RIPPONPETE ; ಸರ್ಕಾರ ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡುವ ಮೂಲಕ ಕಡ್ಡಾಯ ಶಿಕ್ಷಣ ನೀಡುವುದು ಮತ್ತು ಸಾಕಷ್ಟು ಉಪಯುಕ್ತವಾದಂತಹ ಯೋಜನೆಗಳ ಮೂಲಕ ನಮ್ಮ ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡದಂತೆ ಯೋಜನೆ ರೂಪಿಸಿದೆ. ಇದನ್ನು ಬಳಸಿಕೊಂಡು ಪೋಷಕರು ಶಿಕ್ಷಕ ಸಮೂಹ ಮಕ್ಕಳಗೆ ಶಿಕ್ಷಣ ನೀಡುವಂತೆ ಮಾಡಬೇಕು ಎಂದು ಶಾಸಕ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಪ್ರೌಢಶಾಲಾ ವಿಭಾಗದ 2024-25ನೇ ಸಾಲಿನ ಶಾಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪೋಷಕರು ಆಗಾಗ ಶಾಲೆಗೆ ಭೇಟಿ ನೀಡಿ ತಮ್ಮ ಮಕ್ಕಳ ಕಲಿಕೆ ಗುಣಮಟ್ಟವನ್ನು ವಿಚಾರಿಸುತ್ತಿರಬೇಕು. ಆಗ ಮಕ್ಕಳಲ್ಲಿ ಸಹ ಭಯ ಮೂಡುತ್ತದೆ. ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಒಂದರಿಂದ ಪಿ.ಯು.ಸಿ ವರೆಗೆ ಉಚಿತ ಶಿಕ್ಷಣ, ಸಮವಸ್ತ್ರ, ಪಠ್ಯಪುಸ್ತಕ, ಬಿಸಿಯೂಟ, ಬಾಳೆಹಣ್ಣು, ಚಿಕ್ಕಿ, ರಾಗಿಮಾಲ್ಟ್ ಹೀಗೆ ಹತ್ತು ಹಲವು ಯೋಜನೆಗಳನ್ನು ಅನುಷ್ಟಾನಗೊಳಿಸುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಒತ್ತು ನೀಡಲಾಗಿದ್ದು ಈ ಸೌಲಭ್ಯದ ಸದುಪಯೋಗಪಡೆಯಲು ಕರೆ ನೀಡಿದರು.
ಬರುವ ಶೈಕ್ಷಣಿಕ ವರ್ಷದಲ್ಲಿ ರಿಪ್ಪನ್‌ಪೇಟೆಗೆ ಕೆಪಿಎಸ್‌ಸಿ ಶಾಲೆ ಮಂಜೂರಾತಿಯಾಗಿದ್ದು ಸರ್ಕಾರ 60 ಕೋಟಿ ರೂ. ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನೀಲನಕ್ಷೆ ಸಿದ್ದಗೊಳಿಸಲಾಗಿ ಸರ್ಕಾರ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರೊಂದಿಗೆ ಎಲ್.ಕೆ.ಜಿ.ಯಿಂದ ಪಿ.ಯು.ಸಿ ಒಂದೇ ಸೂರಿನಡಿ ನಡೆಸುವ ಸರ್ಕಾರದ ಯೋಜನೆಯಾಗಿದ್ದು ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಮತ್ತು ಮಾರುತಿಪುರ ಎರಡು ಕಡೆಯಲ್ಲಿ ಪ್ರಾರಂಭಗೊಳ್ಳಲಿದೆ ಎಂದ ಅವರು ಸಾಕಷ್ಟು ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಗೊಂಡಿದರೂ ಕೂಡಾ ನಮ್ಮ ಶಿಕ್ಷಕರು ಇರುವ ವ್ಯವಸ್ಥೆಯಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಮೂಲಕ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಹೊಸನಗರ ತಾಲ್ಲೂಕು ಎರಡನೇ ಸ್ಥಾನದಲ್ಲಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್.ಡಿ.ಎಂ.ಸಿ.ಅಧ್ಯಕ್ಷ ಡಿ.ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುಸ್ಕಾರ ವಿತರಿಸಿದರು.
ಗ್ರಾಮ ಪಂಚಾಯ್ತಿ ಆಧ್ಯಕ್ಷ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ.ಈ.ಮಧುಸೂದನ್, ಎನ್.ಚಂದ್ರೇಶ್, ಆಶೀಫ್‌ಭಾಷಾ, ಕೆರೆಹಳ್ಳಿ ರವೀಂದ್ರ, ಹನೀಫ್ ಭಾಷಾ, ಸಾರಾಭಿ, ವೇದಾವತಿ, ಹೆಚ್.ಎಸ್.ಗಣಪತಿ, ಕೆ.ಪ್ರಕಾಶ ಪಾಲೇರ್, ಟಿ.ಸುಂದರೇಶ್, ಎಸ್.ಡಿ.ಎಂ.ಸಿ. ಸದಸ್ಯರಾದ ಲೀಲಾವತಿ, ಕೃಷ್ಣೋಜಿರಾವ್, ಈಶ್ವರ, ನಿರಂಜನಮೂರ್ತಿ, ಆಶಾ,ಎಂ.ರಫೀಕ್, ಉಷಾ, ಶೇಷಾಚಲ ಇನ್ನಿತರರು ಹಾಜರಿದ್ದರು.
ಉಪಪ್ರಾಚಾರ್ಯ ಕೆಸುವಿನಮನೆ ರತ್ನಾಕರ್ ಸ್ವಾಗತಿಸಿದರು. ಸಹ ಶಿಕ್ಷಕ ಚಂದ್ರಪ್ಪ ನಿರೂಪಿಸಿದರು.