ಶಿವಮೊಗ್ಗ: ರೈಲು ಪ್ರಯಾಣದ ವೇಳೆ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸದೆ ಸೇವಾ ಲೋಪವೆಸಗಿದ ನೈಋತ್ಯ ರೈಲ್ವೆ ಇಲಾಖೆಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡದ ಜೊತೆಗೆ ಟಿಕೆಟ್ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸುವಂತೆ ಮಹತ್ವದ ಆದೇಶ ನೀಡಿದೆ.
ಘಟನೆಯ ಹಿನ್ನೆಲೆ
ಶಿವಮೊಗ್ಗದ ಬಸವನಗುಡಿ ನಿವಾಸಿ ನಾಗೇಂದ್ರ ಅವರು ತಮ್ಮ ಕುಟುಂಬದ 24 ಸದಸ್ಯರೊಂದಿಗೆ ತಿರುಪತಿ ಪ್ರವಾಸ ಮುಗಿಸಿ, ಬೆಂಗಳೂರಿನ ಯಶವಂತಪುರದಿಂದ ಶಿವಮೊಗ್ಗಕ್ಕೆ ತೆರಳಲು ರೈಲು ಸಂಖ್ಯೆ 6675ರಲ್ಲಿ ಸಾಮಾನ್ಯ ದರ್ಜೆಯ ಟಿಕೆಟ್ (ರೂ. 1,000) ಪಡೆದು ಪ್ರಯಾಣಿಸುತ್ತಿದ್ದರು.
ನೀರಿನ ಕೊರತೆ & ಸಮಸ್ಯೆ:
ರೈಲು ಹೊರಟ ನಂತರ ಶೌಚಾಲಯಗಳಲ್ಲಿ ನೀರಿನ ಸೌಲಭ್ಯವೇ ಇರಲಿಲ್ಲ. ಈ ವಿಚಾರವಾಗಿ ಪ್ರಯಾಣಿಕರು ತುಮಕೂರು ರೈಲು ನಿಲ್ದಾಣದ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪರಿಹಾರ ಸಿಗಲಿಲ್ಲ.
ಹೆಚ್ಚುವರಿ ಖರ್ಚು:
ನೀರಿನ ಕೊರತೆಯಿಂದ ಕಂಗಾಲಾದ ಪ್ರಯಾಣಿಕರು ತುಮಕೂರಿನಲ್ಲೇ ರೈಲಿನಿಂದ ಕೆಳಗಿಳಿದು, ಬೇರೊಂದು ಎಕ್ಸ್‌ಪ್ರೆಸ್ ರೈಲಿನಲ್ಲಿ ಹೆಚ್ಚುವರಿಯಾಗಿ ರೂ. 1,760 ಪಾವತಿಸಿ ಪ್ರಯಾಣ ಮುಂದುವರಿಸಬೇಕಾಯಿತು.
ದೂರು:
ಸೇವಾ ನ್ಯೂನ್ಯತೆ ಬಗ್ಗೆ ರೈಲ್ವೆ ಇಲಾಖೆಗೆ ನೋಟಿಸ್ ನೀಡಿದರೂ ಸೂಕ್ತ ಸ್ಪಂದನೆ ಸಿಗದ ಕಾರಣ, ಸಂತ್ರಸ್ತ ಪ್ರಯಾಣಿಕರು ಅಂತಿಮವಾಗಿ ಜಿಲ್ಲಾ ಗ್ರಾಹಕ ಆಯೋಗದ ಮೊರೆ ಹೋದರು.
ಗ್ರಾಹಕರ ಆಯೋಗ ನೀಡಿದ ಪ್ರಮುಖ ಆದೇಶಗಳು
ಉಭಯ ಕಡೆಯ ವಾದ-ವಿವಾದಗಳನ್ನು ಆಲಿಸಿದ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರ ಪೀಠವು ರೈಲ್ವೆ ಇಲಾಖೆಯ ಸೇವಾ ಲೋಪವನ್ನು ಎತ್ತಿಹಿಡಿದು ಈ ಕೆಳಗಿನಂತೆ ಆದೇಶ ಹೊರಡಿಸಿದೆ.
ಟಿಕೆಟ್ ಮೊತ್ತ ಮರುಪಾವತಿ:
ಟಿಕೆಟ್ ಮೊತ್ತವಾದ ರೂ. 1,000/- ಕ್ಕೆ 2025ರ ಏಪ್ರಿಲ್ 15ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 6 ರ ಬಡ್ಡಿ ಸೇರಿಸಿ 45 ದಿನಗಳ ಒಳಗೆ ದೂರುದಾರರಿಗೆ ಮರಳಿಸಬೇಕು.
ಪರಿಹಾರ ಧನ:
ಪ್ರಯಾಣಿಕರಿಗೆ ಉಂಟಾದ ಮಾನಸಿಕ ತೊಂದರೆ ಮತ್ತು ಅಸೌಕರ್ಯಕ್ಕೆ ಪರಿಹಾರವಾಗಿ ರೂ. 10,000/- ಪಾವತಿಸಬೇಕು.
ಕೋರ್ಟ್ ಖರ್ಚು:
ಕಾನೂನು ಹೋರಾಟದ ವೆಚ್ಚವಾಗಿ ರೂ. 5,000/- ಗಳನ್ನು ರೈಲ್ವೆ ಇಲಾಖೆ ಭರಿಸಬೇಕು.
ವಿಳಂಬಕ್ಕೆ ದಂಡ:
ನಿಗದಿತ 45 ದಿನಗಳ ಅವಧಿಯೊಳಗೆ ಹಣ ಪಾವತಿಸಲು ವಿಫಲವಾದರೆ, ಒಟ್ಟು ಮೊತ್ತಕ್ಕೆ ವಾರ್ಷಿಕ ಶೇ. 10ರ ದರದಲ್ಲಿ ಬಡ್ಡಿ ಲೆಕ್ಕ ಹಾಕಿ ಪಾವತಿಸಬೇಕಾಗುತ್ತದೆ ಎಂದು ಆಯೋಗವು ಸ್ಪಷ್ಟಪಡಿಸಿದೆ.

