ಮೈ ಮರೆತರೆ 2029ಕ್ಕೂ ವಿಧಾನಸಭಾ ಕ್ಷೇತ್ರ ಸಿಗುವುದಿಲ್ಲ

0 661

ಹೊಸನಗರ : ಹೊಸನಗರ ವಿಧಾನಸಭಾ ಕ್ಷೇತ್ರ ಹೋರಾಟವನ್ನು ಜಡ್ಡು ಗಟ್ಟಲು ಬಿಡಬಾರದು. ಒಂದು ವೇಳೆ ನಾವು ಮೈ ಮರೆತರೆ 2029ಕ್ಕೂ ನಮ್ಮ ಕ್ಷೇತ್ರವನ್ನು ನಾವು ಮರಳಿ ಪಡೆಯುವುದು ಕಷ್ಟವಾಗುತ್ತದೆ ಎಂದು ಹೆದ್ದಾರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನಂತಿ ರಾಘವೇಂದ್ರ ಹೇಳಿದರು.

ವಿಧಾನಸಭಾ ಕ್ಷೇತ್ರ ಹೋರಾಟದ ನಡಿಗೆ ಗ್ರಾಮ ಪಂಚಾಯಿತಿಗಳ ಕಡೆಗೆ ಎರಡನೇ ದಿನದ ರಥ ಯಾತ್ರೆಯನ್ನು ಪಂಚಾಯಿತಿ ಆವರಣದಲ್ಲಿ ಸ್ವಾಗತಿಸಿ ಮಾತನಾಡಿದ ಅವರು, ಹೊಸನಗರ ವಿಧಾನಸಭಾ ಕ್ಷೇತ್ರವನ್ನು ನಮ್ಮ ಕಾಲದಲ್ಲೇ ನಾವು ಮರಳಿ ಪಡೆಯಬೇಕು. ಇಲ್ಲದೇ ಹೋದಲ್ಲಿ ನಮ್ಮ ಮಕ್ಕಳನ್ನು ಹಾಗೂ ನಮ್ಮ ಮುಂದಿನ ತಲೆಮಾರನ್ನು ಅನಾಥ ಮಾಡಿ ಹೋದಂತೆ ಎಂದರು.

ಈಗ ನಾವು ಎರಡು ಕ್ಷೇತ್ರಗಳಿಗೆ ಹಂಚಿ ಹೋಗಿದ್ದೇವೆ. ಇದರಿಂದ ನಾವು ಬಹಳಷ್ಟುನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಸಾಧನೆ, ಕಾರ್ಯ, ಕಲೆ, ಸಾಹಿತ್ಯ, ಉದ್ಯಮ, ಕೃಷಿ ಯಾವುದನ್ನೂ ಎತ್ತರಕ್ಕೆ ಕೊಂಡೊಯ್ಯುವ ಗಟ್ಟಿ ನೇತಾರರನ್ನು ಹುಟ್ಟು ಹಾಕುವಲ್ಲಿ ನಾವು ಸೋಲುತ್ತಿದ್ದೇವೆ. ಇದರಿಂದ ನಮ್ಮ ಮುಂದಿನ ತಲೆಮಾರಿಗೆ ನಿಜಕ್ಕೂ ಶೂನ್ಯ ಉಳಿಸಿದಂತೆ ಎಂದು ಅವರು ವಿಷಾಧಿಸಿದರು.

ಗ್ರಾಮ ಪಂಚಾಯಿಗಳು ನಮ್ಮ ಕ್ಷೇತ್ರದ ಮೂಲಕ ನಮ್ಮ ಹಕ್ಕು ಮರಳಿ ಪಡೆಯುವುದಕ್ಕೆ ಏನು ಬೇಕೋ ಅದೆಲ್ಲವನ್ನು ಮಾಡಲು ನಾವು ಸಿದ್ದರಿದ್ದೇವೆ ಎಂದು ಸದಸ್ಯ ಪ್ರವೀಣ್ ಹೇಳಿದರು.

ತಾಲ್ಲೂಕು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳ ಒಕ್ಕೂಟದ ಈ ಹೋರಾಟವನ್ನು ನಾವೆಲ್ಲ ಒಕ್ಕೊರಲಿನಿಂದ ಸ್ವಾಗತಿಸುತ್ತೇವೆ. ಮುಂದಿನ ಎಲ್ಲಾ ಹೋರಾಟಗಳಿಗೂ ಭಾಗಿಯಾಗಿ ಕ್ಷೇತ್ರ ಮರಳಿ ಪಡೆಯುತ್ತೇವೆ ಎಂದು ಪ್ರವೀಣ್ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ್ ಶೆಟ್ಟಿ, ಸದಸ್ಯರಾದ ವಿಶುಕುಮಾರ್, ಚಂದಪ್ಪ ಗೌಡ, ಸಾವಿತ್ರಮ್ಮ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ಶಿವರಾಮ್ ಮೊದಲದವರು ಉಪಸ್ಥಿತರಿದ್ದರು.

ರಥ ಯಾತ್ರೆಯ ಸಂಚಾಲಕ ಮಂಜುನಾಥ್ ಎಸ್.ಬ್ಯಾಣದ ಯಾತ್ರೆಯ ಅಗತ್ಯದ ಬಗ್ಗೆ ಮಾಹಿತಿ ನೀಡಿದರು. ಇಕ್ಬಾಲ್ ಅಹ್ಮದ್, ಹರೀಶ್ ನೂಲಿಗೆರೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಇಂದು ಬಾಳೂರು, ಹೆದ್ದಾರಿಪುರ, ಅಮೃತ (ಗರ್ತಿಕೆರೆ), ಹುಂಚ, ಚಿಕ್ಕಜೇನಿ, ಕೋಡೂರು, ತ್ರಿಣಿವೆ, ಸೊನಲೆ ಗ್ರಾಮ ಪಂಚಾಯಿತಿಗಳಿಗೆ ಯಾತ್ರೆ ಸಾಗಿತು.

Leave A Reply

Your email address will not be published.

error: Content is protected !!