ಕೃಷಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಒದಗಿಸುವಂತೆ ಆಗ್ರಹಿಸಿ ಹೊಸನಗರದಲ್ಲಿ ರೈತ ಸಂಘದಿಂದ ಪ್ರತಿಭಟನಾ ಧರಣಿ

0 522

ಹೊಸನಗರ : ಗುಣಮಟ್ಟದ ವಿದ್ಯುತ್ ಪೂರೈಸುವಲ್ಲಿ ವಿಫಲವಾಗಿದ್ದು ರೈತಾಪಿವರ್ಗ ಸಮಸ್ಯೆಗೆ ಸಿಲುಕಿದ್ದಾರೆ ಎಂದು ತಾಲೂಕು ರೈತ ಸಂಘದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ತಾಲ್ಲೂಕು ಕಛೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿ, ಮಲೆನಾಡಿನ ನಡುಮನೆ ಎನಿಸಿರುವ ಹೊಸನಗರ ತಾಲೂಕು ಈ ವರ್ಷ ಮಳೆ ಕೊರತೆ ಅನುಭವಿಸುತ್ತಿದೆ. ಸರ್ಕಾರ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ. ಆದರೆ ರೈತಾಪಿ ವರ್ಗದ ಸಂಕಷ್ಟ ಪರಿಹರಿಸುವ ಪ್ರಯತ್ನ ಮಾತ್ರ ಆಗುತ್ತಿಲ್ಲ ಎಂದು ಆರೋಪಿಸಿದರು.

ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಅನಧಿಕೃತ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ದುರಸ್ತಿ ನಿರ್ವಹಣೆ ಕಾಮಗಾರಿ ನೆಪದಲ್ಲಿ ವಾರದಲ್ಲಿ ಒಂದೆರಡು ದಿನ ದಿನವಿಡೀ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಸರಬರಾಜು ಇರುವ ಸಮಯದಲ್ಲಿಯೂ ಗುಣಮಟ್ಟವಿಲ್ಲದಂತಾಗಿದೆ. ವೋಲ್ಟೇಜ್‌ ಕೊರತೆಯಿಂದ ಕೃಷಿ ಪಂಪ್‌ಗಳು ಸುಟ್ಟು ಹೋಗಿವೆ. ರೈತರು ಕಷ್ಟ ಪಟ್ಟು ಬೆಳೆದ ತೋಟಗಳನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಿ ಪರಿಣಮಿಸಿದೆ.

ನೀರಿನ ಕೊರತೆಯ ಜೊತೆಗೆ ಇರುವುದನ್ನು ಹಾಗೋ ಹೀಗೋ ನಿರ್ವಹಿಸಲು ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಉಂಟಾಗಿರುವ ವಿದ್ಯುತ ಸಮಸ್ಯೆ ಅಡ್ಡಿಯಾಗಿದೆ ಎಂದು ದೂರಿದರು.

ರೈತರ ಹಿತಕಾಯುವಲ್ಲಿ ಸರ್ಕಾರಗಳು ವಿಫಲವಾಗಿವೆ. ರೈತರಿಗೆ ಮಾರಕವಾಗಿರುವ ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು. ದಿನಕ್ಕೆ ಕನಿಷ್ಟ 7 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ನೀಡಬೇಕು. ಬರ ಪರಿಹಾರ ಬಿಡುಗಡೆಗೆ ತ್ವರಿತ ಕ್ರಮ ಕೈಗೊಳ್ಳುವುದು ಸೇರಿದಂತೆ ರೈತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಗಳು ಮುಂದಾಗಬೇಕೆಂದು ಆಗ್ರಹಿಸಿದರು.

ಇದಕ್ಕೂ ಮುನ್ನ ಪಟ್ಟಣದ ಹೊರವಲಯದ ಮಾವಿನಕೊಪ್ಪದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಸರ್ಕಾರ ಹಾಗೂ ಇಲಾಖೆಯ ಅಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ರೈತ ಸಂಘ ಕರೆ ಕೊಟ್ಟಿದ್ದ ಪ್ರತಿಭಟನೆಯಲ್ಲಿ ಹರಿದ್ರಾವತಿ, ಅಲಗೇರಿಮಂಡ್ರಿ, ಬಟ್ಟೆಮಲ್ಲಪ್ಪ, ಮಾರುತಿಪುರ, ಹರತಾಳು ಮೊದಲಾದ ಗ್ರಾಮಗಳ ನಾಗರಿಕರು, ವಿವಿಧ ಸಂಘಟನೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಹರಿದ್ರಾವತಿ ಗ್ರಾಮ ಪಂಚಾಯಿತಿ ಸದಸ್ಯ ವಾಟಗೋಡು ಸುರೇಶ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷ ಎಂ.ಮಂಜಪ್ಪ, ಪದಾಧಿಕಾರಿಗಳಾದ ಗುರುಪಾದಪ್ಪಗೌಡ, ರಾಚಪ್ಪಗೌಡ, ಗುರುಶಾಂತ, ರಾಜಶೇಖರ ತುಪ್ಪ, ತಾಲೂಕು ಘಟಕದ ಅಧ್ಯಕ್ಷ ಜಿ.ವಿ.ರವೀಂದ್ರ, ಪ್ರಧಾನ ಕಾರ್ಯದರ್ಶಿ ಸುಗಂಧರಾಜು ಮತ್ತಿತರರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!