ಗರ್ತಿಕೆರೆ ಸತೀಶ್ ಶೆಟ್ಟಿ ಕೊಲೆ ಪ್ರಕರಣದ ಇಬ್ಬರಿಗೆ ಜೀವಾವಧಿ ಶಿಕ್ಷೆ !

Written by malnadtimes.com

Published on:

ಹೊಸನಗರ ; ತಾಲ್ಲೂಕಿನ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರ್ತಿಕೆರೆ ಗ್ರಾಮದ ಅವುಕ ರಸ್ತೆ ನಿವಾಸಿ ಸತೀಶ್ ಶೆಟ್ಟಿ (55) ಎಂಬವರನ್ನು ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫಯಾಜ್ (ಕೋಳಿ ಫಯಾಜ್) (41) ಮತ್ತು ಕೃಷ್ಣ (49) ಎಂಬುವರಿಗೆ ಸಾಗರ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿದೆ.

WhatsApp Group Join Now
Telegram Group Join Now
Instagram Group Join Now

ಏನಿದು ಪ್ರಕರಣ ?

ಸತೀಶ್ ಶೆಟ್ಟಿ ಅವರು ಫಯಾಜ್ ಹಾಗೂ ಕೃಷ್ಣ ಅವರೊಂದಿಗೆ ಗಾರೆ ಕೆಲಸ ಮಾಡುತ್ತಿದ್ದು ಕಟ್ಟಡ ನಿರ್ಮಾಣವೊಂದರ ಕೂಲಿ ಹಣವನ್ನು ಫಯಾಜ್ ಹಾಗೂ ಕೃಷ್ಣ ಅವರಿಗೆ ಸತೀಶ್ ಶೆಟ್ಟಿ ಪಾವತಿಸಬೇಕಿತ್ತು. ಈ ವಿಷಯದಲ್ಲಿ ಅವರ ನಡುವೆ ಮನಸ್ತಾಪ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ 2021ರ ಡಿ.22ರಂದು ರಾತ್ರಿ 11 ಗಂಟೆಗೆ ಫಯಾಜ್ ಹಾಗೂ ಕೃಷ್ಣ ಒಟ್ಟಿಗೆ ಸೇರಿ ಸತೀಶ್ ಶೆಟ್ಟಿ ಅವರನ್ನು ಅಮೃತ ಗ್ರಾಮದ ಕೆಳಗಿನ ಕೆರೆಯ ದಂಡೆಗೆ ಕರೆದುಕೊಂಡು ಹೋಗಿ ಅವರ ಕುತ್ತಿಗೆಗೆ ಕತ್ತಿ ಮತ್ತು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ನಂತರ ಅನುಮಾನ ಬರಬಾರದು ಎಂದು ಸತೀಶ್ ಶೆಟ್ಟಿ ಅವರ ಶವವನ್ನು ಕೆರೆಗೆ ಎಸೆದು ಸಾಕ್ಷ್ಯ ನಾಶ ಮಾಡಲು ಮುಂದಾಗಿದ್ದರು. ಸತೀಶ್ ಶೆಟ್ಟಿ ಅವರ ಶವ ಕೆರೆಯ ಮೇಲ್ಭಾಗದಲ್ಲಿ ಕಾಣಿಸಿಕೊಂಡಿತ್ತು.

ಕೊಲೆಯಾದ ದಿನ ಸತೀಶ್ ಶೆಟ್ಟಿ ಅವರೊಂದಿಗೆ ಫಯಾಜ್ ಹಾಗೂ ಕೃಷ್ಣ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಕಾರಣ ಸತೀಶ್ ಶೆಟ್ಟಿ ಅವರ ಸಹೋದರಿ ಗುಲಾಬಿ ಅವರ ಗಂಡ ರಾಜುಶೆಟ್ಟಿ ಅವರು ಕೊಲೆ ಪ್ರಕರಣ ಎಂದು ರಿಪ್ಪನ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ನಡೆಸಿದ ಪೊಲೀಸರು ಫಯಾಜ್ ಹಾಗೂ ಕೃಷ್ಣ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರಭಾವತಿ ಜಿ. ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಣ್ಣಪ್ಪನಾಯ್ಕ ಸಾಕ್ಷಿಗಳ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Leave a Comment