಕ ಬೇಳೂರು ಗೋಪಾಲಕೃಷ್ಣ ಇವರು ಸರ್ಕಾರಿ ಆಸ್ಪತ್ರೆಯ ವಿರುದ್ದ ಪಾದಯಾತ್ರೆ ನಡೆಸುವ ಮೂಲಕ ಆಸ್ಪತ್ರೆಯ ಅವ್ಯವಸ್ಥೆ ವಿರುದ್ದ ಪ್ರತಿಭಟನೆ ನಡೆಸಿ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದಾಗಿ ಭರವಸೆ ನೀಡಿದವರು ಈಗ ಎಲ್ಲಿ ಹೋಗಿದ್ದಾರೆ. ಅಧಿಕಾರ ಬಂದು ಹತ್ತಿರ ಹತ್ತಿರ ಎರಡೂವರೆ ವರ್ಷ ಕಳೆಯುತ್ತಾ ಬಂದರೂ ಆಸ್ಪತ್ರೆಯ ಅಭಿವೃದ್ದಿಯ ಸರ್ಕಾರದಿಂದ ಒಂದು ನಯಾಪೈಸೆ ಅನುದಾನ ತರದೇ ಶಾಸನ ಸಭೆಯಲ್ಲಿ ಚರ್ಚಿಸದೇ ಇರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿ, ಶಾಸಕರ ಕಾರ್ಯವೈಖರಿಯನ್ನು ಲೇವಡಿ ಮಾಡಿ ಇಚ್ಚಾಶಕ್ತಿಯ ಕೊರತೆಯಿಂದಾಗಿ ಈ ರೀತಿಯಲ್ಲಿ ಆಸ್ಪತ್ರೆ ಅವ್ಯಸ್ಥೆಗೆ ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್, ಮುಖಂಡರಾದ ಪದ್ಮಾ ಸುರೇಶ್, ಎಂ.ಬಿ.ಮಂಜುನಾಥ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಜಿ.ಡಿ.ಮಲ್ಲಿಕಾರ್ಜುನ, ಸುಂದರೇಶ್, ಅಶ್ವಿನಿ ರವಿಶಂಕರ್, ತಾಲ್ಲೂಕು ಪಂಚಾಯಿತ್ ಮಾಜಿ ಅಧ್ಯಕ್ಷೆ ನಾಗರತ್ನ ದೇವರಾಜ್, ಪಿ.ಸುದೀರ್ ಇನ್ನಿತರರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.