ಅಜ್ಜಂಪುರ : ಜಾತ್ರೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಎತ್ತಿನಗಾಡಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಹಾಗೂ ಎತ್ತು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಅಮೃತ್ ಮಹಲ್ ಕಾವಲ್ ಬಳಿ ಸಂಭವಿಸಿದೆ.
ಮೃತ ಬೈಕ್ ಸವಾರ ಶಿವಮೊಗ್ಗ ಮೂಲದ ಸುರೇಶ್ (50) ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿದ್ದ ಮತ್ತೋರ್ವ ಸವಾರ ರವಿ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಅಜ್ಜಂಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಜ್ಜಂಪುರ ತಾಲೂಕಿನಲ್ಲಿ ಕಳೆದೊಂದು ವಾರದಿಂದ ಅಂತರಘಟ್ಟೆ ಜಾತ್ರೆ ನಡೆಯುತ್ತಿದ್ದು, ಜಾತ್ರೆಗೆ ಬಂದಿದ್ದ ತರೀಕೆರೆ ತಾಲೂಕಿನ ಹಾದಿಕೆರೆ ಮೂಲದ ಎತ್ತಿನಗಾಡಿ ಊರಿಗೆ ವಾಪಸ್ ಹೋಗುವಾಗ ಈ ಘಟನೆ ಸಂಭವಿಸಿದೆ.
ಎತ್ತಿನಗಾಡಿ-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿದೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.