ಚಿಕ್ಕಮಗಳೂರು: ಪೌತಿ ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಲ್ಲದೇ ಮಹಿಳೆಯೊಬ್ಬರಿಂದ ಹಣ ಪಡೆಯುತ್ತಿದ್ದ ವೇಳೆ ಕಂದಾಯ ನಿರೀಕ್ಷಕನೊಬ್ಬ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚಿಕ್ಕಮಗಳೂರು ನಗರದ ಶಾಂತಿನಗರದ ಮಹಿಳೆಯೊಬ್ಬರು ತನ್ನ ತಂದೆ ಹೆಸರಿನಲ್ಲಿ ಆವತಿ ಹೋಬಳಿಯಲ್ಲಿದ್ದ 2 ಎಕರೆ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಆವುತಿ ನಾಡಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಆವುತಿ ಹೋಬಳಿ ಕಂದಾಯ ನಿರೀಕ್ಷಕ ಮಂಜುನಾಥ್ ಪೌತಿ ಖಾತೆ ಮಾಡಿಕೊಡಲು ಆರಂಭದಲ್ಲಿ 10 ಸಾವಿರ ರೂ. ಪಡೆದಿದ್ದು, ಮತ್ತೆ 50 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಬಗ್ಗೆ ಕಂದಾಯ ನಿರೀಕ್ಷಕ ಹಣಕ್ಕೆ ಬೇಡಿಕೆ ಇಟ್ಟಿದ್ದ ಆಡಿಯೋ ತುಣಕಿನೊಂದಿಗೆ ಮಹಿಳೆಯು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಶುಕ್ರವಾರ ಆವುತಿ ನಾಡಕಚೇರಿಯಲ್ಲಿ ಆರ್.ಐ ಮಂಜುನಾಥ್ ಅವರು ಮಹಿಳೆಯಿಂದ 25 ಸಾವಿರ ರೂ. ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆಂದು ತಿಳಿದು ಬಂದಿದೆ.
ಲೋಕಾಯುಜಕ್ತ ಡಿವೈಎಸ್ಪಿ ಪಿ.ತಿರುಮಲೇಶ್ ಹಾಗೂ ಪೊಲೀಸ್ ಇನ್‍ಸ್ಪೆಕ್ಟರ್‍ಗಳಾದ ಸಚಿನ್‍ಕುಮಾರ್, ಅನಿಲ್ ರಾಥೋಡ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.