ವರ್ಷಗಟ್ಟಲೇ ಪತ್ನಿಯನ್ನ ಗೃಹ ಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡಿದ ಡಾಕ್ಟ್ರು !

Written by malnadtimes.com

Published on:

CHIKKAMAGALURU ; 20 ರೂಪಾಯಿಯಲ್ಲಿ ಆಕೆ ವಾರಪೂರ್ತಿ ಬದುಕಬೇಕು. ಅದು ಮನೆಯಿಂದ ಹೊರಬಾರದಂತೆ. ಮನೆಯಲ್ಲಿ ರೇಷನ್ ಇದ್ರೆ ಅನ್ನ-ಆಹಾರ. ಇಲ್ಲದಿದ್ರೆ ಮನೆಯಲ್ಲಿ ಉಪವಾಸವೇ ಆಕೆಯ ಜೊತೆಗಾರರು. ಅತ್ತೆ-ಗಂಡ ಹೋದಾಗಲೇ ಹೋದ್ರು, ಬಂದಾಗಲೇ ಬಂದ್ರು. ಮನೆಯಿಂದ ಹೋಗುವಾಗ ಮನೆಯಲ್ಲಿ ರೇಷನ್ ಎಲ್ಲಾ ಖಾಲಿ-ಖಾಲಿ. 3-4 ದಿನ ನೀರು ಕುಡಿದುಕೊಂಡೇ ಇರಬೇಕು. ಅದೂ ನೀರಿನ ಸಂಪರ್ಕ ಕಟ್ ಮಾಡಿರದಿದ್ರೆ. ಮನೆ ಕೆಲಸವೆಲ್ಲಾ ಮಾಡಬೇಕು. ಅಡುಗೆ-ಊಟ ಮಾಡುವಂತಿಲ್ಲ. ಒಂದೇ ಚೇರ್. ಅಲ್ಲೇ ಕೂರಬೇಕು. ಮಹಡಿ ಮೇಲೆ ಮಲಗಬೇಕು. ಇದು ಅವಿದ್ಯಾವಂತರ ಕಥೆಯಲ್ಲ. ವೈದ್ಯನೋರ್ವ ತನ್ನ ಪತ್ನಿಗೆ 4 ವರ್ಷದಿಂದ ಮಾಡಿರೋ ಉಪಚಾರ.

WhatsApp Group Join Now
Telegram Group Join Now
Instagram Group Join Now

ಹೌದು, ಚಿಕ್ಕಮಗಳೂರು ನಗರದ ದೋಣಿಕಣ ನಿವಾಸಿಯಾದ 45 ವರ್ಷದ ವಿನುತಾರಾಣಿಯನ್ನ 22 ವರ್ಷದ ಹಿಂದೆ ಡಾ.ರವಿಕುಮಾರ್ ಜೊತೆ ಮದುವೆ ಮಾಡಿಕೊಟ್ಟಿದ್ರು. ಎಂ.ಬಿ.ಬಿ.ಎಸ್. ಓದುತ್ತಿರೋ ಮಗನೂ ಇದ್ದಾನೆ. ಆದ್ರೆ, ನಾಲ್ಕು ವರ್ಷದಿಂದ ಪತ್ನಿಗೆ ಮಾನಸಿಕ ಕಿರುಕುಳ ನೀಡ್ತಿರೋ ಪತಿಯಿಂದ ಈಕೆಗೆ ಗೃಹಬಂಧನಲ್ಲಿಟ್ಟಿದ್ದಾರೆ. ಮನೆಯ ಮೇಲಿನ ಮಹಡಿಯ ರೂಮಿನಲ್ಲೇ ಇರಬೇಕು. ಕೇಳಬರುವಂತಿಲ್ಲ. ಬಂದರೂ ಮನೆ ಕೆಲಸ ಮಾಡಿ ಮತ್ತೆ ಮೇಲೆ ಹೋಗಬೇಕು.

