ಮರೆವಿನ ಕಾಯಿಲೆಯ ಬಗ್ಗೆ ನಿರ್ಲಕ್ಷ್ಯ ಬೇಡ ; ಡಾ. ಕಿರಣ್ ಎಸ್.ಕೆ

Written by malnadtimes.com

Published on:

SHIVAMOGGA ; ಅಹಿತಕರ ಘಟನೆಯನ್ನು ಮರೆತು ನೆಮ್ಮದಿಯಿಂದ ಜೀವನ ನೆಡೆಸಲು ಮರೆವು ವರ. ಆದರೆ ಮರೆವು ಹೆಚ್ಚಾದರೆ ಅದು ಅಪಾಯಕಾರಿ ಲಕ್ಷಣ ಎಂದು ಜಿಲ್ಲಾ ಕುಷ್ಠ ರೋಗ ನಿವಾರಣಾಧಿಕಾರಿ ಡಾ. ಕಿರಣ್ ಎಸ್.ಕೆ ಹೇಳಿದರು.

WhatsApp Group Join Now
Telegram Group Join Now
Instagram Group Join Now

ನಗರದ ಗೋಪಾಳದ ‘ಜೀವನ ಸಂಜೆ’ ವೃದ್ಧಾಶ್ರಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೆಗ್ಗಾನ್ ಬೋಧನಾ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಮೆದುಳಿನ ಆರೋಗ್ಯ ಉಪಕ್ರಮ ಕಾರ್ಯಕ್ರಮದಡಿ ಏರ್ಪಡಿಸಲಾಗಿದ್ದ ‘ಜಾಗತಿಕ ಆಲ್ಝೈಮರ್ಸ್ ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

60 ವರ್ಷದ ಬಳಿಕ ಅರಳು ಮರಳು ಸಾಮಾನ್ಯವಾದ ಒಂದು ರೋಗವಾಗಿದೆ. ಈಗಿನ ವೈದ್ಯಕೀಯ ವ್ಯವಸ್ಥೆಯಲ್ಲಿ ಮೆರೆವಿನ ಕಾಯಿಲೆಗೆ ಉತ್ತಮ ಚಿಕಿತ್ಸೆ ಮತ್ತು ಪರಿಹಾರವಿದೆ. ಅದರ ಉಪಯೋಗ ಪಡೆದುಕೊಂಡು ಜೀವನ ಶೈಲಿಯನ್ನು ಉತ್ತಮಗೊಳಿಸಿಕೊಳ್ಳಬೇಕು ಎಂದು ಹೇಳಿದರು.

ಮನೋವೈದ್ಯರಾದ ಡಾ. ಪ್ರಮೋದ್ ಹೆಚ್ ಎಲ್ ಮಾತನಾಡಿ, ಅರಳು ಮರಳು ಎಂಬುದು ಮೆದುಳಿಗೆ ಸಂಬಂಧಪಟ್ಟ ಖಾಯಿಲೆಯಾಗಿದೆ. ಈ ಖಾಯಿಲೆ 60 ವರ್ಷ ಮೇಲ್ಪಟ್ಟ ವಯೋವೃದ್ಧರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಮೆದುಳಿನ ನರಗಳ ಏರುಪೇರಿನ ಸಮಸ್ಯೆಯಿಂದ ಈ ಖಾಯಿಲೆ ಪ್ರಾರಂಭವಾಗುತ್ತದೆ. ‌ಈ ಖಾಯಿಲೆಯೊಂದಿಗೆ ಅನೇಕ ಮಾನಸಿಕ ಸಮಸ್ಯೆಗಳು ಪ್ರಾರಂಭವಾಗುತ್ತದೆ. ಆಲ್ಝೈಮರ್ಸ್ ಅಂದರೆ ಮರೆವಿನ ತೊಂದರೆಯಿಂದ ವ್ಯಕ್ತಿಗಳು ಅವರ ದಿನನಿತ್ಯದ ಕಲಸಗಳನ್ನು ಮರೆಯುವ ಹಂತಕ್ಕೂ ಹೋಗಬಹುದಾಗಿದೆ. ಮೆದುಳಿನಲ್ಲಿ ನೀರು ತುಂಬುವುದು, ಮೆದುಳಿನಲ್ಲಿ ಗೆಡ್ಡೆ ಬೆಳೆಯುವುದು, ವಿಟಮಿನ್ ಕೊರತೆ ಮತ್ತು ಮಾದಕ ವಸ್ತುಗಳ ಅತಿಯಾದ ಬಳಕೆ ಮಾಡಿದಲ್ಲಿ ಈ ಸಮಸ್ಯೆ ಹೆಚ್ಚು ಕಂಡು ಬರುತ್ತದೆ. ಆದರೆ ಈ ಮರೆವು ಕಾಯಿಲೆಯ ಬಗ್ಗೆ ಸಮಾಜದಲ್ಲಿ ಅರಿವಿನ ಕೊರತೆ ತುಂಬಾ ಇದೆ. ಮರೆವು ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದ್ದು, ಇದನ್ನು ಸುಧಾರಿಸಬಹುದಾಗಿದೆ. ಮತ್ತು ಅಂತಹ ವ್ಯಕ್ತಿಗಳಿಗೆ ಮನೆಯಲ್ಲಿ ಅವರ ದಿನಚರಿಯನ್ನು ನೆನಪಿಸುವುದು, ಹಳೆಯ ನೆನಪುಗಳನ್ನು ಮೆಲುಕು ಹಾಕಿಸುವುದು, ಅವರಿಗೆ ಧೈರ್ಯ ತುಂಬುವುದರ ಮೂಲಕ ಚಿಕಿತ್ಸೆಯನ್ನು ನೀಡಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಬಾಪೂಜಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮರೆವಿನ ಖಾಯಿಲೆಯು ಯಾವ ರೀತಿಯಾಗಿ ವೃದ್ದರನ್ನು ಕಾಡುತ್ತದೆ, ಅದು ಮೂಢನಂಬಿಕೆಯಾಗಿ ಹೇಗೆ ಬದಲಾಗುತ್ತದೆ ಹಾಗೂ ಮರೆವು ಕಾಯಿಲೆಗೆ ಸೂಕ್ತ ಚಿಕಿತ್ಸೆ ಹೇಗೆ ಪಡೆಯಬೇಕು ಎಂಬ ಮಾಹಿತಿಯನ್ನು ಒಂದು ನಾಟಕ ರೂಪದಲ್ಲಿ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಹೊಸನಗರದ ಬಟ್ಟೆಮಲ್ಲಪ್ಪದ ಮಲ್ಲಿಕಾರ್ಜುನ ಕಲಾ ತಂಡದ ಕಲಾವಿದರು ‘ಮರೆವು’ ಕಾಯಿಲೆ ಬಗ್ಗೆ ಜೋಗಿಪದ ಹೇಳುವ ಮೂಲಕ ಅರಿವು ಮೂಡಿಸಿದರು.

ಈ ಕಾರ್ಯಕ್ರಮವನ್ನು ಜೀವನ ಸಂಜೆ ವೃದ್ಧಾಶ್ರಮದ ಅಧ್ಯಕ್ಷರಾದ ಹಾಲಪ್ಪ ಉದ್ಘಾಟಿಸಿದರು. ಬಾಪೂಜಿ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ರಾಯ್ಚಲ್ ಶರಣನ್, ಶಿಕ್ಷರರಾದ ಸೌಮ್ಯ, ವೃದ್ಧಾಶ್ರಮದ ವೃದ್ದರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯವರು ಹಾಜರಿದ್ದರು.

Leave a Comment