ವಿಕೋಪಕ್ಕೆ ತಿರುಗಿದ ಆಸ್ತಿ ವಿಚಾರದಲ್ಲಿ ನಡೆದ ಮಾತುಕತೆ ; ತಂದೆ ಸೇರಿದಂತೆ ಇಬ್ಬರ ಹತ್ಯೆಗೈದ ಪಾಪಿ ಮಗ ! ತಾಯಿ ಸ್ಥಿತಿಯೂ ಗಂಭೀರ

0 63

ಮೂಡಿಗೆರೆ : ಆಸ್ತಿ ಮಾರಾಟ ಮಾಡಿದ ಹಣದ ವಿಚಾರದಲ್ಲಿ ನಡೆದ ಮಾತುಕತೆ ವಿಕೋಪಕ್ಕೆ ತಿರುಗಿ ತಂದೆ ಸೇರಿದಂತೆ ಇಬ್ಬರ ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಹೆತ್ತ ಮಗನೇ ತಂದೆ-ತಾಯಿ ಜೊತೆಗೆ ಮಧ್ಯವರ್ತಿಯ ಮೇಲೆ ಮಚ್ಚು ಬೀಸಿ ಕೊಲೆ ಮಾಡಲಾಗಿದೆ. ಇಂತಹ ದಾರುಣ ಘಟನೆಗೆ ಮೂಡಿಗೆರೆ ತಾಲೂಕಿನ ಸುಂಕಸಾಲಿ ಸಮೀಪದ ಮಧುಗುಂಡಿ ಗ್ರಾಮ ಸಾಕ್ಷಿಯಾಗಿದೆ.

ಮೃತನನ್ನ ಭಾಸ್ಕರ್ ಗೌಡ (69) ಹಾಗೂ ಕಾರ್ತಿಕ್ (45) ಎಂದು ಗುರುತಿಸಲಾಗಿದೆ. ಪ್ರೇಮಾ (52) ಕುತ್ತಿಗೆ ಭಾಗಕ್ಕೆ ಬಲವಾದ ಮಚ್ಚಿನ ಏಟು ಬಿದ್ದಿರುವುದರಿಂದ ಆಕೆ ಕೂಡ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಆಸ್ತಿಗಾಗಿ ಮೂವರ ಮೇಲೆ ಮಚ್ಚು ಬೀಸಿದ ಆರೋಪಿ ಸಂತೋಷ್ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಘಟನೆ ಹಿನ್ನೆಲೆ :

ಮೃತ ಭಾಸ್ಕರ್ ಗೌಡ ಅವರಿಗೆ ಸುಮಾರು 15 ಎಕರೆಯಷ್ಟು ಕಾಫಿ ತೋಟವಿತ್ತು. ಭಾಸ್ಕರ್ ಗೌಡಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ಶಿವು ತೋಟ ಮಾರಬೇಕೆಂದು, ಕಿರಿಯ ಮಗ ಸಂತೋಷ್ ತೋಟವನ್ನ ಮಾರುವುದು ಬೇಡ ಎಂದು. ಆದರೆ, ತಂದೆ ತೋಟವನ್ನ ಮಧ್ಯವರ್ತಿ ಕಾರ್ತಿಕ್ ಮೂಲಕ ಆಂಧ್ರಪ್ರದೇಶ ಮೂಲದ ವ್ಯಕ್ತಿಗೆ ಮಾರಾಟ ಮಾಡಿಸಿದ್ದನು. ತೋಟವನ್ನು ಖರೀದಿಸಿದ್ದ ವ್ಯಕ್ತಿ ಮುಂಗಡವಾಗಿ 12 ಲಕ್ಷ ಹಣ ನೀಡಿದ್ದನು. 12 ಲಕ್ಷ ಹಣವನ್ನ ಭಾಸ್ಕರ್ ಗೌಡರ ಹಿರಿಯ ಮಗ ಶಿವು ತೆಗೆದುಕೊಂಡು ಹೋಗಿದ್ದನು. ಇದರಿಂದ ಸಿಟ್ಟಾದ ಕಿರಿಯ ಮಗ ಸಂತೋಷ್, ತೋಟವನ್ನ ಮಾರಿಸಿದ ಕಾರ್ತಿಕ್ ಮನೆಗೆ ಬಂದಾಗ ಆತನ ಮೇಲೆ ಮಚ್ಚು ಬೀಸಿದ್ದಾನೆ. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದನು.

ಈ ವೇಳೆ, ಸಂತೋಷ್ ಅನ್ನು ತಡೆಯಲು ಬಂದ ಅಪ್ಪ ಹಾಗೂ ಅಮ್ಮನ ಮೇಲೂ ಮಗ ಸಂತೋಷ ಮಚ್ಚುಬಿಸಿದ್ದನು. ಕಾರ್ತಿಕ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅಪ್ಪ-ಅಮ್ಮನನ್ನ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ 69 ವರ್ಷದ ಭಾಸ್ಕರ್ ಗೌಡ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಕೃತ್ಯದ ಬಳಿಕ ಆರೋಪಿ ಸಂತೋಷ್ ಶರಣು :

ನಿನ್ನೆ ರಾತ್ರಿ ತನ್ನ ಮನೆಗೆ ಬಂದಿದ್ದ ಕಾರ್ತಿಕ್ ಗೌಡ ಅವರೊಂದಿಗೆ ಹಣಕಾಸಿನ ವಿಚಾರವಾಗಿ ಮಾತಿಗೆ ಮಾತು ಬೆಳೆಸಿದ ಸಂತೋಷ್ ಏಕಾಏಕಿ ಮನೆಯೊಳಗಿನಿಂದ ಮಚ್ಚು ತಂದು ಕಾರ್ತಿಕ್ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಕಾರ್ತಿಕ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ ಎನ್ನಲಾಗಿದೆ.

ಕೊಲೆ ಬಳಿಕ ಆರೋಪಿ ಸಂತೋಷ್ ಬಾಳೂರು ಠಾಣೆಗೆ ಬಂದು ಶರಣಾಗಿದ್ದಾನೆ. ಕಾರ್ತಿಕ್ ಮಧುಗುಂಡಿ ಗ್ರಾಮದ ಉಪೇಂದ್ರಗೌಡ ಎಂಬುವವರ ಪುತ್ರ. ಈ ಭಾಗದಲ್ಲಿ ಉತ್ತಮ ಜನಸಂಪರ್ಕ ಹೊಂದಿದ್ದರು. ವಿವಾಹವಾಗಿ ಒಂದು ಮಗು ಇತ್ತು. ಅವರ ತಂದೆ ಇತ್ತೀಚೆಗಷ್ಟೇ ನಿಧನ ಹೊಂದಿದ್ದರು. ವಿವಾಹ ಮಾಡಿಕೊಟ್ಟಿದ್ದ ಸಹೋದರಿಯೂ ಈ ಹಿಂದೆ ಅಪಘಾತದಲ್ಲಿ ನಿಧನ ಹೊಂದಿದ್ದರು. ಈ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದು, ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!