ಎನ್.ಆರ್ ಪುರ : ಲೋಕಾಯುಕ್ತಕ್ಕೆ ಮುಕ್ತ ಅಧಿಕಾರ ನೀಡಿ ಯಾರೇ ತಪ್ಪು ಮಾಡಿದರೂ ಕೂಡ ನಾವು ಕ್ರಮ ತೆಗೆದುಕೊಳ್ಳಲು ಸಿದ್ದ ಎನ್ನುವುದು ನಮ್ಮ ನೈತಿಕತೆ. ತಪ್ಪುಗಳನ್ನು ಮುಚ್ಚಿಹಾಕುವುದು ಕಾಂಗ್ರೆಸ್ ನೈತಿಕತೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬಾಳೆಹೊನ್ನೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ರಾಜೀನಾಮೆ ಕೇಳುತ್ತಿರುವ ಕಾಂಗ್ರೆಸ್ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಗಳಿದ್ದಾಗ ಅವರ ಸಚಿವರ ಕಚೇರಿಯಲ್ಲಿ 25 ಲಕ್ಷ ರೂ. ಲಂಚ ಪಡೆಯುತ್ತಿರುವಾಗ ಸಿಕ್ಕಿಹಾಕಿಕೊಂಡಿದ್ದರು. ಅಂದು ಅವರು ರಾಜಿನಾಮೆ ನೀಡಲಿಲ್ಲ. ಲೋಕಾಯುಕ್ತ ಇದ್ದಿದ್ದರೆ ಅವರ ಮೇಲೆ ಪ್ರಕರಣ ದಾಖಲಾಗುತ್ತಿತ್ತು. ಅವರು ಭ್ರಷ್ಟಾಚಾರ ಮುಚ್ಚಿಹಾಕಲು ಪ್ರಯತ್ನ ಮಾಡಿದರು ಎಂದರು.
ತಪ್ಪುಗಳನ್ನು ಮುಚ್ಚಿಹಾಕಿಕೊಳ್ಳಲು ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಕಾಂಗ್ರೆಸ್ ಎಲ್ಲೆಡೆ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಮಾತನಾಡಿ ಜನರಿಗೆ ಗೊತ್ತಿದೆ. ಯಾರು, ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ, ತಪ್ಪುಗಳನ್ನು ಮುಚ್ಚಿಹಾಕಿಕೊಳ್ಳಲು ಮತ್ತೆ ಅಧಿಕಾರಕ್ಕೆ ಬರಬೇಕೆಂದು ಇವರು ಇದನ್ನು ಮಾಡುತ್ತಾರೆ. ಕಾಂಗ್ರೆಸ್ ಮಾಡಿದ ಕರ್ಮಕಾಂಡ ಯಾರೂ ಮರೆತಿಲ್ಲ. ಕೊಲೆ, ಸುಲಿಗೆ, ಭ್ರಷ್ಟಾಚಾರ, ಲೂಟಿ ಮಾಡಿದ್ದಾರೆ. ಅವರ ಕಾಲದ 59 ಕೇಸ್ ಲೋಕಾಯುಕ್ತಕ್ಕೆ ವಹಿಸಿದ್ದು ಸತ್ಯ ಹೊರಗೆ ಬರಲಿದೆ ಎಂದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಳಗಾವಿಯಲ್ಲಿ ಈಗಾಗಲೇ ಲೋಕಾರ್ಪಣೆಗೊಂಡಿರುವ ಶಿವಾಜಿ ಪ್ರತಿಮೆಯನ್ನು ಕಾಂಗ್ರೆಸ್ ನಾಯಕರು ಮತ್ತೆ ಲೋಕಾರ್ಪಣೆ ಮಾಡುತ್ತಿರುವುದು ನಿಜವಾಗಿಯೂ ಇದು ಹಾಸ್ಯಾಸ್ಪದ. ಅದು ಸರ್ಕಾರದಿಂದ ನಿರ್ಮಾಣಗೊಂಡಿರುವ ಶಿವಾಜಿ ಪ್ರತಿಮೆ, ಸರ್ಕಾರ ಈ ಪ್ರತಿಮೆಯನ್ನ ಅಧಿಕೃತವಾಗಿ ಉದ್ಘಾಟಿಸಿದೆ, ಈಗ ಅಲ್ಲಿಗೆ ಭೇಟಿ ಕೊಡಬಹುದು, ಗೌರವ ಸಮರ್ಪಣೆ ಮಾಡಬಹುದು. ಆದರೆ ಮತ್ತೆ ಉದ್ಘಾಟನೆ ಮಾಡುತ್ತಿರುವುದನ್ನು ಎಲ್ಲೂ ಕೇಳಿರಲಿಲ್ಲ, ನೋಡಿರಲ್ಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿ ಅವರು, ಇದರಿಂದ ಅಧಿಕಾರ ಚಲಾವಣೆ ಮಾಡಬೇಕು ಎಂಬ ಲಾಲಾಸೆ ಎಷ್ಟಿದೆ ಎಂಬುದು ಗೊತ್ತಾಗುತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.