ಕೂರೋಕೆ ಒಂದು ಚೇರ್ ಕೊಟ್ಟಿದ್ದಾರೆ ಅಷ್ಟೆ. ಊಟ ಅವರು ಹಾಕಿದಾಗ. ಹಾಕಿದಷ್ಟು ಅಷ್ಟೆ. ಗಂಡ ಹಾಗೂ ಅತ್ತೆ ಊರಿಗೆ ಹೋದರೆ ಈಕೆಗೆ ಅವರು ಬರುವಷ್ಟು ದಿನ ಗೃಹ ದಿಗ್ಭಂದನ. ಮನೆಯಿಂದ ಆಚೆ ಬರುವಂತಿಲ್ಲ. ಅವರು ಹೋಗುವಾಗ 20 ರೂಪಾಯಿ ಕೊಟ್ಟು ಹೋಗ್ತಾರೆ. ಅವರು ಬರುವಷ್ಟು ದಿನ ಮನೆಯಿಂದ ಹೊರಗೋಗದಂತೆ ಅದೇ 20 ರೂಪಾಯಿಯಲ್ಲಿ ಬದುಕಬೇಕು. 4 ವರ್ಷದಿಂದ ಅನ್ನ-ಆಹಾರ ನೀಡದೆ ಗೃಹಬಂಧನದಲ್ಲಿಟ್ಟಿದ್ದಾನೆ ಎಂದು ವೈದ್ಯನ ವಿರುದ್ಧ ಗೃಹಿಣಿ ಹಾಗೂ ಆಕೆಯ ಸಹೋದರ ಆರೋಪಿಸಿದ್ದಾರೆ.

ಮನೆಯಲ್ಲೇ ದಿಗ್ಭಂದನ ಹಾಕಿರೋ ಡಾಕ್ಟ್ರು ಈಕೆಗೆ ಮೊಬೈಲ್ ಕೊಟ್ಟಿದ್ದಾರೆ. ಯೂಟ್ಯೂಬ್ ನೋಡೋದು ಬಿಟ್ಟು ಬೇರೇನೂ ಮಾಡಲು ಆಗಲ್ಲ. ದಿನಕ್ಕೆ ಒಂದು ಅಥವ ಎರಡು ಹೊತ್ತು ಊಟ ಕೊಡ್ತಾರೆ. ಅದು ಅವರು ಕೊಟ್ಟಷ್ಟು ಮಾತ್ರ ತಿನ್ನಬೇಕು. ಜಾಸ್ತಿ ಕೇಳಿದರೆ ಹೊಡೆಯೋದು, ತಲೆಯನ್ನ ಗೋಡೆಗೆ ಗುದ್ದೋದು, ಎದೆಗೆ ಕಾಲಲ್ಲಿ ಓದೆಯೋದು ಮಾಡ್ತಾರಂತೆ. ಕುತ್ತಿಗೆ ಹಿಸುಕಿ ಸಾಯಿ-ಸಾಯಿ ಎಂದು ಡಾಕ್ಟ್ರು ಹಾಗೂ ಆತನ ಅಮ್ಮ ಹೊಡೆಯುತ್ತಾರಂತೆ. ಊಟದಲ್ಲಿ ಸ್ಲೋ ಪಾಯಿಜನ್ ಹಾಕಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾರೆ ಎಂದು ವಿನೂತರಾಣಿ ಸಹೋದರ ವಾಗೀಶ್ ಆರೋಪಿಸಿದ್ದಾರೆ.

