ಸೇವಾನಿರತ ನೌಕರರ ಮೇಲಿನ ಹಲ್ಲೆಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು : DC ಗುರುದತ್ತ ಹೆಗಡೆ

Written by Koushik G K

Published on:

ಶಿವಮೊಗ್ಗ:ಸರ್ಕಾರಿ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಸೇವೆ ನಿರ್ವಹಿಸುವ ಸಂದರ್ಭದಲ್ಲೇ ಹಲ್ಲೆ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸ್ಪಷ್ಟಪಡಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಂದು ಜಿಲ್ಲಾ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರಿ ನೌಕರರು ಯಾವುದೇ ಭಯ-ಭೀತಿಗಳಿಲ್ಲದೆ, ಪ್ರಾಮಾಣಿಕತೆಯಿಂದ ಜನಸೇವೆ ಮಾಡುವಂತಾಗಬೇಕು. ಅವರನ್ನು ಅಸಮಾಧಾನ ಪಡಿಸುವ, ಅಥವಾ ಹಲ್ಲೆ ನಡೆಸುವ ಪ್ರಕ್ರಿಯೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಸಿದರು.

ಅನಗತ್ಯ ಕಿರುಕುಳ ಗಂಭೀರ ಅಪರಾಧ

ಇತ್ತೀಚಿನ ದಿನಗಳಲ್ಲಿ ಕೆಲವರು RTI ಅರ್ಜಿಗಳ ಮೂಲಕ ಅನಾವಶ್ಯಕ ಬೇಡಿಕೆಗಳನ್ನು ಮುಂದಿರಿಸುವುದು, ಅಧಿಕಾರಿಗಳಿಗೆ ಕಿರಿಕಿರಿ ಉಂಟುಮಾಡುವುದು, ಪತ್ರಿಕೆಗಳಲ್ಲಿ ಆಧಾರರಹಿತ ಆರೋಪ ಮಾಡುವಂತಹ ಘಟನೆಗಳು ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದ ಅವರು, ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದರು.

ವಸತಿಗೃಹ ಸಮಸ್ಯೆಗಳಿಗೆ ಪರಿಹಾರ

ಜಿಲ್ಲೆ ಹಾಗೂ ಪಟ್ಪಣ ಪ್ರದೇಶಗಳಲ್ಲಿ ನೌಕರರ ಬೇಡಿಕೆಗೆ ಅನುಗುಣವಾಗಿ ವಸತಿಗೃಹಗಳ ಕೊರತೆ ಇರುವುದನ್ನು ಅವರು ಒತ್ತಿಹೇಳಿದರು. ಹಲವಾರು ವಸತಿಗೃಹಗಳು ದಶಕಗಳ ಹಿಂದೆ ನಿರ್ಮಾಣಗೊಂಡು ಈಗ ದುರಸ್ಥಿಗೆ ಒಳಪಟ್ಟಿರುವುದರಿಂದ, ಲೋಕೋಪಯೋಗಿ ಇಲಾಖೆಯ ಮೂಲಕ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚನೆ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಆರೋಗ್ಯದ ಭದ್ರತೆಗೆ ‘ಸಂಜೀವಿನಿ ಯೋಜನೆ’

ರಾಜ್ಯ ಸರ್ಕಾರಿ ನೌಕರರಿಗಾಗಿ ಜಾರಿಗೊಂಡಿರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಕುರಿತು ಮಾತನಾಡಿದ ಅವರು, ಈ ಯೋಜನೆಯಿಂದಾಗಿ ಜಿಲ್ಲೆಯ 16,000ಕ್ಕೂ ಹೆಚ್ಚು ನೌಕರರು ಹಾಗೂ ಅವರ ಕುಟುಂಬ ಸದಸ್ಯರು ನಗದು ರಹಿತ ಆರೋಗ್ಯ ಸೌಲಭ್ಯ ಪಡೆಯಲಿದ್ದಾರೆ. ಮಾರಣಾಂತಿಕ ಕಾಯಿಲೆಗಳು, ಶಸ್ತ್ರಚಿಕಿತ್ಸೆ ಸೇರಿದಂತೆ ಬಹುತೇಕ ಕಾಯಿಲೆಗಳಿಗೆ ಉಚಿತ ಚಿಕಿತ್ಸೆಯ ಅನುಕೂಲ ದೊರೆಯಲಿದೆ ಎಂದು ಹೇಳಿದರು.

ಆದರೆ, ಜಿಲ್ಲೆಯ ಅನೇಕ ಆಸ್ಪತ್ರೆಗಳು ಈ ಯೋಜನೆಗೆ ನೋಂದಣಿಯಾಗದೇ ಇರುವುದರಿಂದ, ನಗರದ ಪ್ರಮುಖ ಆಸ್ಪತ್ರೆಗಳೊಂದಿಗೆ ಶೀಘ್ರದಲ್ಲೇ ಚರ್ಚಿಸಿ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು.

ಸಂಘಗಳ ಮನವಿ

ಸಭೆಯಲ್ಲಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್. ಮೋಹನ್ ಕುಮಾರ ಅವರು, ಆಡಳಿತ ವ್ಯವಸ್ಥೆಯ ಬದಲಾವಣೆಗೆ ಅನುಗುಣವಾಗಿ ನೌಕರರೂ ಹೊಂದಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು. ವಿವಿಧ ಯೋಜನೆಗಳ ಬಗ್ಗೆ ನೌಕರರಿಗೆ ಅರಿವು ಮೂಡಿಸಲು ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಬೇಕು ಎಂದು ಅವರು ಮನವಿ ಮಾಡಿದರು.

ಅದೇ ರೀತಿ, ವರ್ಗಾವಣೆಗೊಂಡು ಜಿಲ್ಲೆಗೆ ಬರುವ ನೌಕರರ ಮಕ್ಕಳಿಗೆ ಶಾಲಾ ದಾಖಲಾತಿ ಪಡೆಯುವಲ್ಲಿ ಅಡೆತಡೆ ಎದುರಾಗುತ್ತಿದೆ. ಶಾಲಾ ಆಡಳಿತ ಮಂಡಳಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸುಜಾತಾ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥಸ್ವಾಮಿ, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ, ನೌಕರರ ಸಂಘದ ಪ್ರಮುಖರು ಹಾಗೂ ನಗರದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.dc about service employees

Leave a Comment