ಹೊಸನಗರ ; ಮಕ್ಕಳು ಮತ್ತು ಶಿಕ್ಷಕರು ಜೊತೆಯಾಗಿ ಪೋಷಕರನ್ನು ಹಾಗೂ ಸಮುದಾಯದ ಸದಸ್ಯರನ್ನು ಪರಸ್ಪರ ಭೇಟಿಯಾಗಲು ಅವರನ್ನು ಸಂತಸದಾಯಕ ವಾತಾವರಣದ ಕಡೆಗೆ ಸ್ವಾಗತಿಸಲು ಮತ್ತು ಕಲಿಕೆಯ ಅವಕಾಶವನ್ನು ಸಮುದಾಯದೊಂದಿಗೆ ವಿಸ್ತರಿಸಲು ಹೊಸನಗರ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಆಧಾರಿತ ‘ಕಲಿಕಾ ಹಬ್ಬ’ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆಯಲ್ಲಿ ಇಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ರೇಷ್ಮಾ ಅಧ್ಯಕ್ಷತೆಯಲ್ಲಿ ನೆರವೇರಿತು.
ಈ ಸಮಾರಂಭದಲ್ಲಿ ಶಾಲಾ ಮುಖ್ಯ ಉಪಾಧ್ಯಾಯಿನಿ ಲಿಲ್ಲಿ ಡಿಸೋಜಾ, ದೈಹಿಕ ಶಿಕ್ಷಣ ಪರಿವೀಕ್ಷಕ ಕರ್ಕಿ ವಿನಯ್ ಹೆಗ್ಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎಸ್ ಸುರೇಶ್, ಸಿ.ಆರ್.ಪಿ ವಾಣಿಶ್ರೀ, ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟ ಪೂರ್ವ ಅಧ್ಯಕ್ಷ ಬಸವಣ್ಣಪ್ಪ, ಹರೀಶ್, ಗಣೇಶ್, ದೇವೇಂದ್ರಪ್ಪ, ಪ್ರದೀಪ್, ಹೇಮಾವತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಮಕ್ಕಳಲ್ಲಿನ ಸುಪ್ತ ಪ್ರತಿಭೆ ಅನಾವರಣಗೊಳ್ಳಲು ಇಲಾಖೆ ಮುಕ್ತ ವೇದಿಕೆ ನಿರ್ಮಿಸಿರುವುದು ಸ್ವಾಗತಾರ್ಹಯೆಂದರು.
ಈ ಕಲಿಕಾ ಹಬ್ಬದಲ್ಲಿ ಭಾಗವಹಿಸಲು ಸರ್ಕಾರಿ ಶಾಲೆಗಳಿಗೆ ಮಾತ್ರ ಅವಕಾಶವಿದ್ದು ಈ ಕ್ಲಸ್ಟರ್ನ ಒಂದರಿಂದ 5ನೇ ತರಗತಿಯ 10 ಶಾಲೆಗಳ ಆಯ್ದ 110 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಕಲಿಕಾ ಹಬ್ಬದಲ್ಲಿ ಗಟ್ಟಿ ಓದು, ಕಥೆ ಹೇಳುವುದು, ಕೈಬರಹ ಮತ್ತು ಕ್ಯಾಲಿಗ್ರಫಿ, ಸಂತೋಷದಾಯಕ ಗಣಿತ, ರಸಪ್ರಶ್ನೆ, ಮೆಮೊರಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.
ಶಾಲಾ ಶಿಕ್ಷಕರುಗಳು, ಎಸ್ಡಿಎಂಸಿ ಪದಾಧಿಕಾರಿಗಳು, ಅಕ್ಷರ ದಾಸೋಹ ಸಿಬ್ಬಂದಿಗಳು, ಸಮೂಹ ಸಂಪನ್ಮೂಲ ವ್ಯಕ್ತಿಗಳು ಪೋಷಕರುಗಳು ಕಲಿಕಾ ಹಬ್ಬದಲ್ಲಿ ಪಾಲ್ಗೊಂಡಿದ್ದರು.
ಕು. ಮೌಲ್ಯ ಮತ್ತು ಸಂಗಡಿಗರು. ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಲಿಲ್ಲಿ ಡಿಸೋಜಾ ಸ್ವಾಗತಿಸಿದರು. ಸಿ.ಆರ್.ಪಿ. ಮಂಜಪ್ಪ ಕಾರ್ಯಕ್ರಮ ನಿರೂಪಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.