ಅಕ್ರಮ ಮರಳು ಸಾಗಾಣಿಕೆ ವಿರುದ್ಧ ಕ್ರಮಕ್ಕೆ ಶಿವಮೊಗ್ಗ ಜಿಲ್ಲೆಯಾದ್ಯಂತ ಏಕರೀತಿಯ ನಿಯಮ ಜಾರಿ !

Written by malnadtimes.com

Published on:

SHIVAMOGGA ; ಅಕ್ರಮ ಗಣಿಗಾರಿಕೆ, ಸಾಗಾಣಿಕೆ, ದಾಸ್ತಾನು ಕುರಿತು ಜಿಲ್ಲೆಯಾದ್ಯಂತ ಏಕರೀತಿಯ ನಿಯಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಹೇಳಿದರು.

WhatsApp Group Join Now
Telegram Group Join Now
Instagram Group Join Now

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ನಿಯಮವನ್ನು ಜಾರಿಗೊಳಿಸಲು ಆಯಾ ತಾಲೂಕುಗಳ ತಹಶೀಲ್ದಾರರು ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ತಕ್ಷಣದ ಕ್ರಮಗಳನ್ನು ಕೈಗೊಳ್ಳಲು ಸಮಿತಿಯನ್ನು ರಚಿಸಿ, ವರದಿ ಪಡೆದು, ಸಕಾಲಿಕ ಕ್ರಮಗಳನ್ನು ಸೂಚಿಸಲಾಗಿದೆ ಎಂದರು.

ಅಕ್ರಮ ಗಣಿಗಾರಿಕೆ ಹಾಗೂ ಸ್ಥಳೀಯ ವಿರೋಧಗಳ ನಡುವೆಯೂ ಕ್ವಾರಿಗಳನ್ನು ನಡೆಸುತ್ತಿರುವ, ನಿಯಮ ಮೀರಿ ಕ್ವಾರಿಗಳನ್ನು ನಿರ್ವಹಿಸುತ್ತಿರುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳುವ ಪೂರ್ವದಲ್ಲಿ ಆಯಾ ಇಲಾಖೆಯ ಭೂವಿಜ್ಞಾನಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸುವಂತೆ ಅವರು ಸಲಹೆ ನೀಡಿದರು.

ಸರ್ಕಾರಿ ಇಲಾಖೆಗಳ ಕಟ್ಟಡ ನಿರ್ಮಾಣ, ಕಾಮಗಾರಿಗಳಿಗಾಗಿ ಮೀಸಲಿರಿಸಲಾದ ಕ್ವಾರಿಗಳಲ್ಲಿ ಬಳಸಲಾದ ಮರಳಿನ ಪ್ರಮಾಣವನ್ನು ಗಮನಿಸುವಂತೆ ಗಣಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, ಅಂತಹ ಕ್ವಾರಿಗಳಲ್ಲಿ ಮರಳನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಒಂದು ವೇಳೆ ಅಂತಹ ಪ್ರಮಾಣ ಎಸಗಿರುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಅನಿವಾರ್ಯವಾಗಲಿದೆ. ಅಲ್ಲದೇ ಗಣಿ ಇಲಾಖೆಯ ಅಧಿಕಾರಿಗಳು ಕ್ವಾರಿ ನಿಗಧಿಪಡಿಸಿದ ಇಲಾಖೆಯ ಅಧಿಕಾರಿಗಳು ಬಳಸಿದ ಮರಳಲಿನ ಪ್ರಮಾಣ ಹಾಗೂ ಸರ್ಕಾರಕ್ಕೆ ಸಲ್ಲಿಸಿದ ರಾಯಧನದ ಮಾಹಿತಿ ಪಡೆದುಕೊಳ್ಳುವಂತೆಯೂ ಜಿಲ್ಲಾಧಿಕಾರಿಗಳು ಸೂಚಿಸಿದರು.

