ಹೊಸನಗರ ; ಮುಳುಗಡೆ ಸಂತ್ರಸ್ಥ ಹೊಸನಗರ ತಾಲೂಕಿನ ಜನರ ಸಂಕಷ್ಟಗಳಿಗೆ ಪರಿಹಾರ ಕಾಣಲು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆಯೇ ಪರಿಹಾರ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ತಿಳಿಸಿದರು.
ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಕುರಿತು ನಡೆಸುವ ಹೋರಾಟದ ಕುರಿತು ಚರ್ಚೆ ನಡೆಸಲು ಗುರುವಾರ ಇಲ್ಲಿನ ಗಾಯತ್ರಿ ಮಂದಿರದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷೇತ್ರ ರಚನೆಯಿಂದ ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳಲಿವೆ. ಕ್ಷೇತ್ರದ ಪ್ರತಿಯೊಬ್ಬರೂ ನಿಸ್ವಾರ್ಥವಾಗಿ ಹೋರಾಟ ನಡೆಸುವ ಅಗತ್ಯವಿದೆ. ಅಧಿಕಾರಿವರ್ಗವನ್ನು ಗಮನ ಸೆಳೆಯುವ ನಿಟ್ಟಿನಲ್ಲಿ ಹೋರಾಟ ಗಟ್ಟಿಯಾಗಬೇಕಿದೆ. ಯುವ ಜನತೆ, ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡವರು, ಸಮಾಜಸೇವಕರು ಹಾಗೂ ಈ ಭಾಗದ ಪ್ರಮುಖರು ಪಕ್ಷಾತೀತವಾಗಿ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಪ್ರಸ್ತುತ ತೀರ್ಥಹಳ್ಳಿ ಕ್ಷೇತ್ರ ಸುಮಾರು 400 ಕಿ.ಮೀ. ವ್ಯಾಪ್ತಿ ಹೊಂದಿದೆ. ಕ್ಷೇತ್ರ ಪ್ರವಾಸವೇ ಪ್ರಯಾಸದಾಯಕ. ಭೌಗೋಳಿಕವಾಗಿ ಮೇಘಾಲಯ, ಅಸ್ಸಾಂ ಮೊದಲಾದ ರಾಜ್ಯಗಳಲ್ಲಿ ವಿಶೇಷ ಪ್ರಕರಣಗಳಲ್ಲಿ ಭೌಗೋಳಿಕತೆ ಆಧಾರದಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ಕ್ಷೇತ್ರ ಮಾಡಲಾಗಿದೆ. ಇದೂ ಸಹ ಮುಳುಗಡೆ ಸಮಸ್ಯೆ ಪೀಡಿತವಾಗಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರ ಪುನರ್ರಚನೆಗೆ ಕೇಂದ್ರ ಸರಕಾರ ಮುಂದಾಗಬೇಕು ಎಂದರು.

ಮಾಜಿ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಹೋರಾಟ ಮಾಡುವುದು ಮುಖ್ಯವಲ್ಲ, ಅದನ್ನು ಮುಂದುವರೆಸಿಕೊಂಡು ಹೋಗಬೇಕು. ಅದು ಬಿಟ್ಟು ಇಂದು ಸಭೆ ನಡೆಸಿ ಇನ್ನೂ ಎರಡು ವರ್ಷ ಬಿಟ್ಟು ಮತ್ತೆ ಕ್ಷೇತ್ರ ಬೇಕು ಎಂದು ಹೋರಾಟಕ್ಕೆ ಇಳಿದರೆ ಏನೂ ಪ್ರಯೋಜನವಿಲ್ಲ. ಈಗ ಹೊರಟಿದ್ದೀರಿ ಅದನ್ನು ಹೀಗೇಯೇ ಮುಂದುವರೆಸಿಕೊಂಡು ಹೋಗಲು ನಮ್ಮ ಬೆಂಬಲವಿದೆ ಎಂದರು.
ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಡಾ. ಜಿ.ಡಿ.ನಾರಾಯಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ವಿಧಾನಸಭಾ ಕ್ಷೇತ್ರ ರಚನೆಯ ಮಹತ್ವದ ಕುರಿತು ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ, ಪ್ರಮುಖರಾದ ಎನ್.ಆರ್.ದೇವಾನಂದ್, ವರ್ತೇಶ್, ಬಿ.ಜಿ.ಚಂದ್ರಮೌಳಿ, ತಿ.ನಾ. ಶ್ರೀನಿವಾಸ್, ಚಿದಂಬರ, ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಬಿ.ಚಿದಂಬರ್ ಸ್ವಾಗತಿಸಿದರು.
ಶಾಸಕ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ ಸಭೆಗೆ ಆಗಮಿಸಿ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





