ಹೊಸನಗರ ; ಶಿವಮೊಗ್ಗ ಜಿಲ್ಲೆಯಲ್ಲಿಯೇ ಹೆಚ್ಚು ಮಳೆಯಾಗುವ ಪ್ರದೇಶ ಹೊಸನಗರ ತಾಲ್ಲೂಕಾಗಿದ್ದು ಶಿವಮೊಗ್ಗ ಜಿಲ್ಲೆಯಲ್ಲಿಯೇ ಅಪಾರ ಪ್ರಮಾಣದ ಬೆಳೆ ನಷ್ಟವಾಗಿರುವುದು ಹೊಸನಗರ ತಾಲ್ಲೂಕಿನ ನಗರ ಹೋಬಳಿ ಭಾಗದಲ್ಲಿಯಾಗಿದ್ದರೂ ಬೆಳೆ ವಿಮೆಯಲ್ಲಿ ತಾರತಮ್ಯ ನೀತಿ ಅನುಸರಿಸಿರುವುದು ಸರಿಯಲ್ಲ. ಅವೈಜ್ಞಾನಿಕ ಬೆಳೆ ವಿಮೆಯನ್ನು ತಕ್ಷಣ ಸರಿಪಡಿಸಿ ರೈತರಿಗೆ ಹೆಚ್ಚಿನ ಬೆಳೆ ವಿಮೆ ನೀಡಬೇಕೆಂದು ಮಲೆನಾಡು ಅಡಿಕೆ ಮಾರಾಟ ಸಹಕಾರಿ ಸಂಘ ನಿ. ಶಿವಮೊಗ್ಗ (ಮಾಮ್ಕೋಸ್) ನಿರ್ದೇಶಕ ಕೆ.ವಿ ಕೃಷ್ಣಮೂರ್ತಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅವರು ಹೊಸನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿಯೇ ಹೆಚ್ಚು ಮಳೆಯಾಗುವ ಪ್ರದೇಶ ಹೊಸನಗರ ತಾಲ್ಲೂಕಾಗಿದೆ. ಅದರಲ್ಲಿಯೂ ನಗರ ಹೋಬಳಿಯ ಮತ್ತಿಮನೆ, ಸಂಪೆಕಟ್ಟೆ, ನಿಟ್ಟೂರು, ನಾಗೋಡಿ, ಅರಮನೆಕೊಪ್ಪ ಪ್ರದೇಶದಲ್ಲಿ ಎಲ್ಲಾ ಹೋಬಳಿಗಿಂತ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ ಈ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಅಡಿಕೆ ಬೆಳೆ ಹಾನಿಯಾಗಿದ್ದು ಇದರ ಜೊತೆಗೆ ಎಲೆಚುಕ್ಕಿ ರೋಗದಿಂದ ರೈತರು ಕಂಗಲಾಗಿದ್ದಾರೆ ಆದರೂ ಸರ್ಕಾರ ಬೆಳೆವಿಮೆಯಲ್ಲಿ ಕೆಲವು ತಾಲ್ಲೂಕುಗಳಿಗೆ ಒಂದೊಂದು ರೀತಿಯಲ್ಲಿ ಬೆಳೆವಿಮೆ ಘೋಷಿಸಿದ್ದು ಕರಿಮನೆ ಗ್ರಾಮದಲ್ಲಿ ಹೆಕ್ಟೆರ್ಗೆ ₹ 89 ಸಾವಿರ ಬೆಳೆ ವಿಮೆ ಪರಿಹಾರ ಘೋಷಿಸಿದ್ದು ಅದೇ ಪಕ್ಕದಲ್ಲಿರುವ ಗ್ರಾಮಗಳಿಗೆ ನಿಟ್ಟೂರು, ಅರಮನೆಕೊಪ್ಪ, ನಗರ ಗ್ರಾಮ ವ್ಯಾಪ್ತಿಯಲ್ಲಿ ಕೇವಲ ₹ 33 ಸಾವಿರ, ₹ 27 ಸಾವಿರ, ₹ 23 ಸಾವಿರ ಬೆಳೆ ವಿಮೆ ಹೆಕ್ಟೇರ್ ಘೋಷಿಸಿರುವುದು ಸರಿಯಾದ ಕ್ರಮವಲ್ಲ. ಹೊಸನಗರ ತಾಲ್ಲೂಕನ್ನು ಕಡೆಗಣಿಸಿ ಅಲ್ಪ ಪ್ರಮಾಣದ ಪರಿಹಾರ ಘೋಷಿಸಿದ್ದಾರೆ ಇದು ಸರಿಯಾದ ರೀತಿಯಲ್ಲಿ ಬೆಳೆ ವಿಮೆ ಮಾಡದೆ ಅವೈಜ್ಞಾನಿಕವಾಗಿ ಮಾಡಿದ್ದಾರೆ ಎಂದು ಆಪಾದಿಸಿದರು.

ಮಳೆ ಮಾಪನವಿಲ್ಲ !
ಹೊಸನಗರ ತಾಲ್ಲೂಕಿನಲ್ಲಿ 30 ಗ್ರಾಮ ಪಂಚಾಯತಿಗಳಿವೆ. ಆದರೆ ಕೆಲವು ಗ್ರಾಮ ಪಂಚಾಯತಿಯಲ್ಲಿರುವ ಮಳೆಯ ಮಾಪನ ಸರಿಯಿಲ್ಲ. ಅದು ಅಲ್ಲದೇ ನಗರ ಹೋಬಳಿಯಲ್ಲಿ ಕೆಲವು ಗ್ರಾಮ ಪಂಚಾಯತಿಯಲ್ಲಿ ಮಳೆಯ ಮಾಪನವೇ ಇಲ್ಲದೇ ಬೆಳೆ ವಿಮೆ ಹೇಗೆ ಘೋಷಸಿದರು? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದು, ಎಲ್ಲಾ ತಾಲ್ಲೂಕಿಗಿಂತ ಹೆಚ್ಚು ಬೆಳೆ ವಿಮೆ ಪರಿಹಾರ ಹೊಸನಗರ ತಾಲ್ಲೂಕಿಗೆ ನೀಡಬೇಕು. ಅದರಲ್ಲಿಯೂ ನಗರ ಹೋಬಳಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ವಿಮೆ ನೀಡಬೇಕು ಈ ಭಾಗದ ಅಡಿಕೆ ಬೆಳೆಗಾರರನ್ನು ಉಳಿಸಬೇಕು. ಈಗ ಆಗಿರುವ ಅವೈಜ್ಞಾನಿಕ ಸಮೀಕ್ಷೆಯನ್ನು ಹಿಂಪಡೆದು ತಕ್ಷಣ ವಿಮೆ ಸಮೀಕ್ಷೆ ನಡೆಸಿ ರೈತರಿಗೆ ಬೆಳೆ ವಿಮೆ ನೀಡಬೇಕು, ಇಲ್ಲವಾದರೇ ಬೆಳೆ ವಿಮೆಗಾಗಿ ಉಗ್ರ ಹೋರಾಟಕ್ಕೂ ಸಿದ್ಧ ಎಂದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





