ಕಾಡು ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವು !
ಮೂಡಿಗೆರೆ: ಇಲ್ಲಿನ ಬಿಳಗುಳ ಕೊಲ್ಲಿಬೈಲ್ ಸಮೀಪದ ಲಕ್ಷ್ಮಣಗೌಡ ಎಂಬುವವರ ಸುಮಾರು 10 ವರ್ಷದಿಂದ ಪಾಳುಬಿದ್ದ ಕಾಫಿ ತೋಟದಲ್ಲಿ ದುಷ್ಕರ್ಮಿಗಳು ಕಾಡು ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಹೆಣ್ಣು ಚಿರತೆ (Leopard ) ಸಿಲುಕಿ ಸೋಮವಾರ ತಡರಾತ್ರಿ ಮೃತಪಟ್ಟಿದೆ.
ಚಿರತೆಯ ಕೂಗಾಟ ಕೇಳಿ ದಾರಿಯಲ್ಲಿ ಹೋಗುವ ಪ್ರಯಾಣಿಕರು ಗಮನಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದು, ರಾತ್ರಿಯೇ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಚಿರತೆಯನ್ನು ಬದುಕಿಸಲು ಪ್ರಯತ್ನಪಟ್ಟಿದ್ದರಾದರೂ ಉರುಳು ಕುತ್ತಿಗೆಗೆ ಬಲವಾಗಿ ಸಿಲುಕಿದ್ದ ಕಾರಣ ಮೃತಪಟ್ಟಿದೆ ಎನ್ನಲಾಗಿದೆ.

ಮೂಡಿಗೆರೆ ತಾಲೂಕಿನ 10 ಗ್ರಾಮಗಳಲ್ಲಿ ಮೂರಕ್ಕೂ ಅಧಿಕ ಚಿರತೆ ಸಂಚಾರ ಮಾಡುತ್ತಿರುವುದಾಗಿ ಗ್ರಾಮಸ್ಥರ ಆತಂಕ ವ್ಯಕ್ತಪಡಿಸಿದ್ದರು. ಅದರಲ್ಲಿ ಒಂದು ಚಿರತೆ ಸಾವನ್ನಪ್ಪಿದೆ.
ಈ ಸಂಬಂಧ ತೋಟದ ಮಾಲೀಕ ಲಕ್ಷ್ಮಣಗೌಡ ಮತ್ತು ಉರುಳು ಹಾಕಿದ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂಡಿಗೆರೆ ಅರಣ್ಯ ಇಲಾಖೆಗೆ ಶವ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆಯ ಬಳಿಕ ಚಿರತೆಯ ಅಂತ್ಯಸಂಸ್ಕಾರ ನಡೆಸಲು ತಿರ್ಮಾನಿಸಲಾಗಿದೆ.