ಈವರೆಗೆ ಸರ್ಕಾರದ ಇಲಾಖೆಗಳಿಗೆ ಕಾಯ್ದಿರಿಸಿದ ಕ್ವಾರಿಗಳಿಂದ ಮರಳನ್ನು ಪಡೆದ ಇಲಾಖೆಗಳ ಅಧಿಕಾರಿಗಳು ಎಂ-ಸ್ಯಾಂಡ್ ಬಳಸಿರುವ ಹಾಗೂ ಬಳಸದಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಸೂಚಿಸಿದ ಅವರು, ಮುಂದಿನ ದಿನಗಳಲ್ಲಿ ಕೋರಿಕೆಯ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅವರು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಖಾಸಗಿ ಸಂಸ್ಥೆಗಳ ಗುತ್ತಿಗೆದಾರರು ಪಡೆದಿರುವ ಕ್ವಾರಿಗಳಲ್ಲಿ ಬಳಸಿರುವ ಮರಳಿನ ಪ್ರಮಾಣದ ಹಾಗೂ ಸಲ್ಲಿಸಿರುವ ರಾಯಧನದ ಕುರಿತು ಮಾಹಿತಿ ಪಡೆದುಕೊಳ್ಳುವುದಲ್ಲದೇ ಜಿಲ್ಲಾ ಟಾಸ್ಕ್ ಫೋರ್ಸ್‌ನ ಅನುಮತಿಯಿಲ್ಲದೇ ನೆರೆಯ ಜಿಲ್ಲೆಗಳಿಗೆ ಸಾಗಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಸ್ಥಳೀಯ ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಅಥವಾ ಕೃತಕ ಅಭಾವ ಸೃಷ್ಠಿಸದಂತೆ ವಿಶೇಷ ಗಮನಹರಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಗಣಿಗಾರಿಕೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆಯಿಂದ ಒಟ್ಟು ರೂ.51.49ಗಳ ದಂಡ ವಸೂಲಿ ಮಾಡಲಾಗಿದೆ. ತೀರ್ಥಹಳ್ಳಿ ತಾಲೂಕು ಮೇಲಿನಕುರುವಳ್ಳಿ ಸರ್ವೇ ನಂ. 75, 38 ಮತ್ತು ಬುಕ್ಲಾಪುರ ಗ್ರಾಮದ ಸರ್ವೇ ನಂ.64ರಲ್ಲಿ ಮರುಕಳಿಸುತ್ತಿರುವ ಕಟ್ಟಡ ಕಲ್ಲಿನ ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆ ಹಾಗೂ ಸಾಗರ ತಾಲೂಕಿನ ಆನಂದಪುರ ಮತ್ತು ತಾಳಗುಪ್ಪ ಹೋಬಳಿ ವ್ಯಾಪ್ತಿಯ ಸರ್ಕಾರಿ ಜಮೀನುಗಳಲ್ಲಿ ಜಂಬಿಟ್ಟಿಗೆ ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆ ಕುರಿತು ಸ್ಥಳೀಯ ತಹಶೀಲ್ದಾರರ ಸಹಕಾರ ಪಡೆದು, ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಅಬ್ಬಲಗೆರೆ ಗ್ರಾಮ ಹಾಗೂ ಹುಣಸೋಡು ಮತ್ತಿತರ ಸುತ್ತಮುತ್ತಲ ಗ್ರಾಮಗಳ ವಸತಿ ಯೋಜನೆ ಮತ್ತು ಇನ್ನಿತರೆ ಉದ್ದೇಶಗಳಿಗೆ ಭೂಪರಿವರ್ತನೆ ಅಥವಾ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡದಂತೆ ಸ್ಥಳೀಯ ಜನಪ್ರತಿನಿಧಿಗಳು ಆಕ್ಷೇಪಣೆ ಸಲ್ಲಿಸಿದ್ದು, ಸಂಬಂಧಿಸಿದ ಇಲಾಖಾಧಿಕಾರಿಗಳು ಪರಿಶೀಲಿಸಿ ಸೂಕ್ತ ಕೈಗೊಳ್ಳುವಂತೆ ಅವರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಹಿರಿಯ ಭೂವಿಜ್ಞಾನಿ ಪಿ.ಕೆ.ನಾಯ್ಕ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment