ಬಾಳೆಹೊನ್ನೂರು ಧರ್ಮ ಪೀಠದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ 32ನೇ ವರ್ಷದ ಶ್ರಾವಣ ತಪೋನುಷ್ಠಾನ

0 43

ಎನ್.ಆರ್.ಪುರ: ‌ಮಲಯಾಚಲ ತಪೋಭೂಮಿ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಆ.17 ರಿಂದ ಸೆ. 14 ರವರೆಗೆ ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ 32ನೇ ವರ್ಷದ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನ ಜರುಗುವುದು. ಪ್ರತಿ ದಿನ ಬೆಳಿಗ್ಗೆ 8.30 ಗಂಟೆಗೆ ನಡೆಯುವ ಇಷ್ಟಲಿಂಗ ಮಹಾಪೂಜೆಯಲ್ಲಿ ಸೇವಾಕರ್ತರು ಮತ್ತು ಭಕ್ತಾದಿಗಳು ಪಾಲ್ಗೊಳ್ಳಲು ಅವಕಾಶವಿದೆ.


ಪ್ರತಿ ದಿನ ಸಂಜೆ 7.00 ಗಂಟೆಗೆ ಆಳಂದ ತಾಲೂಕ ಮಾದನಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮಿಗಳು “ಶ್ರೀ ಜಗದ್ಗುರು ರೇಣುಕ ವಿಜಯ” ಪುರಾಣವನ್ನು ಪ್ರವಚನ ಮಾಡುವರು. ಈ ಸಂದರ್ಭದಲ್ಲಿ ಆಗಮಿಸುವ ಪಟ್ಟಾಧ್ಯಕ್ಷರಿಂದ ಹಾಗೂ ವಾಗ್ಮಿಗಳಿಂದ ನುಡಿಸೇವೆ ನಡೆಯಲಿದ್ದು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿ ಸೋಮವಾರ ಮತ್ತು ಗುರುವಾರ ಶ್ರೀಮದ್ ರಂಭಾಪುರಿ ಜಗದ್ಗುರುಗಳು ಸಭೆಗೆ ಆಗಮಿಸಿ ಶುಭಾಶೀರ್ವಾದ ಸಂದೇಶ ನೀಡುವರು.
ದಿನಾಂಕ 20-8-2023 ಭಾನುವಾರದಂದು ಲಿಂ. ಶ್ರೀ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ 76ನೇ ಪುಣ್ಯ ಸ್ಮರಣೋತ್ಸವ ಜರುಗಲಿದ್ದು ಖಾಂಡ್ಯ ಮತ್ತು ಜಾಗರ ಹೋಬಳಿ ಶಿಷ್ಯ ಸಮುದಾಯದವರು ದಾಸೋಹ ಸೇವೆ ನಡೆಸುವರು.

ಆ. 24 ಗುರುವಾರದಂದು ಲಿಂ. ಶ್ರೀ ಜಗದ್ಗುರು ವೀರರುದ್ರಮುನಿದೇವ ಶಿವಾಚಾರ್ಯ ಭಗವತ್ಪಾದರ 31ನೇ ಪುಣ್ಯ ಸ್ಮರಣೆ ಜರುಗಲಿದ್ದು ಆಲ್ದೂರು ಹೋಬಳಿ ವೀರಶೈವ ಸಮಾಜದಿಂದ ಪೂಜಾ ಹಾಗೂ ದಾಸೋಹ ಸೇವೆ ಜರುಗುವುದು. ವರ್ಷದ 365 ದಿನ ರುದ್ರಾಭಿಷೇಕ ಹಾಗೂ ಶ್ರಾವಣ ಮಾಸ ಪರ್ಯಂತರ ಮಹಾರುದ್ರಾಭಿಷೇಕ ಹಾಗೂ ಸಿಹಿ ಪ್ರಸಾದ ವಿತರಣೆ ಸೇವೆಯನ್ನು ಭದ್ರಾವತಿಯ ಲಿಂ.ಎಸ್.ಜಿ.ಶಿವಶಂಕರಯ್ಯನವರ ಮಕ್ಕಳು ನೆರವೇರಿಸುವರು.


ಪ್ರತಿ ನಿತ್ಯ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿಗೆ, ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ, ಶಕ್ತಿಮಾತೆ ಶ್ರೀ ಚೌಡೇಶ್ವರಿ-ಶ್ರೀ ಭದ್ರಕಾಳಿ, ಶ್ರೀ ಪಾರ್ವತಿ ಅಮ್ಮನವರಿಗೆ ಹಾಗೂ ಲಿಂಗೈಕ್ಯ ಜಗದ್ಗುರುಗಳವರ ಗದ್ದುಗೆಗೆ ಮಹಾರುದ್ರಾಭಿಷೇಕ, ಅಷ್ಟೋತ್ತರ, ಮಹಾಮಂಗಲ ವಿಶೇಷ ಪೂಜೆ ನಡೆಯುವುದು.


ಶ್ರಾವಣ ಪರ್ಯಂತ ಪುರಾಣ ಪೂಜಾ ಸೇವೆಯನ್ನು ಬೆಂಗಳೂರಿನ ಲತಾ ಹಾಗೂ ಡಾ.ಬಸವರಾಜ ಜಿಗಳೂರ ಇವರು, ಗದ್ದಿಗೆ ಹೂವಿನ ಸೇವೆಯನ್ನು ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್ ಚಿಕ್ಕಮಗಳೂರು, ದಾಸೋಹ ಸೇವೆಯನ್ನು ಗದಗ ಬೆಟಗೇರಿಯ ಶ್ರೀ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರ ಟ್ರಸ್ಟನವರು, ಹೂವಿನ ಸೇವೆಯನ್ನು ಭದ್ರಾವತಿಯ ಎಸ್.ಎಸ್.ಉಮೇಶ್, ಕ್ಷೀರಾಭಿಷೇಕ ಸೇವೆಯನ್ನು ಬೆಂಗಳೂರಿನ ಆರ್.ಗಣೇಶಕುಮಾರ್ ಹಾಗೂ ಪತ್ರಿಕಾ ಮುದ್ರಣ ಸೇವೆಯನ್ನು ಚಿಕ್ಕಮಗಳೂರಿನ ಶ್ರೀ ದೇವ ಮತ್ತು ಕೋ ಇವರು ವಹಿಸಿಕೊಂಡಿದ್ದಾರೆ. ಶ್ರೀ ಪೀಠಕ್ಕೆ ಆಗಮಿಸುವ ಭಕ್ತಾದಿಗಳಿಗಾಗಿ ಬೆಳಗಿನ ಫಲಾಹಾರ ಮಧ್ಯಾಹ್ನ ಮತ್ತು ರಾತ್ರಿ ದಾಸೋಹದ ವ್ಯವಸ್ಥೆ ಇರುತ್ತದೆ.

Leave A Reply

Your email address will not be published.

error: Content is protected !!