HOSANAGARA ; ವಿದ್ಯಾರ್ಥಿ ದೆಸೆಯಲ್ಲಿ ಪಠ್ಯದ ಜೊತೆ ಕ್ರೀಡಾಸಕ್ತಿ ವೃದ್ದಿಸಿಕೊಂಡಲ್ಲಿ ಉತ್ತಮ ಕ್ರೀಡಾಪಟುವಾಗಿ ರೂಪುಗೊಳ್ಳಲು ಸತತ ಪರಿಶ್ರಮ ಹಾಕಬೇಕೆಂದು ರಾಷ್ಟ್ರೀಯ ಪ್ರೋ ಕಬ್ಬಡಿ ಕ್ರೀಡಾಪಟು, ಸ್ಥಳೀಯರಾದ ಗಗನ್ ಗೌಡ ತಿಳಿಸಿದರು.
ಇದೇ ಅಕ್ಟೋಬರ್ 18 ಮತ್ತು 19 ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದ 2024-25ನೇ ಸಾಲಿನ 17 ವರ್ಷ ವಯೋಮಿತಿ ಒಳಗಿನ ಬಾಲಕಿಯರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ತಂಡಕ್ಕೆ ಪಟ್ಟಣದ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿರುವ ಐದು ದಿನಗಳ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಯಪಾಲನೆ, ಶಿಸ್ತು, ಸತತ ಪರಿಶ್ರಮದಿಂದ ಮಹತ್ತರ ಸಾಧಿಸಲು ಸಾಧ್ಯವಿದೆ ಎಂದ ಗಗನ್ ಗೌಡ, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ವಿಜೇತರಾಗಿ ಹೆತ್ತವರಿಗೆ, ಓದಿದ ಶಾಲೆ, ನಾಡಿಗೆ ಕೀರ್ತಿ ತರುವಂತೆ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ರಿಪ್ಪನ್‌ಪೇಟೆ ರಾಮಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರಾದ ಹೆಚ್.ಓ.ಶ್ರಾವ್ಯ, ಬಿ.ಆರ್.ಶ್ರೇಯಾ, ವಿ.ಎಸ್.ಐಶ್ವರ್ಯ, ಎನ್.ಸಂಜನ, ಆರ್. ದೀಕ್ಷಾ ಸೇರಿದಂತೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಾಲಚಂದ್ರ ರಾವ್, ರಾಮಕೃಷ್ಣ ವಿದ್ಯಾಸಂಸ್ಥೆ ಮುಖ್ಯಸ್ಥ ದೇವರಾಜ್ ತರಬೇತುದಾರ ವಿನಯ್, ಧನಂಜಯ, ಪತ್ರಕರ್ತ ಶ್ರೀಕಂಠ, ಮನು ಸುರೇಶ್ ಉಪಸ್ಥಿತರಿದ್ದರು.