ಸತ್ಕಾರ್ಯಗಳಿಂದ ಸತ್ಫಲ ಪ್ರಾಪ್ತಿ ; ಶ್ರೀ ರಂಭಾಪುರಿ ಜಗದ್ಗುರುಗಳು
ಎನ್.ಆರ್ ಪುರ: ಬದುಕಿ ಬಾಳುವ ಮನುಷ್ಯನಿಗೆ ಭಗವಂತ ಅಮೂಲ್ಯ ಸಂಪನ್ಮೂಲಗಳನ್ನು ಕೊಟ್ಟಿದ್ದಾರೆ. ಅರಿತು ಆಚರಿಸಿ ಬಾಳುವುದು ಮನುಷ್ಯನ ಗುಣಧರ್ಮವಾಗಬೇಕು. ಸತ್ಕಾರ್ಯಗಳನ್ನು ಮಾಡುವುದರ ಮೂಲಕ ಸತ್ಫಲಗಳನ್ನು ಪಡೆಯಲು ಸಾಧ್ಯವಾಗುವುದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಶ್ರೀ ಜಗದ್ಗುರು ಪಂಚಾಚಾರ್ಯ ಧ್ವಜಾರೋಹಣ ಹರಿದ್ರಾ ಲೇಪನ ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು.
ತಿದ್ದದೆ ತೀಡದೇ ಅಂದ ಕಾಣದು ಗೊಂಬೆ. ಬಿತ್ತದೆ ಕೆತ್ತದೆ ಬೆಳೆ ಬೆಳೆಯದು ಭೂಮಿ. ನಿಂದನೆ ನೋವಿಗೆ ಅಳುಕಿದರೆ ಬದುಕು ರೂಪಗೊಳ್ಳದು. ನೊಂದರೂ ಬೆಂದರೂ ಬದುಕು ಸಾಗಲೇಬೇಕು. ಅತಿಯಾಗಿ ಚಿಂತಿಸದೇ ಅರಿವಿನ ದಾರಿಯಲ್ಲಿ ನಡೆಯುವುದೇ ಮನುಷ್ಯನ ಗುರಿಯಾಗಬೇಕು. ಕಾಲೆಳೆಯುವುವರು ಎಷ್ಟಿದ್ದರೂ ಕೈ ಹಿಡಿದು ಮೇಲೆತ್ತುವ ಭಗವಂತ ಒಬ್ಬನಿದ್ದಾನೆ ಎಂಬ ನಂಬಿಕೆಯಿರಲಿ. ಸೋರುವ ಮನೆಯಲ್ಲಿದ್ದರೂ ಪರವಾಗಿಲ್ಲ. ಎಲ್ಲರನ್ನು ಸೇರುವ ಮನಸ್ಸಿರಬೇಕು. ಬೆಳಕಿನ ಬೆಲೆ ಕತ್ತಲಲ್ಲಿ ತಿಳಿಯಲು ಸಾಧ್ಯ. ಸತ್ಯವಂತರ ಧರ್ಮವಂತರ ನಿಲುವು ತಿಳಿಯುವುದು ಕಷ್ಟ ಕಾಲದಲ್ಲಿ ಎಂಬುದನ್ನು ಮರೆಯಬಾರದು. ವಿಧಿಯ ಮುಂದೆ ದುಡ್ಡು ದೊಡ್ಡಸ್ತಿಕೆ ಏನೂ ನಡೆಯುವುದಿಲ್ಲ. ಹಣೆ ಬರಹ ಮೀರಿ ನಡೆಯಲಾಗದು. ದೇವರು ಏನೆಲ್ಲವನ್ನು ಕೊಟ್ಟಿದ್ದರೂ ಅದು ನಮ್ಮದಲ್ಲ. ಜೀವನದಲ್ಲಿ ಶಾಶ್ವತವಾಗಿರುವುದು ಯಾವುದೂ ಇಲ್ಲ. ಬದುಕಿರುವಷ್ಟು ದಿನ ಭಗವಂತನಲ್ಲಿ ಭಕ್ತಿ ಶ್ರದ್ಧೆಯಿಂದ ಬಾಳಿ ಬದುಕು ಕಟ್ಟಿಕೊಳ್ಳಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಬೋಧಿಸಿದ್ದಾರೆ ಎಂದರು.

ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆಯ ಗೌರವಾಧ್ಯಕ್ಷ ಎಡೆಯೂರು ರೇಣುಕ ಶಿವಾಚಾರ್ಯ ಸ್ವಾಮಿಗಳು, ನೇತೃತ್ವ ವಹಿಸಿದ್ದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಮಳಲಿ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಬೇರುಗಂಡಿ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು, ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಶಿರಕೋಳ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯ ಸ್ವಾಮಿಗಳು, ಶಾಂತಾಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ತೆಂಡೆಕೆರೆ ಗಂಗಾಧರ ಶಿವಾಚಾರ್ಯ ಸ್ವಾಮಿಗಳು, ಅಮ್ಮಿನಬಾವಿಯ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಕಾರ ಸದಾಶಿವ ಶಿವಾಚಾರ್ಯ ಸ್ವಾಮಿಗಳು, ಶಾಂತಪುರ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು ಉಪಸ್ಥಿತರಿದ್ದರು.
ಬೆಳಿಗ್ಗೆ ಧ್ವಜಾರೋಹಣ ಹರಿದ್ರಾಲೇಪನ ನಡೆದ ನಂತರ ಶ್ರೀ ವೀರಭದ್ರಸ್ವಾಮಿ ವಿಜಯೋತ್ಸವ-ಗುಗ್ಗುಳ ಮಹೋತ್ಸವ ಹೂಲಿಯ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವದಲ್ಲಿ ಬಸವರಾಜ ನ್ಯಾಮತಿ ಇವರ ಉಸ್ತುವಾರಿಯಲ್ಲಿ ನಡೆಯಿತು. ದಾವಣಗೆರೆ ಶುಭಾ ಈಶ್ವರಪ್ಪ ಶೆಟ್ಟರು ಮತ್ತು ಮಕ್ಕಳು, ಲಲಿತ ಶಿವಯೋಗಿ ಮತ್ತು ಮಕ್ಕಳು ಹಾಗೂ ಹರಿಹರದ ಮಲ್ಲಮ್ಮ ಪ್ರಭುಸ್ವಾಮಿ ಮತ್ತು ಮಕ್ಕಳು ಗುಗ್ಗುಳ ಸೇವೆ ನೆರವೇರಿಸಿದರು.
ಶ್ರೀ ಪೀಠದ ಎಲ್ಲ ದೈವಗಳಿಗೆ ಹೂವಿನ ಅಲಂಕಾರ ಸೇವೆಯನ್ನು ಭದ್ರಾವತಿಯ ಎಸ್.ಎಸ್. ಉಮೇಶ್ ನೆರವೇರಿಸಿದರು.