ರಿಪ್ಪನ್‌ಪೇಟೆ ; ಕೇಂದ್ರದ ಕಾಂಗ್ರೆಸ್ ಸರ್ಕಾರ ಅಧಿಕಾರಾವಧಿಯಲ್ಲಿ ಅನುಷ್ಟಾನಗೊಳಿಸಿದ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯ ಕೂಲಿಗಾಗಿ ಕಾಳು ಯೋಜನೆಯಿಂದಾಗಿ ಹಸಿವು ಮುಕ್ತ ದೇಶವನ್ನಾಗಿಸುವ ಯೋಜನೆಯನ್ನು ಇಂದಿನ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕತ್ತರಿಹಾಕುವ ಮೂಲಕ ವಿಬಿ ಜಿ ರಾಮ್ ಹೆಸರಿನ್ನು ಬದಲಾಯಿಸುವುದರೊಂದಿಗೆ ಗಾಂಧೀ ಹೆಸರಿಗೆ ಕಳಂಕ ತಂದಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕೇಂದ್ರ ಸರ್ಕಾರವನ್ನು ಬಹಿರಂಗವಾಗಿ ಟೀಕಿಸಿದರು.
ಹರತಾಳು ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತ ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಳೆದ ಎರಡೂವರೆ ವರ್ಷದಿಂದ ಉದ್ಯೋಗಖಾತ್ರಿ ಯೋಜನೆಯ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಲ್ಲ ಶೇ.60 ರಷ್ಟು ಹಣ ಕೇಂದ್ರ ಸರ್ಕಾರದ್ದು ಶೇ.40 ರಷ್ಟು ರಾಜ್ಯ ಸರ್ಕಾರ ಹಣ ನೀಡುವ ಯೋಜನಗೆ ಉದ್ಯೋಗ ಖಾತ್ರಿ ಕಾಮಗಾರಿಗೆ ಕೇಂದ್ರ ಸರ್ಕಾರ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಹೇಳಿದ ಅವರು, ಉದ್ಯೋಗವಿಲ್ಲದೆ ನಿರುದ್ಯೋಗಿಗಳಿಗೆ ಬಡ ಕೂಲಿಕಾರ್ಮಿರಿಗೆ ವರದಾನವಾಗಿದ್ದ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಕಳೆದ ಎರಡೂವರೆ ವರ್ಷದಿಂದ ಹಣ ಬಿಡುಗಡೆ ಮಾಡದೇ ಇರುವುದರಿಂದ ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಖಾತ್ರಿ ಕಾಮಗಾರಿ ಪೂರ್ಣವಾಗದೆ ಅಭಿವೃದ್ದಿಯಿಂದ ಕುಂಠಿತಗೊಳ್ಳುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಬಹುವರ್ಷದ ಬೇಡಿಕೆಯಾದ ಹರತಾಳು ಗ್ರಾಮ ಪಂಚಾಯಿತ್ ವ್ಯಾಪ್ತಿಯ ನಂಜವಳ್ಳಿ ಮುಖ್ಯ ರಸ್ತೆಯಿಂದ ಲಿಂಗನಕೊಪ್ಪ ಸಂಪರ್ಕ ರಿಪ್ಪನ್‌ಪೇಟೆಯಿಂದ ಏರಿಸೀಮೆ ಮುಖ್ಯ ಸಂಪರ್ಕ ರಸ್ತೆಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸುವ ಮೂಲಕ ಕಾಮಗಾರಿಗೆ ಇಂದು ಗುದ್ದಲಿ ಪೂಜೆಯೊಂದಿಗೆ ಚಾಲನೆ ನೀಡಲಾಗಿದ್ದು ಇನ್ನೂ ಹೆಚ್ಚುವರಿ ರಸ್ತೆ ಅಭಿವೃದ್ದಿಗೆ ಅನುದಾನವನ್ನು ಮಾರ್ಚ್ ಅಂತ್ಯದೊಳಗೆ ಬಿಡುಗಡೆಗೊಳಿಸಿ ರಸ್ತೆ ಅಭಿವೃದ್ದಿ ಪಡಿಸುವುದಾಗಿ ಮತದಾರರಿಗೆ ಭರವಸೆ ನೀಡಿದ ಅವರು, ನಾನು ಈ ಹಿಂದೆ ಕ್ಷೇತ್ರದ ಶಾಸಕನಾಗಿದ್ದ ಅವಧಿಯಲ್ಲಿ ಹರತಾಳು ಗ್ರಾಮ ಪಂಚಾಯಿತ್ ಕಟ್ಟಡ ಮಾಡಿ ಉದ್ಘಾಟಿಸಲಾಗಿತ್ತು. ಆ ಕಟ್ಟಡ ಚಿಕ್ಕದಾಗಿದ್ದು ಈಗ ಸುವ್ಯವಸ್ಥಿತ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ಅದಷ್ಟು ಬೇಗ ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ಸೂಚಿಸಿದ ಅವರು, ಕ್ಷೇತ್ರದ ಮೂಲಭೂತ ಸೌಲಭ್ಯಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತರುವುದಾಗಿ ವಿವರಿಸಿ ಸರ್ಕಾರದಲ್ಲಿ ಆರ್ಥಿಕ ಸಮಸ್ಯೆ ಇಲ್ಲ ಅಭಿವೃದ್ದಿಗೆ ಎಲ್ಲೂ ಕೊರತೆಯಾಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೆಚ್ಚಿನ ಆನುದಾನವನ್ನು ಕೊಡುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆ ಬಡ ನಾಗರೀಕರಿಗೆ ಮತ್ತು ಮಹಿಳೆಯರಿಗೆ ಸಮರ್ಪಕವಾಗಿ ತಲುಪುವುದರೊಂದಿಗೆ ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿದೆ ಎಂದರು.

