ಸ್ವಚ್ಛ ಆಡಳಿತಗಾರ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನದಿಂದ ತುಂಬಲಾರದ ನಷ್ಟ ; ಮಾಜಿ ಶಾಸಕ ಬಿ.ಸ್ವಾಮಿರಾವ್

Written by malnadtimes.com

Published on:

HOSANAGARA ; ವಿಚಾರವಂತ, ಸಭ್ಯ, ಭ್ರಷ್ಟಾಚಾರ ರಹಿತ ಆಡಳಿತಗಾರ ಎಂದೇ ಖ್ಯಾತರಾಗಿದ್ದ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (92) ಅವರ ನಿಧನವು ರಾಜಕೀಯವಾಗಿ ಇಡೀ ದೇಶಕ್ಕೆ ಭಾರೀ ನಷ್ಟ ಉಂಟು ಮಾಡಿದೆ ಎಂದು ಕ್ಷೇತ್ರದ ಮಾಜಿ ಶಾಸಕ ಬಿ. ಸ್ವಾಮಿರಾವ್ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಹಿಂದೆ 90ರ ದಶಕದಲ್ಲಿ ತಾವು ಶಾಸಕರಾಗಿದ್ದ ವೇಳೆ, ಕ್ಷೇತ್ರದ ಅನೇಕ ಜನಪರ ಸಮಸ್ಯೆಗಳ ನಿವಾರಣೆಗೆ ಎಸ್.ಎಂ. ಕೃಷ್ಣ ರಾಜ್ಯದ ಸಚಿವರಾಗಿ ಸೂಕ್ತವಾಗಿ ಸ್ಪಂದಿಸಿದ್ದರು. 60ರ ದಶಕದಲ್ಲಿ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದ ಅವರು, ತಮ್ಮ ವಿಶಿಷ್ಟ ಬುದ್ದಿಮತ್ಯೆ ಮೂಲಕ ರಾಜಕಾರಣದಲ್ಲಿ ಶಾಸಕ, ಸಚಿವ, ರಾಜ್ಯಪಾಲ, ವಿದೇಶಾಂಗ ಸಚಿವ ಹಾಗೂ ಮುಖ್ಯಮಂತ್ರಿ ಗದ್ದುಗೆ ಏರಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರು. ರಾಜಕಾರಣದ ಎಲ್ಲಾ ವಿಧದ ಹುದ್ದೆಗಳನ್ನು ಅಲಂಕರಿಸಿದ ಅವರೋರ್ವ ರಾಜಕೀಯ ಸವ್ಯಸಾಚಿ ಎಂದರೆ ತಪ್ಪಾಗಲಾರದು. ರಾಜ್ಯದ ಜನರ ನೋವು ನಲಿವುಗಳ ಅರಿವಿದ್ದ ಅವರು, ಬಡ ಮಕ್ಕಳ ಹಿತ ಕಾಪಾಡಲು ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಡಿಯೂಟ ಕಾರ್ಯಕ್ರಮ ಜಾರಿಗೆ ತರುವ ಮೂಲಕ ಮಕ್ಕಳ ಹಸಿವು ನೀಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸರ್ವ ಶಿಕ್ಷಣ ಅಭಿಯಾನ ಜಾರಿಗೊಳಿಸುವ ಮೂಲಕ ಶಿಕ್ಷಣದ ಸಮಗ್ರ ಅಭಿವೃದ್ದಿ ಕಟಿಬದ್ದರಾದ ಕೃಷ್ಣ, ವಿಕಾಸಸೌಧ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದು ಶ್ಲಾಘನೀಯ ಸಂಗತಿ ಎಂದರು.

ಶಾಸಕರಾಗಿದ್ದಾಗ ರಾಜಕೀಯವಾಗಿ ತಮ್ಮೊಂದಿಗೆ ಸತತ ನಿಕಟ ಸಂಪರ್ಕದಲ್ಲಿದ್ದ ಕೃಷ್ಣ, ಮೂಲತಃ ಮಂಡ್ಯ ಜಿಲ್ಲೆಯವರು. ಆದರೆ, ಅವರ ಪತ್ನಿ ಪ್ರೇಮ ಮಲೆನಾಡು ಭಾಗದ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಗ್ರಾಮದವರು. ಆ ಮೂಲಕ ಕೃಷ್ಣ, ಹಲವು ದಶಕಗಳ ಹಿಂದೆಯೇ, ಈ ಭಾಗದ ಅಳಿಯನಾಗಿ ಬಯಲುಸೀಮೆ ಹಾಗೂ ಮಲೆನಾಡು ಭಾಗಕ್ಕೂ ಕೊಂಡಿ ಬೆಸೆಯುವಲ್ಲಿ ಯಶಸ್ವಿ ಆಗಿದ್ದರು. ಆ ನಂತರವಷ್ಟೇ ಎರಡೂ ಭಾಗದ ಒಕ್ಕಲಿಗ ಕುಟುಂಬಗಳು ಪರಸ್ಪರ ಸಂಪರ್ಕ-ಸಂಬಂಧ ಬೆಸೆಯಲು ಅವರ ಮದುವೆ ನಾಂದಿ ಹಾಡಿತ್ತು ಎಂದರು.

ಜೀವನದ ಸಂಧ್ಯಾ ಕಾಲದಲ್ಲಿ ನನ್ನಂತೆಯೆ, ಸಕ್ರಿಯ ರಾಜಕಾರಣದಿಂದ ದೂರವೇ ಇದ್ದ ಕೃಷ್ಣ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ, ಜನತೆಗೆ ನೀಡಿದ ವಿವಿಧ ಕಾರ್ಯಕ್ರಮಗಳನ್ನು ಮೆಚ್ಚಿ, ಬಿಜೆಪಿ ಪಕ್ಷದ ಪ್ರಭಾವಕ್ಕೆ ಒಳಗಾಗಿ ಕೆಲವು ವರ್ಷಗಳ ಹಿಂದಷ್ಟೇ ಪಕ್ಷ ಸರ‍್ಪಡೆಗೊಂಡಿದ್ದರು. ಅಲ್ಲದೆ, ಈ ಹಿಂದೆ ಅವರು ಮುಖ್ಯಮಂತ್ರಿ ಆಗಿದ್ದಾಗ ವರನ ಡಾ. ರಾಜಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದ ಪ್ರಕರಣವನ್ನು ಅತಿ ಸೂಕ್ಷ್ಮವಾಗಿ ಭೇದಿಸಿ, ರಾಜ್ ಬಿಡುಗಡೆಗೊಳಿಸುವಲ್ಲಿ ಯಶಸ್ವಿ ಆಗಿದ್ದು ಕೃಷ್ಣ ಅವರ ರಾಜಕೀಯ ಬದುಕಿಗೆ ವಿಶೇಷ ಮೆರಗು ನೀಡಿತ್ತು ಎಂದರು.

ಬೆಂಗಳೂರನ್ನು ಐಟಿಬಿಟಿ ಹಬ್ ಮೂಲಕ ಸಿಂಗಾಪೂರ್ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದ ಕೃಷ್ಣ ಅವರ ನಿಧನದಿಂದ, ಕುಟುಂಬವರ್ಗ ಹಾಗೂ ಆಪ್ತೇಷ್ಟರಿಗೆ ಶಾಂತಿ ಮೂಲಕ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

Leave a Comment