ಎಂ.ಬಿ.ಬಿ.ಎಸ್. ಓದುತ್ತಿರೋ ಮಗನಿದ್ದು ಆತನಿಗೂ ತಾಯಿಯ ಬಳಿ ಬಿಡೋದಿಲ್ಲ. ಆತ ಕೂಡ ಅಮ್ಮನಿಗೆ ನೀನು ಇನ್ನೂ ಸತ್ತಿಲ್ವಾ, ಯಾವಾಗ ಸಾಯ್ತೀಯಾ. ಅಪ್ಪ ನನಗೆ ಓದಿಸುತ್ತೆ ಅಪ್ಪ ಹೇಳಿದ ಹಾಗೆ ಮಾಡು. ಅಪ್ಪ ಕೊಡೋ ಊಟ ತಿನ್ನು ಅಂತಾನಂತೆ. ನಾಲ್ಕು ವರ್ಷದಿಂದ ಅನ್ನ-ಆಹಾರವಿಲ್ಲದೆ ಗೃಹಬಂಧನದಲ್ಲಿ ನರಳಾಡಿದ ಗೃಹಿಣಿ ಪಕ್ಕದ ಮನೆಯವರಿಂದ ಫೋಟೋ ತೆಗೆಸಿ ತಮ್ಮನಿಗೆ ಕಳಿಸಿ ಇದೀಗ ಆಸ್ಪತ್ರೆ ಸೇರಿದ್ದಾರೆ.

ಆಕೆಯ ತಮ್ಮ ವಾಗೀಶ್ ಪೊಲೀಸರನ್ನ ಕರೆದುಕೊಂಡು ಹೋಗಿ ಅಕ್ಕನನ್ನ ಆಸ್ಪತ್ರೆ ಸೇರಿಸಿ ಅಕ್ಕನ ಸ್ಥಿತಿ ನೋಡಿ ಕಣ್ಣೀರಿಡ್ತಿದ್ದಾನೆ.

22 ವರ್ಷಗಳ ಹಿಂದೆ ಡಾ.ರವಿಕುಮಾರ್, ವಿನುತಾರಾಣಿ ಅವರನ್ನು ವಿವಾಹವಾಗಿದ್ದ. ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರು ಬೇರೆಯಾಗಿದ್ದಾರೆ. ಕಳೆದ 1 ವರ್ಷದ ಹಿಂದೆ ವಿನುತಾರಾಣಿ ಅವರಿಗೆ ಡಾ.ರವಿಕುಮಾರ್ ವಿಚ್ಛೇದನ ನೀಡಿದ್ದಾರೆ.

ವಿನುತಾ ರಾಣಿ ಮೂಲತಃ ಶಿವಮೊಗ್ಗದ ವಿನೋಬಾನಗರದವರು, ಆದರೆ ವಿಚ್ಛೇದನ ನೀಡಿ ಕೂಡಾ ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿದ್ದಾನೆ ಎಂದು ವಿನುತಾ ರಾಣಿ ಅವರ ಮನೆಯವರು ಆರೋಪಿಸಿದ್ದಾರೆ. ಡಾ.ರವಿಕುಮಾರ್ ವಿನುತಾ ರಾಣಿಗೆ ಚಿತ್ರಹಿಂಸೆ ನೀಡಿರುವ ಬಗ್ಗೆಯೂ ದೂರಿನಲ್ಲಿ ತಿಳಿಸಲಾಗಿದೆ.

ಪೊಲೀಸರಿಗೆ ಈ ಸುದ್ದಿ ತಿಳಿಯುತ್ತಿದ್ದಂತೆ ಮಹಿಳೆಯ ಪತಿ ರವಿಕುಮಾರ್ ನಾಪತ್ತೆಯಾಗಿದ್ದಾನೆ. ಮಹಿಳೆಯನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರವಿಕುಮಾರ್ ವೃತ್ತಿಯಲ್ಲಿ ವೈದ್ಯರಾಗಿದ್ದು, ಡಾ. ರವಿಕುಮಾರ್ ಹಾಸನದ ಆಸ್ಪತ್ರೆವೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಪೊಲೀಸರು ಕುಟುಂಬ ಹಾಗೂ ಮಹಿಳೆಯ ಹೇಳಿಕೆ ಆಧಾರದ ಮೇಲೆ ದೂರು ದಾಖಲಿಸಿಕೊಂಡು ನಾಪತ್ತೆಯಾಗಿರುವ ಡಾ.ರವಿಕುಮಾರ್​​​ನ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Leave a Comment