ಹರತಾಳು ಗ್ರಾಮ ಪಂಚಾಯಿತ್ ಅಧ್ಯಕ್ಷೆ ನಾಗರತ್ನ ವಾಸುದೇವ ಅಧ್ಯಕ್ಷತೆ ವಹಿಸಿದ್ದರು.
ಕಾಂಗ್ರೆಸ್ ಮುಖಂಡೆ ತಾಲ್ಲೂಕು ಬಗರ್‌ಹುಕುಂ ಸಮಿತಿಯ ಸದಸ್ಯೆ ಸಾಕಮ್ಮ ಮನೋಹರ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಬಡವರ ಆಶಾಕಿರಣ ದೀನದಲಿತರ ನಾಯಕ ಬಂಗಾರಪ್ಪಾಜಿಯವರಂತೆ ಸದಾ ಬಡವರ ಶ್ರೇಯೋಭಿವೃದ್ದಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ ಅಂತಹ ವ್ಯಕ್ತಿತ್ವದ ನಮ್ಮ ನಾಯಕರಾದ ಗೋಪಾಲಕೃಷ್ಣ ಬೇಳೂರು ಕ್ಷೇತ್ರದ ಶಾಸಕರಾಗಿ ಬಡವರಣ ಕಣ್ಣೀರು ಒರೆಸುವ ಪುಣ್ಯಾತ್ಮ ಎಂದು ವರ್ಣಿಸಿದ ಅವರು ಕಷ್ಟೆಂದು ಮನೆಬಾಗಿಲಿಗೆ ಬಂದವರನ್ನು ಎಂದಿಗೂ ಹಾಗೆ ಕಳುಹಿಸಿಲ್ಲ ಇಂತಹ ಜನನಾಯಕ ಪಡೆದ ನಾವುಗಳೇ ಧನ್ಯರು ಎಂದು ಹೇಳಿ, ಅಭಿವೃದ್ದಿಯೊಂದಿಗೆ ಸರ್ಕಾರದ ಗ್ಯಾರಂಟಿ ಯೋಜೆಯಾದ ಶಕ್ತಿ ಯೋಜನೆಯಡಿ ನಮ್ಮೂರಿನ ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ ಸೌಲಭ್ಯವನ್ನು ಕಲ್ಪಿಸಿರುವ ಕರುಣಾಮಯಿ ಎಂದರು.
ಈ ಸಭೆಯಲ್ಲಿ ಹೊಸನಗರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿಗೌಡ, ಹರತಾಳು ಗ್ರಾಮದ ಹಿರಿಯ ಮುಖಂಡ ಜಯಶೀಲಗೌಡ, ಹೊಸನಗರ ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಚಿದಂಬರ್, ಉಪಾಧ್ಯಕ್ಷ ಕಣಕಿ ನಾರಾಯಣಪ್ಪ, ಗ್ರಾಮ ಪಂಚಾಯಿತ್ ಸದಸ್ಯ ಶಿವಕುಮಾರ್, ನಾ.ರಿ.ರವಿ, ಸತ್ಯವತಿ, ಹರಿದ್ರಾವತಿ ಗ್ರಾಮ ಪಂಚಾಯಿತ್ ಸದಸ್ಯ ಮಳವಳ್ಳಿ ಸಂತೋಷ, ತಹಸೀಲ್ದಾರ್ ಭರತರಾಜ ಕೆ.ಎನ್, ಸ್ವಸಹಾಯ ಸಂಘಗಳ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





